Friday, November 20, 2026

ಪ್ರಾಯೋಗಿಕ ಆವೃತ್ತಿ

ಎಲ್ಲಾ ಸಮುದಾಯಗಳಿಗೆ ರಾಜಕೀಯ – ಸಾಮಾಜಿಕ ಸ್ಥಾನಮಾನ ನೀಡಿದ್ದು ಕಾಂಗ್ರೆಸ್: ಸತೀಶ್ ಜಾರಕಿಹೊಳಿ

ಕಾಂಗ್ರೆಸ್ ಪಕ್ಷ 70 ವರ್ಷಗಳ ಆಳ್ವಿಕೆಯಲ್ಲಿ ಎಲ್ಲಾ ಸಮುದಾಯಗಳಿಗೆ ರಾಜಕೀಯ ಹಾಗೂ ಸಾಮಾಜಿಕ ಸ್ಥಾನಮಾನ ನೀಡಿದೆ.ನೀರಾವರಿ,ಕೈಗಾರಿಕೆ, ಉದ್ಯೋಗ ಮತ್ತಿತರ ಅವಕಾಶಗಳು ಎಲ್ಲಾ ವರ್ಗದವರಿಗೂ ಸಿಗಲು ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ತಿಳಿಸಿದರು.

ಮಳವಳ್ಳಿ ಪಟ್ಟಣದ ಟಿಎಪಿಸಿಎಂಎಸ್ ಮುಂಭಾಗದ ಆವರಣದಲ್ಲಿ ಆಯೋಜನೆಗೊಂಡಿದ್ದ ಕಾಂಗ್ರೆಸ್ ಪಕ್ಷದ ಹಿಂದುಳಿದ ವರ್ಗಗಳ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು,ಬಿಜೆಪಿ ಸರ್ಕಾರ ಬೆಲೆಯೇರಿಕೆ ಮಾಡುವ ಮೂಲಕ ಜನರನ್ನು ಸಂಕಷ್ಟಕ್ಕೆ ದೂಡಿದೆ. ಅವೈಜ್ಞಾನಿಕ ಮೀಸಲಾತಿ ಜಾರಿ ಹಾಗೂ ಜನ ವಿರೋಧಿ ನೀತಿಗಳಿಂದ ಬೇಸತ್ತಿರುವ ರಾಜ್ಯದ ಮತದಾರರು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಲು ನಿರ್ಧರಿಸಿದ್ದು, ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತ ಪರ್ವದ ಮುನ್ಸೂಚನೆಯ ಗಾಳಿ ಬೀಸಲಾರಂಬಿಸಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಿದ್ದರಾಮಯ್ಯನವರ ಸರ್ಕಾರ ಎಲ್ಲಾ ವರ್ಗದ ಜನರಿಗೆ ನ್ಯಾಯ ದೊರಕಿಸಿಕೊಟ್ಟಿದೆ.ಕೇಂದ್ರದ ನರೇಂದ್ರ ಮೋದಿ ಹಾಗೂ ರಾಜ್ಯದ ಬೊಮ್ಮಾಯಿ ಸರ್ಕಾರದ ಆಳ್ವಿಕೆಯಲ್ಲಿ ದಿನನಿತ್ಯದ ಜನರ ಬದುಕು ದುಸ್ತರವಾಗಿದೆ.ರಾಜ್ಯದಲ್ಲಿ 2013ರಿಂದ 2018ರವರೆಗೆ ಅಧಿಕಾರ ನಡೆಸಿದ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರ ಸಮುದಾಯದ ಏಳಿಗೆಗೆ ಹಲವು ಯೋಜನೆಗಳನ್ನು ಸಾಕಾರಗೊಳಿಸಿತು. ಅದೇ ರೀತಿ ಇಂದಿರಾ ಗಾಂಧಿ, ದೇವರಾಜು ಆರಸು, ಬಂಗಾರಪ್ಪ ಮತ್ತು ಸಿದ್ದರಾಮಯ್ಯ ಅವರ ಕಾಲದ ಯೋಜನೆಗಳು ಜಾರಿಗೊಳ್ಳಲು ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಬೇಕೆಂದು ಕರೆ ನೀಡಿದರು.

ಬಿಜೆಪಿ ರ‍್ಕಾರದ ಅವಧಿಯಲ್ಲಿ 700 ರೂ ಮೌಲ್ಯದ ರಾಸಾಯನಿಕ ಗೊಬ್ಬರ 1800ರೂ.ಗೆ ಏರಿಕೆಯಾಗಿದೆ, ಗ್ಯಾಸ್ ಬೆಲೆ ದುಪ್ಪಟವಾಗಿದೆ, ಕುಡಿಯುವ ನೀರಿಗೆ ಮೀಟರ್ ಅಳವಡಿಕೆ, ಆಧಾರ್ ಲಿಂಕ್‌ಗೆ ಒಂದು ಸಾವಿರ ರೂ ಪಾವತಿಸಬೇಕಾದ ಅನಿವಾರ್ಯತೆ ಬಂದಿದೆ, ಇಂತಹ ಸರ್ಕಾರವನ್ನು ರಾಜ್ಯದ ಜನತೆ ಕಿತ್ತೊಗೆಯಬೇಕೆಂದು ಕರೆ ನೀಡಿದರು.

ಕಾಂಗ್ರೆಸ್ ಆಳ್ವಿಕೆಯಲ್ಲಿ ಸ್ತಾಪಿಸಿದ ಸರ‍್ವಜನಿಕ ಉದ್ದಿಮೆಗಳನ್ನು ಮೋದಿ ಸರ್ಕಾರ ಖಾಸಗೀಕರಣ ಮಾಡಿದೆ.ಬೆಂ-ಮೈಸೂರು ರಾಷ್ಟ್ರೀಯ ಹೆದ್ದಾರಿ, ಶಿವಮೊಗ್ಗ ಮತ್ತು ವಿಜಯಪುರ ವಿಮಾನ ನಿಲ್ದಾಣಗಳು ನಮ್ಮ ಸರ್ಕಾರದ ಕೊಡುಗೆಗಳಾಗಿದ್ದು, ಇವುಗಳನ್ನು ತಮ್ಮದೆ ಎಂದು ಬಿಂಬಿಸಿಕೊಳ್ಳಲು ಬಿಜೆಪಿ ಮುಖಂಡರು ಮುಂದಾಗಿದ್ದಾರೆಂದು ಲೇವಡಿ ಮಾಡಿದರು.

ಅನ್ಯಾಯ ಸರಿಪಡಿಸುವೆ ಗಂಗಾಮತಸ್ಥ ಜನಾಂಗವನ್ನು ಎಸ್‌ಟಿಗೆ ಸೇರಿಸುವ ಕುರಿತು ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ಬಳಿಕೆ ಜನಾಂಗದ ಶ್ರೀಗಳ ಜೊತೆ ಚರ್ಚಿಸಿ ಅನ್ಯಾಯ ಸರಿಪಡಿಸಲು ಮುಂದಾಗುತ್ತೇನೆಂದು ಭರವಸೆ ನೀಡಿದರು.

ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿರುವ ಪಿ.ಎಂ ನರೇಂದ್ರಸ್ವಾಮಿ ಗೆಲುವಿನಿಂದ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದ್ದು, ರಾಜ್ಯದ ಕಳೆದ 5 ವರ್ಷಗಳ ಅಭಿವೃದ್ದಿಯನ್ನು ಚರ್ಚೆ ಮಾಡಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕು. ಗಂಗಾಮತಸ್ಥ ಸಮುದಾಯದ ಏಳಿಗೆಗೆ ಶ್ರಮಿಸುತ್ತಿರುವ ನರೇಂದ್ರಸ್ವಾಮಿಯವರಿಗೆ ರಾಜಕೀಯ ಶಕ್ತಿ ತುಂಬಲು ಸಮಾಜದ ಮತದಾರರು ಮುಂದಾಗಬೇಕೆಂದು ಕಿವಿಮಾತು ಹೇಳಿದರು.

ಈ ಸಂದರ್ಭದಲ್ಲಿ ಜೆಡಿಎಸ್ ಪಕ್ಷದ ಮುಖಂಡರಾಗಿದ್ದ ಪುರಸಭೆ ಮಾಜಿ ಅಧ್ಯಕ್ಷ ದೊಡ್ಡಯ್ಯ ಅವರು ಜೆಡಿಎಸ್ ಪಕ್ಷ ತ್ಯಜಿಸಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.

ಕೆಪಿಸಿಸಿ ಉಪಾಧ್ಯಕ್ಷ ಪಿ.ಎಂ.ನರೇಂದ್ರಸ್ವಾಮಿ,ಜಿ.ಪಂ.ಮಾಜಿ ಸದಸ್ಯ ಹೊನ್ನನಾಯಕ, ಯಶೋಧಮ್ಮ, ತಾ.ಪಂ.ಮಾಜಿ ಅಧ್ಯಕ್ಷ ಮಹದೇವು,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಲ್ಕುಣಿ ದೇವರಾಜ್ ಮತ್ತಿತರರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ