ಸ್ಕಿಜೊಫ್ರೇನಿಯಾ ಒಂದು ಮಾನಸಿಕ ಕಾಯಿಲೆಯಾಗಿದ್ದು,ಈ ಕಾಯಿಲೆ ಬಂದವರನ್ನು ಹೆಚ್ಚಿನ ಜಾಗ್ರತೆಯಿಂದ ಆರೈಕೆ ಮಾಡುವು ಅಗತ್ಯ ಎಂದು ಮಂಡ್ಯ ಜಿಲ್ಲಾ ಮಾನಸಿಕ ಹಾಗೂ ಆರೋಗ್ಯ ಕಾರ್ಯಕ್ರಮದ ಕ್ಲಿನಿಕಲ್ ಸೈಕಲಾಜಿಸ್ಟ್ ಮಹಮದ್ ಸುಹೇಲ್ ತಿಳಿಸಿದರು.
ಪಾಂಡವಪುರ ಪಟ್ಟಣದ ಸಾರ್ವಜನಿಕ ಉಪ ವಿಭಾಗೀಯ ಆಸ್ಪತ್ರೆಯಲ್ಲಿ ಜಿಲ್ಲಾ ಪಂಚಾಯತಿ, ಜಿಲ್ಲಾಡಳಿತ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಆರೋಗ್ಯ ಸಂಘ (ಮಾನಸಿಕ ವಿಭಾಗ), ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಅಡಿಯಲ್ಲಿ ಆಯೋಜಿಸಿದ್ದ “ವಿಶ್ವ ಸ್ಕಿಜೋಫ್ರೇನಿಯಾ ದಿನಾಚರಣೆ – 2022” ಭರವಸೆಯನ್ನು ಬೆಸೆಯೋಣ ಎಂಬ ಸಂದೇಶದೊಂದಿಗೆ ಆರೋಗ್ಯ ಇಲಾಖೆ ಸಿಬ್ಬಂದಿ ವರ್ಗ ಹಾಗೂ ಆಶಾ ಕಾರ್ಯಕರ್ತೆಯರಿಗೆ ನಡೆದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸ್ಕಿಜೋಫ್ರೀನಿಯಾ ಕಾಯಿಲೆಯೆಂದರೆ ಅದೊಂದು ತೀವ್ರತರವಾದ ಮಾನಸಿಕ ಕಾಯಿಲೆ.ಮನುಷ್ಯನಲ್ಲಿರುವ ತಪ್ಪು ಕಲ್ಪನೆಗಳು ಹಾಗೂ ಮೂಢನಂಬಿಕೆಗೆ ಈ ಕಾಯಿಲೆ ಸಾಮ್ಯತೆ ಹೊಂದಿದೆ ಎಂದು ತಿಳಿಸಿದರು.
ಸ್ಕಿಜೋಫ್ರೇನಿಯಾ ಬಂದವರನ್ನು ಆಡುಭಾಷೆಯಲ್ಲಿ ಹುಚ್ಚ ಎಂದು ಕರೆಯುತ್ತಾರೆ. ಸಿಜೊಫ್ರೇನಿಯಾ ರೋಗದ ಲಕ್ಷಣಗಳು ಅತಿಯಾಗಿ ಸಂಶಯಪಡುವುದು, ಮೂಢನಂಬಿಕೆ,ಶೋಷಣೆ ಮೊದಲಾದ ಕಾರಣಗಳಿಂದ ಉಂಟಾಗುತ್ತದೆ. ಈ ಕಾಯಿಲೆ ಬಂದವರು ಹೆಚ್ಚು ಆತ್ಮಹತ್ಯೆಗೆ ಶರಣಾಗುವ ಸಂಭವ ಹೆಚ್ಚು. ಮಾನಸಿಕ ರೋಗದಿಂದ ಪ್ರತಿವರ್ಷ ಆತ್ಮಹತ್ಯೆ ಮಾಡಿಕೊಳ್ಳುವವರಲ್ಲಿ ವಿದ್ಯಾವಂತರ ಸಂಖ್ಯೆಯೇ ಹೆಚ್ಚು ಎಂದರು.
ಮಾನಸಿಕ ಕಾಯಿಲೆಗೆ ತುತ್ತಾದವರನ್ನು ಅತಿಹೆಚ್ಚು ಜಾಗ್ರತೆಯಿಂದ ನೋಡಿಕೊಳ್ಳಬೇಕು.ಆಗಾಗ್ಗೆ ಆಪ್ತಸಮಾಲೋಚನೆ ಮಾಡಬೇಕು. ಸತತ ಸಮಾಲೋಚನೆ ಮಾಡುವುದರಿಂದ ಈ ರೋಗದಿಂದ ಹೊರತರಬಹುದು ಎಂದರು.
ಪಾಂಡವಪುರ ತಾಲ್ಲೂಕು ಆರೋಗ್ಯಾಧಿಕಾರಿ ಕಚೇರಿಯ ಹಿರಿಯ ಮೇಲ್ವಿಚಾರಕ ಪುಟ್ಟಸ್ವಾಮಿ, ವಿಜಯಕುಮಾರ್ ಸೇರಿದಂತೆ ದಾದಿಯರು,ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದರು.