ವಿದ್ಯಾರ್ಥಿಗಳು ಪಠ್ಯದಲ್ಲಿ ಗಳಿಸುವ ಅಂಕಗಳಿಗಿಂತ ಜೀವನದಲ್ಲಿ ಗಳಿಸುವ ಅಂಕ ಬಹಳ ಮುಖ್ಯವಾದದ್ದು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದರು.
ಮಂಡ್ಯದ ಹೋಟೆಲ್ ಅಮರಾವತಿ ಸಭಾಂಗಣದಲ್ಲಿ ಮಂಡ್ಯ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ಹಾಗೂ ಮಂಡ್ಯ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಸದಸ್ಯರ ಮತ್ತು ನೌಕರರ ಕಲ್ಯಾಣ ಟ್ರಸ್ಟ್ ವತಿಯಿಂದ ಏರ್ಪಡಿಸಿದ್ದ 2023-24ನೇ ಸಾಲಿನಲ್ಲಿ ಎಸ್ಎಸ್ಎಲ್ಸಿ ಮತ್ತು ದ್ವಿತೀಯ ಪಿಯುಸಿ ಹಾಗೂ ಕ್ರೀಡೆಯಲ್ಲಿ ಉತ್ತಮ ಸಾಧನೆ ಮಾಡಿದ ಮಂಡ್ಯ ಜಿಲ್ಲೆಯ ಹಾಲು ಉತ್ಪಾದಕರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ಮಕ್ಕಳ ಪ್ರತಿಭೆಯನ್ನು ಗುರುತಿಸಬೇಕು.ಎಲ್ಲರಲ್ಲೂ ಪ್ರತಿಭೆ ಇದ್ದೆ ಇರುತ್ತದೆ.ವಿದ್ಯಾರ್ಥಿಗಳ ಸಾಧನೆ ಅವರ ತಂದೆ ತಾಯಿಗೆ ಸಲ್ಲಬೇಕು. ಮಕ್ಕಳ ಸಾಧನೆ ಕಂಡು ಅತೀ ಹೆಚ್ಚು ಸಂತೋಷ ಪಡುವುದು ತಂದೆ ತಾಯಿಗಳು. ಆದ್ದರಿಂದ ತಂದೆ ತಾಯಿಗಿಂತ ಮಿಗಿಲಾದ ಶಕ್ತಿ ಬೇರೊಂದಿಲ್ಲ.ದೇವರನ್ನ ನಾವು ಕಂಡಿಲ್ಲ,ನಂಬಿಕೆಯಿಂದ ಪೂಜೆ ಮಾಡುತ್ತೇವೆ.ಮೂರ್ತಿ ರೂಪದಲ್ಲಿ ದೊಡ್ಡ ಶಕ್ತಿ ಅದು ತಂದೆ ತಾಯಿ ಮಾತ್ರ,ತಂದೆ ತಾಯಿಗಳೆ ದೊಡ್ಡ ಶಕ್ತಿ. ವಿದ್ಯಾರ್ಥಿಗಳ ಸಾಧನೆಯಿಂದ ತಂದೆ ತಾಯಿಗಳ ಪರಿಶ್ರಮ ಇರುತ್ತದೆ ಎಂದು ಹೇಳಿದರು.
ಮನ್ ಮುಲ್ ಉಪಾಧ್ಯಕ್ಷ ಎಂ.ಎಸ್.ರಘುನಂದನ್ ಮಾತನಾಡಿ ರಾಜ್ಯದಲ್ಲಿರುವ ಹಾಲು ಒಕ್ಕೂಟಗಳಲ್ಲಿ ಮಂಡ್ಯ ಹಾಲು ಒಕ್ಕೂಟ ಹಾಲಿನ ಗುಣಮಟ್ಟ ಹಾಗೂ ಶೇಖರಣೆಯಲ್ಲಿ ಪ್ರಗತಿಯತ್ತ ಸಾಗುತ್ತಿದೆ ಇದಕ್ಕೆಲ್ಲ ರೈತ ಬಾಂಧವರ ಸಹಕಾರ ಎಂದು ಹೇಳಿದರು.
ಮನ್ ಮುಲ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಪಿ.ಆರ್.ಮಂಜೇಶ್ ಮಾತನಾಡಿ ಮಂಡ್ಯ ಹಾಲು ಒಕ್ಕೂಟ ಗುಣಮಟ್ಟ ಹಾಗೂ ಹಾಲು ಉತ್ಪಾದನೆಯಲ್ಲಿ ರಾಜ್ಯದಲ್ಲಿ ಮೊದಲನೇ ಸ್ಥಾನದಲ್ಲಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಎಸ್ಎಸ್ಎಲ್ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ಜಿಲ್ಲೆಯ ಹಾಲು ಉತ್ಪಾದಕರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಮಂಡ್ಯ ಜಿಲ್ಲಾ ಸಹಕಾರ ಹಾಲು ಒಕ್ಕೂಟದ ಅಧ್ಯಕ್ಷ ಬಿ.ಬೋರೇಗೌಡ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಮನ್ ಮುಲ್ ನಿರ್ದೇಶಕರಾದ ಬಿ.ಆರ್.ರಾಮಚಂದ್ರ, ಎಸ್.ಪಿ. ಸ್ವಾಮಿ, ಎಂ.ರೂಪ, ಕೆ.ರಾಮಚಂದ್ರ, ಎಸ್.ಎನ್. ಲಕ್ಷ್ಮೀನಾರಾಯಣ, ರಾಮಕೃಷ್ಣ, ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಸದಸ್ಯರ ಮತ್ತು ನೌಕರರ ಕಲ್ಯಾಣ ಟ್ರಸ್ಟ್ ಅಧ್ಯಕ್ಷ ಶಿವಕುಮಾರ್, ಕಾರ್ಯದರ್ಶಿ ಶ್ರೀಧರ್ , ಮನ್ ಮುಲ್ ಜಂಟಿ ಕಾರ್ಯನಿರ್ವಹಣಾಧಿಕಾರಿ ಶ್ರೀನಿವಾಸ ರೆಡ್ಡಿ ಸೇರಿದಂತೆ ಇತರರು ಹಾಜರಿದ್ದರು.




