ಸ್ಕೂಟರ್ ಗೆ ಕಾರೊಂದು ಢಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಸವಾರ ತೀವ್ರವಾಗಿ ಗಾಯಗೊಂಡು ಮಂಡ್ಯ ಜಿಲ್ಲಾ ಆಸ್ಪತ್ರೆಯಲ್ಲಿ ಮೃತಪಟ್ಟಿರುವ ಘಟನೆ ಇಂದು ಸಂಜೆ 4 ಗಂಟೆ ಸುಮಾರಿಗೆ ಮಂಡ್ಯ ನಗರದ ಕಲ್ಲಹಳ್ಳಿ ಬಳಿ ಸಂಭವಿಸಿದೆ.
ಮಂಡ್ಯ ನಗರದ ಕಲ್ಲಹಳ್ಳಿ ಬಳಿ ಇರುವ ಬಿಸಿಲು ಮಾರಮ್ಮ ದೇವಸ್ಥಾನದ ಮುಂಭಾಗ ಈ ಅಪಘಾತ ಸಂಭವಿಸಿದ್ದು, ಸಿದ್ದಯ್ಯನ ಕೊಪ್ಪಲು ಗ್ರಾಮದ ತೆಂಗಿನಕಾಯಿ ವ್ಯಾಪಾರಿ ಸತೀಶ್ (40) ತೀವ್ರ ಗಾಯಗೊಂಡು ಮೃತ ಪುಟ್ಟ ದುರ್ದೈವಿ.
ಇಂದು ಸಂಜೆ 4 ಗಂಟೆ ಸುಮಾರಿಗೆ ಬೆಂಗಳೂರಿನ ಕಡೆಯಿಂದ ಮೈಸೂರಿನ ಕಡೆಗೆ ತೀವ್ರ ವೇಗವಾಗಿ ಚಲಿಸುತ್ತಿದ್ದ ಹ್ಯುಂಡೈ ಐ 20 ಕಾರು ಹೋಂಡಾ ಆಕ್ಟಿವಾ ಸ್ಕೂಟರ್ ಗೆ ಬಲವಾಗಿ ಢಿಕ್ಕಿ ಹೊಡೆದಿದೆ. ವೇಗ ಎಷ್ಟಿತ್ತೆಂದರೆ ಢಿಕ್ಕಿ ಹೊಡೆದ ರಭಸಕ್ಕೆ ಕಾರು ಪಕ್ಕದಲ್ಲಿದ್ದ ಬಿಸಿಲು ಮಾರಮ್ಮ ದೇವಸ್ಥಾನದ ಕಾಂಪೌಂಡ್ ಗೆ ಢಿಕ್ಕಿಯಾಗಿ ದೇವಸ್ಥಾನದೊಳಗೆ ನುಗ್ಗಿದೆ. ಕಾರಿನಲ್ಲಿ ಏರ್ ಬ್ಯಾಗ್ ಇದ್ದದ್ದರಿಂದ ಕಾರಿನಲ್ಲಿದ್ದ ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿ ಅಪಾಯದಿಂದ ಪಾರಾಗಿದ್ದಾರೆ.
ಕಾರಿನಲ್ಲಿದ್ದವರೇ ತೀವ್ರವಾಗಿ ಗಾಯಗೊಂಡಿದ್ದ ಸತೀಶನನ್ನು ಆಸ್ಪತ್ರೆಗೆ ಸಾಗಿಸಿದರೂ ಆತ ಬದುಕುಳಿಯಲಿಲ್ಲ. ಎಸ್ ಪಿ ಇತ್ತ ಗಮನ ಹರಿಸಲಿ ಕಲ್ಲಹಳ್ಳಿಯ ಬಳಿ ಇರುವ ಬಿಸಿಲು ಮಾರಮ್ಮ ದೇವಸ್ಥಾನದ ಪಕ್ಕದ ಬಿಲ್ಡಿಂಗ್ ನಲ್ಲಿ ಒಂದು ವೈನ್ ಸ್ಟೋರ್ ಇದೆ. ಇಲ್ಲಿಂದ ಮದ್ಯ ಸೇವಿಸಿ ಬರುವ ಹಲವರು ಕುಡಿದು ಚಿತ್ತಾಗಿ ಅಪಘಾತದಲ್ಲಿ ಮೃತಪಟ್ಟಿರುವ ಘಟನೆ ಸಾಕಷ್ಟು ನಡೆದಿದೆ. ಕಳೆದ 20 ವರ್ಷಗಳಲ್ಲಿ 15ಕ್ಕೂ ಹೆಚ್ಚು ಜನ ಈ ಜಾಗದಲ್ಲಿ ಆಕ್ಸಿಡೆಂಟ್ ಆಗಿ ಮೃತ ಪಟ್ಟಿದ್ದಾರೆ.
ಈ ಕಾರಣದಿಂದ ಮಂಡ್ಯ ಎಸ್ಪಿ ಎನ್.ಯತೀಶ್ ರವರು ಈ ಬಗ್ಗೆ ಗಮನಹರಿಸಿ ವೈನ್ ಸ್ಟೋರ್ ಎತ್ತಂಗಡಿ ಮಾಡಿಸ ಬೇಕೆಂಬುದು ಕಲ್ಲಹಳ್ಳಿ ನಿವಾಸಿಗಳ ಮನವಿ.
ಅಬಕಾರಿ ಇಲಾಖೆ ಕೂಡ ಈ ಬಗ್ಗೆ ಗಮನಹರಿಸಿ ವೈನ್ ಸ್ಟೋರ್ ಸ್ಥಳಾಂತರ ಮಾಡಿಸಬೇಕೆಂದು ಇಲ್ಲಿನ ನಿವಾಸಿಗಳ ಒತ್ತಾಯ.




