ಅರಬ್ ಸಂಯುಕ್ತ ಸಂಸ್ಥಾನ (ಯುಎಇ)ದ ದುಬೈ ಕನ್ನಡ ಸಂಘದ ನೂತನ ಅಧ್ಯಕ್ಷರಾಗಿ ಹಾದಿಯ ಮಂಡ್ಯ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ವರದರಾಜ್ ಕೋಲಾರ ಆಯ್ಕೆಯಾಗಿದ್ದಾರೆ.
ಅಬುಧಾಬಿಯಲ್ಲಿ ಶನಿವಾರ (ಜೂ.8) ನಡೆದ ಸಂಘದ ಸರ್ವ ಸದಸ್ಯರ ಸಭೆಯಲ್ಲಿ ಸರ್ವಾನುಮತದಿಂದ ಇವರನ್ನು ಆಯ್ಕೆ ಮಾಡಲಾಯಿತು.
ಹಾದಿಯ ಅವರು ಮೂಲತಃ ಮಂಡ್ಯನಗರದ ಗಾಂಧಿನಗರದವರಾಗಿದ್ದು, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಮಂಡ್ಯದ ಕಾರ್ಮೆಲ್ ಕಾನ್ವೆಂಟ್ ನಲ್ಲಿ ಪಡೆದು, ಮಂಡ್ಯದ ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಉನ್ನತ ಶಿಕ್ಷಣ ಪಡೆದು, ನಂತರ ದುಬೈಗೆ ಉದ್ಯೋಗ ಆರಸಿ ತೆರಳಿ, ಅಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ.
ಸಂಯುಕ್ತ ಅರಬ್ ಸಂಸ್ಥಾನದ ಅನಿವಾಸಿ ಕನ್ನಡಿಗರೆಲ್ಲರನ್ನು ಪ್ರತಿನಿಧಿಸುವ ದುಬೈ ಕನ್ನಡ ಸಂಘವು ಕಳೆದ ಒಂಬತ್ತು ವರ್ಷಗಳಿಂದ ಸಾಂಸ್ಕೃತಿಕ, ಸಾಮಾಜಿಕ ಮತ್ತು ಕ್ರೀಡಾ ಕ್ಷೇತ್ರದಲ್ಲಿ ಕ್ರಿಯಾಶೀಲವಾಗಿ ತೊಡಗಿಕೊಂಡಿದೆ. ಈ ಸಂಘಕ್ಕೆ 2024-25ನೇ ಸಾಲಿನ ನೂತನ ಅಧ್ಯಕ್ಷರಾಗಿ ಹಾದಿಯ ಮಂಡ್ಯ ಅವರು ನೇಮಕಗೊಂಡರೆ, ಮುಖ್ಯ ಕಾರ್ಯದರ್ಶಿಯಾಗಿ ವರದರಾಜ್ ಕೋಲಾರ ನೇಮಕಗೊಂಡಿದ್ದಾರೆ. ಕಳೆದ ಹಲವು ವರ್ಷಗಳಿಂದ ಸಂಘದ ಸದಸ್ಯರಾಗಿರುವ ಇವರು, ಅನೇಕ ಕಾರ್ಯಕ್ರಮಗಳನ್ನು ಸಂಘಟಿಸುವಲ್ಲಿ ಯಶಸ್ವಿಯಾಗಿದ್ದರು.
ನಿಕಟಪೂರ್ವ ಅಧ್ಯಕ್ಷ ಮಧು ದಾವಣಗೆರೆ ಅವರು ವಾರ್ಷಿಕ ಸಭೆಯಲ್ಲಿ ಸಂಘದ ಧ್ವಜ ಹಸ್ತಾಂತರಿಸುವ ಮೂಲಕ ಹಾದಿಯಾ ಮಂಡ್ಯ ಅವರಿಗೆ ಅಧಿಕಾರ ವಹಿಸಿದರು. ಈ ಸಭೆಯಲ್ಲಿ ಕಳೆದ ವರ್ಷದ ಕಾರ್ಯಕ್ರಮಗಳ ಬಗ್ಗೆ ವಿಶ್ಲೇಷಿಸಲಾಯಿತು ಹಾಗೂ ಖರ್ಚು-ವೆಚ್ಚದ ಬಗ್ಗೆ ತಿಳಿಸಲಾಯಿತು. ಅಲ್ಲದೇ ಮುಂದಿನ ಸಂಘದ ಕಾರ್ಯ ಚಟುವಟಿಕೆ ರೂಪುರೇಷಗಳ ಬಗ್ಗೆ ಚರ್ಚಿಸಲಾಯಿತು ಮತ್ತು ಸಂಘದ ಸಮಿತಿಗೆ ನೂತನ ಸದಸ್ಯರನ್ನು ಆಯ್ಕೆ ಮಾಡಿಕೊಳ್ಳಲಾಯಿತು.
2024-25ನೇ ಸಾಲಿನ ನೂತನ ಪದಾಧಿಕಾರಿಗಳ ವಿವರ
ಹಾದಿಯ ಮಂಡ್ಯ – ಅಧ್ಯಕ್ಷರು, ವರದರಾಜ್ ಕೋಲಾರ – ಪ್ರ.ಕಾರ್ಯದರ್ಶಿ, ಸುದೀಪ್ ದಾವಣಗೆರೆ, ಮಮತಾ ರಾಘವೇಂದ್ರ, ಮಧು ದಾವಣಗೆರೆ – ಮಾಜಿ ಅಧ್ಯಕ್ಷರು, ರಫೀಕಲಿ ಕೊಡಗು – ಕೆಲಸ ಸಹಾಯ ವಿಭಾಗ, ಪಲ್ಲವಿ ದಾವಣಗೆರೆ – ಮಹಿಳಾ ಘಟಕ, ಅನಿತಾ ಬೆಂಗಳೂರು – ಮಕ್ಕಳ ಘಟಕ, ಡಾ.ಸವಿತಾ ಮೈಸೂರು – ವೈದ್ಯರ ಘಟಕ, ವಿಷ್ಣುಮೂರ್ತಿ ಮೈಸೂರು – ಸಾಹಿತ್ಯ ಘಟಕ, ಅಕ್ರಮ್ ಕೊಡಗು – ವ್ಯವಹಾರ ಘಟಕ, ಶಂಕರ್ ಬೆಳಗಾವಿ – ಸಹಾಯ ಹಸ್ತ ವಿಭಾಗ, ಮೊಹಿನುದ್ದೀನ್ ಹುಬ್ಬಳ್ಳಿ – ಕ್ರೀಡಾ ವಿಭಾಗಕ್ಕೆ ಆಯ್ಕೆಯಾದರು.
ಸಮಿತಿ ಸದಸ್ಯರಾಗಿ ಹಾದಿ ಕುಂದಾಪುರ, ನಜೀರ ಮಂಡ್ಯ, ಪ್ರತಾಪ್ ಮಡಿಕೇರಿ, ಚೇತನ್ ಬೆಂಗಳೂರು, ಸ್ವಾತಿ ಚಿತ್ರದುರ್ಗ ಹಾಗೂ ರಜಿನಿ ಮಡಿಕೇರಿ ಆಯ್ಕೆಯಾದರು.