Thursday, November 19, 2026

ಪ್ರಾಯೋಗಿಕ ಆವೃತ್ತಿ

ಮನುವಾದದ ಅನಿಷ್ಟ ಪದ್ದತಿಗಳ ವಿರುದ್ದ ದನಿ ಎತ್ತಿದವರು ಸಾವಿತ್ರಿ ಬಾಯಿಫುಲೆ : ಮಹಿಳಾ ಮುನ್ನಡೆಯ ಪೂರ್ಣಿಮ

ಮಹಿಳೆಯರ ಶಿಕ್ಷಣ ಮತ್ತು ಮನುವಾದದ ಅನಿಷ್ಟ ಪದ್ದತಿಗಳ ವಿರುದ್ದ ದನಿ ಎತ್ತಿದವರು ಸಾವಿತ್ರಿ ಬಾಯಿಫುಲೆ ಎಂದು ಮಹಿಳಾ ಮುನ್ನಡೆಯ ಮುಖಂಡರಾದ ಪೂರ್ಣಿಮ ತಿಳಿಸಿದರು.

ಮಂಡ್ಯದ ಲೇಬರ್ ಕಾಲೋನಿಯಲ್ಲಿ ಕರ್ನಾಟಕ ವಿದ್ಯಾರ್ಥಿ ಸಂಘಟನೆ ಹಾಗೂ ಮಹಿಳಾ ಮುನ್ನಡೆ ಸಂಘಟನೆಯ ವತಿಯಿಂದ ಸಾವಿತ್ರಿಬಾಯಿ ಫುಲೆ ಮತ್ತು ಫಾತೀಮಾ ಶೇಕ್ ರವರ ಜನ್ಮದಿನವನ್ನು ಉದ್ದೇಶಿಸಿ ಅವರು ಮಾತನಾಡಿದರು.  ಇದೇ ಸಂದರ್ಭದಲ್ಲಿ ಪಾತೀಮಾ ಶೇಕ್ ರವರನ್ನು ನೆನೆಯುತ್ತಾ ಇಬ್ಬರೂ ಅಕ್ಷರದ ಅವ್ವಂದಿರನ್ನು ಸ್ಮರಿಸಿದರು.

ಸಾವಿತ್ರಿ ಬಾಯಿಫುಲೆ, ಜನವರಿ 3 1831 ರಲ್ಲಿ ಮಹಾರಾಷ್ಟ್ರದ ಸತಾರ ಜಿಲ್ಲೆಯಲ್ಲಿ ಫುಲೆ ಲಕ್ಷಿ ಮತ್ತು ಖಂಡೋಜಿ‌ ನೆವೇಶೆ ಪಾಟಿಲ್ ರ ಹಿರಿಯ ಮಗಳಾಗಿ ಜನಿಸಿದರು. ಸುಮಾರು‌ 9 ನೇ ವಯಸ್ಸಿಗೆ 13 ವರ್ಷದ ಜ್ಯೋತಿ ಬಾ ರವರ ಜೊತೆಗೆ ವಿವಾಹವಾಗಿತ್ತು. ಜ್ಯೋತಿ ಬಾರವರು ಸ್ಕಾಟೀಷ್ ಮಿಷನರಿ ಶಾಲೆಯಲ್ಲಿ ವಿದ್ಯಾಭ್ಯಾಸವನ್ನು ಪಡೆದವರಾಗಿದ್ದರಿಂದ 18 ಮತ್ತು 19 ನೇ ಶತಮಾನದಲ್ಲಿ ಹೆಣ್ಣು ಮಕ್ಕಳ ಮೇಲೆ ನಡೆಯುತ್ತಿದ್ದ ದಮನಗಳ‌ ಅರಿವಿತ್ತು ಅವರಿಗೆ ಎಂದು ತಿಳಿಸಿದರು.

ಹಾಗಾಗಿ ಹೆಣ್ಣು ಮಕ್ಕಳಿಗೂ ಶಿಕ್ಷಣ ಎಂಬುದು ಬಹಳ ಅಗತ್ಯ ಎಂಬುದನ್ನು ಮನಗಂಡಿದ್ದ ಜ್ಯೋತಿ ಬಾ ರವರು, ಸಾವಿತ್ರಿ ಬಾಯಿಯವರನ್ನು ವಿವಾಹವಾದ ನಂತರ ತಮ್ಮ ದಾಂಪತ್ಯ ಜೀವನದ ಸುಖದ ಅಭಿಲಾಶೆಗೆ ಹೆಚ್ಚು ಒತ್ತುಕೊಡದೆ, ಮನೆಯ ಕೆಲಸಕ್ಕೆ ಅವರನ್ನು ಸೀಮಿತಗೊಳಿಸದೆ ತಾವೇ ಮೊದಲ ಗುರುವಾಗಿ ಸಾವಿತ್ರಿಯವರಿಗೆ ವಿದ್ಯೆ ಕಲಿಸಿದರು ಎಂದು ತಿಳಿಸಿದರು.

ನಂತರದ ದಿನಗಳಲ್ಲಿ ಎರಡು ಶಿಕ್ಷಕ ತರಬೇತಿಗಳನ್ನು ಪಡೆದರು. ಅದೇ ಸಂದರ್ಭದಲ್ಲಿ ಪಾತೀಮಾ ಶೇಕ್ ರವರ ಪರಿಚಯವಾಗಿತ್ತು. ಸಾವಿತ್ರಿ ಬಾಯಿರವರು ಮಹಾರಾಷ್ಟ್ರದಲ್ಲಿ ಮೊದಲ ಮಹಿಳಾ ಶಿಕ್ಷಕಿಯಾದರೆ, ಮುಸ್ಲಿಂ ಸಮುದಾಯದ ಮೊದಲ ಶಿಕ್ಷಕಿಯಾಗಿ ಪಾತೀಮಾ ಶೇಕ್ ಅವರ ಜೊತೆಯಾಗಿದ್ದರು ಎಂದರು.

ದಂಪತಿಗಳು ಜೊತೆಯಾಗಿ ಹೆಣ್ಣು ಮಕ್ಕಳಿಗೆ ವಿದ್ಯೆಕಲಿಸುವಲ್ಲಿ ಬಂದ ಸವಾಲುಗಳನ್ನು ಸ್ವೀಕರಿಸಿದರು.  ಮನುವಾದಿಗಳಿಗೆ ಹೆದರಿ ಕೊನೆಗೆ ತಮ್ಮ ಕುಟುಂಬದಿಂದಲೇ ಹೊರ ಹಾಕಲ್ಪಟ್ಟ ಸಂಧರ್ಭದಲ್ಲಿ ಜ್ಯೋತಿ ಬಾರವರ ಸ್ನೇಹಿತ ಮಿಯಾನ್ ಉಷ್ಮಾನ್ ಶೇಕ್ ರವರ ಮನೆಯಲ್ಲಿ ಆಶ್ರಯ ಪಡೆದು ಅಲ್ಲಿಯೇ ಮಹಿಳೆಯರಿಗೆ ಪಾಠ ಶಾಲೆಗಳನ್ನು ತೆರೆದಿದ್ದರು ಎಂದು ಮಹಿಳಾ ಮುನ್ನಡೆಯ ಮುಖಂಡರಾದ ಪೂರ್ಣಿಮ  ಮಾತನಾಡಿದರು.

1851 ರ ಹೊತ್ತಿಗೆ 3 ಶಾಲೆಗಳನ್ನು ತೆರೆದಿದ್ದು ಆ ಹೊತ್ತಿಗೆ 150 ಹೆಣ್ಣು ಮಕ್ಕಳು ವಿದ್ಯಾಭ್ಯಾಸವನ್ನು ಮಾಡುತ್ತಿದ್ದರು. ಮುಂದೆ ಸಾವಿತ್ರಿಬಾಯಿ ರವರು ಸುಮಾರು 18 ಶಾಲೆಗಳನ್ನು ತೆರೆದು ವಿವಿಧ ಜಾತಿಗಳ ಮಕ್ಕಳಿಗೆ ಕಲಿಸಿದರು. ಸಾವಿತ್ರಿಬಾಯಿ ಮತ್ತು ಫಾತಿಮಾ ಶೇಖ್ ಅವರು ಮಹಿಳೆಯರಿಗೆ ಮತ್ತು ದೀನದಲಿತರಿಗೆ ಮತ್ತು  ಇತರ ಜಾತಿಗಳ ಸಮುದಾಯಗಳಿಗೆ ವಿದ್ಯೆ ಕಲಿಸಲು ಪ್ರಾರಂಭಿಸಿದರು.

ದಲಿತರ ಶಿಕ್ಷಣದ ವಿರುದ್ಧವಿದ್ದ ಅದರಲ್ಲೂ ವಿಶೇಷವಾಗಿ ಪುಣೆಯ ಮೇಲ್ಜಾತಿಯವರು ಇದನ್ನು ವಿರೋಧಿಸಿ ಸಾವಿತ್ರಿಬಾಯಿ ಮತ್ತು ಫಾತಿಮಾ ಶೇಖ್ ರವರ ವಿರುದ್ದ ಬೆದರಿಕೆ ಹಾಕಿದ್ದರು. ಅದಲ್ಲದೇ,  ಸಾಮಾಜಿಕವಾಗಿ ಕಿರುಕುಳ ಮತ್ತು ಅವಮಾನ ಮಾಡಿದ್ದರಲ್ಲದೆ,ಸಾವಿತ್ರಿಬಾಯಿ ಶಾಲೆಯತ್ತ ಹೆಜ್ಜೆ ಹಾಕಿದಾಗ ಹಸುವಿನ ಸಗಣಿ, ಮಣ್ಣು, ಕಲ್ಲುಗಳನ್ನು ಎಸೆಯುತ್ತಿದ್ದರು. ಆದಾಗ್ಯೂ, ಅಂತಹ ದೌರ್ಜನ್ಯಗಳು ತನ್ನ ಗುರಿಯಿಂದ ದೃಢನಿಶ್ಚಯದ ಸಾವಿತ್ರಿಬಾಯಿಯನ್ನು ನಿರುತ್ಸಾಹಗೊಳಿಸಲು ಸಾಧ್ಯವಾಗಲಿಲ್ಲ. ಸಾವಿತ್ರಿಬಾಯಿ ಅವರು  ಎರಡು ಸೀರೆಗಳನ್ನು ಕೊಂಡೊಯ್ಯುತ್ಯಿದ್ದು ಶಾಲೆಗೆ ತೆರಳಿದ ನಂತರ ಸೀರೆ ಬದಲಿಸಿ ಮಕ್ಕಳಿಗೆ ಪಾಠ ಮಾಡುತ್ತಿದ್ದರು ಎಂದರು.

ಸಾವಿತ್ರಿಬಾಯಿ ಮತ್ತು ಫಾತಿಮಾ ಶೇಖ್ ರವರು ಜೊತೆಯಾಗಿ ಮಹಿಳೆಯರ ಶಿಕ್ಷಣಕ್ಕಾಗಿ ಮತ್ತು ಮನುವಾದದ ಹಲವು ಅನಿಷ್ಟ ಪದ್ದತಿಗಳಾದ ವಿಧವಾ ಪದ್ದತಿ, ಸತಿ ಸಹಗಮನ ಬಾಲ್ಯ ವಿವಾಹದಂತಹ ಅನಿಷ್ಟ ಪದ್ದತಿಗಳ ವಿರುದ್ದ ಧ್ವನಿ ಎತ್ತಿದವರು. ಬ್ರಾಹ್ಮಣರ ವಿದವಾ ಗರ್ಭಿಣಿ ಮಹಿಳೆಯರಿಗೆ ಆಶ್ರಯ ತಾಣಗಳನ್ನು ತೆರೆದು ಅವರ ಮಕ್ಕಳನ್ನು ಪೋಷಿಸುತ್ತಿದ್ದರು ಎಂದು ತಿಳಿಸಿದರು.

ಅದರಲ್ಲೂ 19 ನೇ ಶತಮಾನದ ಇತಿಹಾಸದಲ್ಲಿ ಮದುವೆಗಳನ್ನು ಪೂಜಾರಿಗಳಿಲ್ಲದೆ ನೆರವೇರಿಸಿದ್ದು ಒಂದು ಕ್ರಾಂತಿಕಾರಿ ಹೋರಾಟವಾಗಿದೆ. ಈ ಸಂದರ್ಭದಲ್ಲಿ ಬ್ರಾಹ್ಮಣರ ಅಧಿಪತ್ಯವಿಲ್ಲದ ಮದುವೆಗಳನ್ನು ಏರ್ಪಡಿಸಿದ್ದರು. ಅಲ್ಲದೆ ಮೊಟ್ಟ ಮೊದಲ ಬಾರಿ ಕಾನೂನಿನ ನೆರವನ್ನು ಪಡೆದು ವಿವಾಹ ಮಾಡಿದ್ದು, ಅಂದಿನ ಕಾಲಘಟ್ಟದಲ್ಲಿ ಬ್ರಾಹ್ಮಣ್ಯವನ್ನು ಶೋಷಿತರ ಪರವಾಗಿ ನಿಂತು ಎದುರಿಸಿದ ಅವರ ದಿಟ್ಟತನಕ್ಕೆ ಸಾಕ್ಷಿಯಾಗುತ್ತದೆ ಎಂದು ಮಾತಮಾಡಿದರು.

ಇದೆ ಜನವರಿ 9 -1831 ಪಾತೀಮಾ ಶೇಕ್ ರವರ ಜನ್ಮದಿನ. ಮಹಿಳೆಯರಿಗೆ ಶೋಷಿತರಿಗೆ ಅಕ್ಷರ ಕಲಿಸಲು ಶ್ರಮಿಸಿದ ಇಬ್ಬರು ಮಾತೆಯರನ್ನ ಸ್ಮರಿಸುವುದು ಬಹಳ ಮುಖ್ಯ. ಹಾಗಾಗಿ ಅವರ ಜನ್ಮದಿನವನ್ನು ಜಾತಿ, ಧರ್ಮದ ಬೇಧ ಮರೆತು ಒಗ್ಗೂಡಿ ಆಚರಿಸುತ್ತಾ, ಅವರು ಹಾಕಿಕೊಟ್ಟ ಮಾರ್ಗದಲ್ಲಿ ಮನುವಾದಿಗಳಿಗೆ ಬಗ್ಗದೆ ಮುಂದೆ ಸಾಗುವ ಹೊಣೆ ನಮ್ಮ ಮೇಲಿದೆ ಎಂದು ಮಹಿಳಾ ಮುನ್ನಡೆಯ ಪೂರ್ಣಿಮಾ ರವರು ಸೇರಿದ್ದ ಮಹಿಳೆಯರ ಕುರಿತು ಮಾತನಾಡಿದರು.

ಇದೇ ಸಂದರ್ಭದಲ್ಲಿ ಮಹಿಳಾ ಮುಖಂಡರಾದ ಮೆಹರ್ ತಾಜ್, ಮಹಿಳಾ ಮುನ್ನಡೆಯ ಶಿಲ್ಪ ಹಾಗೂ ಹಲವು ಹೆಣ್ಣು ಮಕ್ಕಳು ಸಿಹಿ ಹಂಚಿ ಜೊತೆಯಾಗಿ ಸಾವಿತ್ರಿಬಾಯಿ ಫುಲೆ ಮತ್ತು ಪಾತೀಮಾ ಶೇಕ್ ರವರ ಜನ್ಮ ದಿನವನ್ನು ಆಚರಿಸಿದರು.

ಮಂಡ್ಯದ ಆರ್ ಟಿ ಓ ಕಚೇರಿ ಬಳಿ ಇರುವ ಕಾಳಪ್ಪ ಬಡಾವಣೆಯಲ್ಲಿಯೂ ಕೂಡ ಕರ್ನಾಟಕ ವಿದ್ಯಾರ್ಥಿ ಸಂಘಟನೆಯ ಮಕ್ಕಳು ಸೇರಿ ಸಾವಿತ್ರಿ ಬಾಯಿಫುಲೆ ಮತ್ತು ಪಾತೀಮಾ ಶೇಕ್ ರವರ ಜನ್ಮ ದಿನಾಚರಣೆಯನ್ನು ಪುಷ್ಪಾರ್ಚೆನೆಯ ಮೂಲಕ ಆಚರಿಸಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಯುವಜನರು ಹಾಗೂ ಹೆಣ್ಣು ಮಕ್ಕಳು ಅವರ ಜೀವನದ ದಿಟ್ಟ ಮಾರ್ಗಗಳನ್ನು ಸ್ಮರಿಸಿದರು.

ಈ ಸಂದರ್ಭದಲ್ಲಿ ಮಹಿಳಾ ಮುನ್ನಡೆಯ ಅಂಜಲಿ ಮಾತನಾಡುತ್ತಾ ಸಾವಿತ್ರಿಬಾಯಿ ಮತ್ತು ಪಾತೀಮಾರ  ಮಹತ್ವ ಕುರಿತು ಮತ್ತು ಅವರ ಜೀವನದ ಪರಿಶ್ರಮಗಳನ್ನು ಮಕ್ಕಳಿಗೆ ತಿಳಿಸಿದರು.

ಈ ಸಂದರ್ಭದಲ್ಲಿ ಕರ್ನಾಟಕ ವಿದ್ಯಾರ್ಥಿ ಸಂಘಟನೆಯ ರಶ್ಮಿ, ಅರ್‍ಮುಗಂ, ನಂದಕಿಶೋರ, ಸಹನಾ, ಉದಯ್, ಶೃಜನ್,ಉಲ್ಲಾಸ್, ನಿತ್ಯಾ ಸೇರಿದಂತೆ ಮುಂತಾದವರು ಭಾಗವಹಿಸಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ