ವರದಿ: ಪ್ರಭು ವಿ.ಎಸ್.
ಕುರಿಗಳ ಬೇಟೆಯಾಡಲು ಬಂದ ಚಿರತೆಯೊಂದು ಕೊಟ್ಟಿಗೆಯಲ್ಲಿ ಬಂಧಿಯಾದ ಪ್ರಕರಣ ಇಂದು ವರದಿಯಾಗಿದೆ.
ಮದ್ದೂರು ತಾಲೂಕಿನ ಕುಂದನಗುಪ್ಪೆ ಗ್ರಾಮದ ಕೃಷ್ಣಪ್ಪ ಅವರ ಕೊಟ್ಟಿಗೆಗೆ ಕಳೆದ ರಾತ್ರಿ ನುಗ್ಗಿದ ಚಿರತೆ, ಕುರಿಗಳ ಮೇಲೆ ಮುಗಿಬೀಳಲು ಹೊಂಚು ಹಾಕಿತ್ತು. ಬಳಿಕ ಸುತ್ತಮುತ್ತ ಹಲವು ದಿನಗಳಿಂದ ಚಿರತೆ ಕಾಣಿಸಿಕೊಂಡು, ಜಾನುವಾರುಗಳ ಮೇಲೆ ದಾಳಿ ಮಾಡಿ ಆತಂಕ ಸೃಷ್ಟಿಸಿತ್ತು. ಗ್ರಾಮಸ್ಥರು ಹಲವು ಬಾರಿ ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದು, ಚಿರತೆ ಸೆರೆಹಿಡಿಯುವಂತೆ ಒತ್ತಾಯಿಸಿದ್ದರೂ ಚಿರತೆ ಸೆರೆಹಿಡಿದಿರಲಿಲ್ಲ.
ಆದರೆ ಇಂದು ಬೆಳಗಿನ ಜಾವ 3.30ಟೆ ಸುಮಾರಿಗೆ ಕುಂದನಗುಪ್ಪೆ ಗ್ರಾಮಕ್ಕೆ ಬಂದ ಚಿರತೆ ಕಷ್ಣಪ್ಪ ಎಂಬುವವರಿಗೆ ಸೇರಿದ ಕೊಟ್ಟಿಗೆಗೆ ನುಗ್ಗಿದೆ. ಕೊಟ್ಟಿಗೆಯಲ್ಲಿ 15ಕ್ಕೂ ಹೆಚ್ಚು ಕುರಿ-ಮೇಕೆ, ಒಂದು ಕರು, ಕೋಳಿ ಕೂಡ ಇದ್ದವು. ಬೇಟೆಗೆ ನುಗ್ಗಿದ ಚಿರತೆಗೆ ಕೊಟ್ಟಿಗೆಯಲ್ಲಿದ್ದ ಟಗರು ಬಲವಾಗಿ ಗುದ್ದಿದ ಪರಿಣಾಮ ಗಾಬರಿಗೆ ಒಳಗಾಗಿದೆ. ಕುರಿ-ಮೇಕೆ ಚೀರಾಟ ಕೇಳಿ ಹೊರಬಂದ ಕೃಷ್ಣಪ್ಪ ಕುಟುಂಬ ಕೊಟ್ಟಿಗೆಯಲ್ಲಿ ಚಿರತೆ ಕಂಡು ಆತಂಕಗೊಂಡಿದ್ದಾರೆ.
ಚಿರತೆ ಬೇಟೆಗೆ ನುಗ್ಗಿ ಕೊಟ್ಟಿಗೆ ಸುತ್ತ ಹಾಕಿದ್ದ ಕಬ್ಬಿಣದ ಗೂಡಿನಿಂದ ಹೊರಬರಲಾಗದೆ ಕುರಿ ಮೇಕೆಯೊಂದಿಗೆ ಹಲವು ಗಂಟೆ ಕಳೆದಿದೆ. ನಂತರ ಗ್ರಾಮಸ್ಥರ ಮಾಹಿತಿ ಮೇರೆಗೆ ಸ್ಥಳಕ್ಕೆ ಆಗಮಿಸಿದ ಡಿಎಫ್‍ಓ, ಹತ್ತಕ್ಕೂ ಹೆಚ್ಚು ಅರಣ್ಯ ಸಿಬ್ಬಂದಿಗಳು, ಚಿರತೆ ಸೆರೆ ಹಿಡಿಯಲು ಪ್ಲಾನ್ ರೂಪಿಸಿದ್ರು. ಪ್ಲಾನ್‍ನಂತೆ ಚಿರತೆ ಜನರನ್ನು ನೋಡಿ ಗಾಬರಿಯಾಗದಂತೆ ಕೊಟ್ಟಿಗೆಯನ್ನು ಟಾರ್ಪಾಲಿನಲ್ಲಿ ಮುಚ್ಚಿದ್ದು, ನಂತರ ಮೈಸೂರಿನಿಂದ ಅರವಳಿಕೆ ತಜ್ಞರನ್ನು ಕರೆಸಿ, ಚಿರತೆಗೆ ಅರವಳಿಕೆ ಮದ್ದು ನೀಡಿ, ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಚಿರತೆಯನ್ನು ಸೆರೆಹಿಡಿದು ತೆಗೆದುಕೊಂಡು ಹೋದರು.