ಮಕ್ಕಳು ಜ್ಞಾನವಂತರಾದರೆ ಸಾಲದು. ಪ್ರತಿಭಾವಂತರೂ ಗುಣವಂತರೂ ಆಗಬೇಕು. ಆಗ ಮಾತ್ರ ಆರೋಗ್ಯಪೂರ್ಣ ಸಮಾಜ ಬಯಸುವಂತಹ ಸತ್ಪ್ರಜೆಗಳಾಗಲು ಸಾಧ್ಯ ಎಂದು ಜಿಲ್ಲಾ ಸರ್ಕಾರಿ ನೌಕರರ ಸಂಘದ ನಿರ್ದೇಶಕ ಹಾಗೂ ಸಾಹಿತಿ ಟಿ. ಸತೀಶ್ ಜವರೇಗೌಡ ನುಡಿದರು.
ಮೈಸೂರು ತಾಲ್ಲೂಕಿನ ಮೆಲ್ಲಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ‘ಮಕ್ಕಳ ದಿನಾಚರಣೆ’ಯಲ್ಲಿ ಮಾತನಾಡಿದ ಅವರು, ಮಕ್ಕಳ ಸರ್ವತೋಮುಖ ವಿಕಾಸಕ್ಕಾಗಿ ಶಿಕ್ಷಣದ ಹಕ್ಕಿನ ಜೊತೆಗೆ ಹಲವು ಹಕ್ಕುಗಳನ್ನು ನೀಡಲಾಗಿದ್ದು, ಹಕ್ಕು ಮತ್ತು ಅವಕಾಶಗಳನ್ನು ಬಳಸಿಕೊಂಡು ಮೌಲ್ಯಯುತ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು ಎಂದರು.

ಸರ್ಕಾರವು ‘ಮಕ್ಕಳ ಬದುಕು ಸದಾ ಸಂತಸದಾಯಕತೆಯಿಂದ ಕೂಡಿರಬೇಕು’ ಎಂಬ ಸದಾಶಯದಿಂದ, ಮಕ್ಕಳಿಗಾಗಿ ಉತ್ತಮ ಶೈಕ್ಷಣಿಕ ಪರಿಸರದ ಜೊತೆಗೆ ಕ್ರೀಡಾ ಸಾಂಸ್ಕೃತಿಕ ಮತ್ತು ಸಾಹಿತ್ಯದ ಚಟುವಟುಕೆಗಳನ್ನು ಶಾಲಾ ದೈನಂದಿನ ಕಲಿಕೆಯ ಭಾಗವಾಗಿಸಿದೆ. ಜೊತೆಗೆ ಪೌಷ್ಠಿಕ ಆಹಾರವನ್ನೂ ನೀಡುತ್ತಿದೆ. ಇದರ ಸದ್ಬಳಕೆ ಮಾಡಿಕೊಂಡು ಹೂವಿನಂತೆ ಸದಾ ಅರಳಬೇಕು ಎಂದು ಹೇಳಿದರು.
ಮುಖ್ಯ ಶಿಕ್ಷಕಿ ಪಿ.ಎನ್. ವೀಣಾ ಮಾತನಾಡಿ, ಶಿಕ್ಷಕರು ವಿದ್ಯಾರ್ಥಿಗಳ ಶ್ರೇಯಸ್ಸಿಗೆ ಶ್ರಮಿಸಬೇಕು. ಪೋಷಕರು ಸಹ ತಮ್ಮ ಮಕ್ಕಳ ಕಲಿಕೆಗೆ ಪ್ರೋತ್ಸಾಹ ನೀಡಬೇಕು. ಈ ಎಲ್ಲಾ ನೆರವಿನಿಂದ ವಿದ್ಯಾರ್ಥಿಗಳು ಪಠ್ಯದ ಕಲಿಕೆಯ ಜೊತೆಗೆ ಸಾಂಸ್ಕೃತಿಕ ಚಟುವಟಿಕೆಗಳಲ್ಲೂ ತೊಡಗಬೇಕು. ಶಾಲೆಗೆ ಸಕ್ರಿಯವಾಗಿ ಬರುವಂತಾಗಬೇಕು ಎಂದು ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ಶಿಶುಗೀತೆ ಗಾಯನ, ಕವನ ವಾಚನ, ಶುದ್ಧ ಕೈಬರಹ, ರಸಪ್ರಶ್ನೆ ಮೊದಲಾದ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಬಳಿಕ ಮಕ್ಕಳಿಂದ ಗೀತಗಾಯನ, ನಾಟಕ ಹಾಗೂ ನೃತ್ಯ ಕಾರ್ಯಕ್ರಮಗಳು ಜರುಗಿದವು. ಮಕ್ಕಳ ದಿನಾಚರಣೆಯ ಪ್ರಯುಕ್ತ ವಿಶೇಷ ಸಿಹಿ ಭೋಜನ ಉಣಬಡಿಸಲಾಯಿತು.
ವೇದಿಕೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕ ಶಶಿಧರ್, ಸಂಗೀತ ಶಿಕ್ಷಕಿ ಶ್ರೀದೇವಿ, ಶಿಕ್ಷಕಿಯರಾದ ಕಲ್ಪನಾ, ಎನ್.ಆರ್. ಸುಜಾತ, ಪಿ.ಎಲ್. ಭಾಗ್ಯ, ಬಿ.ಎಂ. ಸರಸ್ವತಿ, ಕೆ. ವಸಂತಲಕ್ಷ್ಮಿ, ಶಿಕ್ಷಕರಾದ ಮಹಮ್ಮದ್ ಸುಹೇಲ್, ರಂಗಸ್ವಾಮಿ, ಅತಿಥಿ ಶಿಕ್ಷಕಿಯರಾದ ಟಿ.ಎಂ. ರೂಪ, ಸುಜಾತ ಉಪಸ್ಥಿತರಿದ್ದರು.




