Thursday, November 19, 2026

ಪ್ರಾಯೋಗಿಕ ಆವೃತ್ತಿ

ನಾಡು ನುಡಿಗೆ ಆಟೋ ಚಾಲಕರ ಕೊಡುಗೆ ಅಪಾರ : ಶಿವರಾಮೇಗೌಡ

ಕರ್ನಾಟಕದಲ್ಲಿ ಕನ್ನಡದ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಹಾಗೂ ನಾಡು ನುಡಿಗೆ ಕೊಡುಗೆ ನೀಡುವಲ್ಲಿ ಆಟೋ ಚಾಲಕರ ಪಾತ್ರ ಹಿರಿದಾದುದು ಎಂದು ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಶಿವರಾಮೇಗೌಡ ಬಣ್ಣಿಸಿದರು.

ಮಂಡ್ಯ ನಗರದ ವಿವೇಕಾನಂದ ಜೋಡಿ ರಸ್ತೆಯ ಬಾಲಭವನ ಆಟೋನಿಲ್ದಾಣದಲ್ಲಿ ಹಮ್ಮಿಕೊಂಡಿದ್ದ ೭೦ನೇ ಕನ್ನಡ ರಾಜ್ಯೋತ್ಸವ ಸಂಭ್ರಮದ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು ಕರ್ನಾಟಕದಲ್ಲಿ ನಾಡು ನುಡಿ ಹೋರಾಟಗಳಲ್ಲಿ ಆಟೋ ಚಾಲಕರು ಸದಾ ಸಕ್ರಿಯವಾಗಿದ್ದಾರೆ.ಅವರ ಜಾಗೃತಿಯಿಂದಲೆ ಪರಭಾಷಿಕರು ಸಹ ಕನ್ನಡ ಕಲಿತು ಕನ್ನಡದಲ್ಲೆ ವ್ಯವಹರಿಸುವ ವಾತಾವರಣ ನಿರ್ಮಾಣವಾಗುತ್ತಿದೆ.ಆಟೋ ಚಾಲಕರು ಕನ್ನಡದ ಜತೆಗೆ ತಮ್ಮ ಬದುಕಿನ ಭದ್ರತೆಯ ಬಗೆಗೂ ಎಚ್ಚರವಹಿಸಬೇಕು ಎಂದು ಕರೆ ನೀಡಿದರು.

ಕರುನಾಡ ಸೇವಕರು ಸಂಘಟನೆಯ ರಾಜ್ಯ ವಕ್ತಾರ ಎಂ.ಬಿ.ನಾಗಣ್ಣಗೌಡ ಮಾತನಾಡಿ ಕರ್ನಾಟಕ ಎಂಬುದು ಸುಮ್ಮನೆ ರಚನೆಯಾದುದಲ್ಲ ಇಲ್ಲವೆ ಭಾರತ ಸರ್ಕಾರದ ಭಿಕ್ಷೆಯಲ್ಲ.ಮದ್ರಾಸ್ ಹೈದರಾಬಾದ್ ಮುಂಬೈ ಪ್ರಾಂತ್ಯಗಳಲ್ಲಿ ಹರಿದುಹಂಚಿಹೋಗಿದ್ದ ಕನ್ನಡ ನಾಡನ್ನು ಒಗ್ಗೂಡಿಸುವಲ್ಲಿ ನಮ್ಮ ಹಿರಿಯರ ತ್ಯಾಗ ಬಲಿದಾನವಿದೆ.ಆದರೆ ಚಿಲ್ಲರೆ ಲಾಭಕ್ಕಾಗಿ ನಾಡು ಒಡೆಯುವ ಮಾತನಾಡುವವರು ನಿಜವಾದ ನಾಡದ್ರೋಹಿಗಳಾಗಿದ್ದಾರೆ ಎಂದು ಎಚ್ಚರಿಸಿದರು.

ಒಕ್ಕೂಟ ಸರಕಾರ ತ್ರಿಭಾಷ ಸೂತ್ರದ ಹೆಸರಿನಲ್ಲಿ ಕನ್ನಡಿಗರ ಮೇಲೆ ಹಿಂದಿ ಹೇರಿಕೆ ಮಾಡುತ್ತಿದೆ.ಉತ್ತರದ ರಾಜ್ಯಗಳಲ್ಲಿ ಇಲ್ಲದ ತ್ರಿಭಾಷ ಸೂತ್ರ ಕನ್ನಡಿಗರಿಗೂ ಬೇಕಿಲ್ಲ.ದ್ವಿಭಾಷ ಶಿಕ್ಷಣ ನೀತಿಗೆ ರಾಜ್ಯ ಸರ್ಕಾರ ಮುಂದಡಿಯಿಡಬೇಕು.ಎಲ್ಲ ಬಗೆಯ ಸ್ಪರ್ಧಾತ್ಮಕ ಪರೀಕ್ಷೇಗಳು ಕನ್ನಡದಲ್ಲಿ ಸಿಗದೆ ಕನ್ನಡಿಗರಿಗೆ ವಿಮೋಚನೆಯಿಲ್ಲವಾಗಿದೆ ಎಂದರು.

ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಎಚ್ ಡಿ ಜಯರಾಂ. ಆಟೋ ಘಟಕದ ವೆಂಕಟೇಶ್ ‌ಸೋಮಶೇಖರ.ಮುದ್ದೇಗೌಡ.ವಿಜಯಕುಮಾರ್ ಶಿವಲಿಂಗು.ರಾಮಲಿಂಗಯ್ಯ.ಪುನೀತಾ.ಪ್ರವೀಣ್.ಪ್ರಕಾಶ್ ಮೊದಲಾದವರು ಉಪಸ್ಥಿತರಿದ್ದರು.

ಇದೇ ಸಂಧರ್ಭದಲ್ಲಿ ನ್ಯಾಷನಲ್ ಚಿಲ್ಡ್ರನ್ ಶಾಲೆ ಹಾಗೂ ಸಾತನೂರು ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ನಾಡಗೀತೆ ಹಾಡಿದರು.ವಿದ್ಯಾರ್ಥಿಗಳಿಗೆ ನೋಟ್ ಬುಕ್ ಹಾಗೂ ಸಾರ್ವಜನಿಕರಿಗೆ ರಾಜ್ಯೋತ್ಸವದ ಪ್ರಯುಕ್ತ ಉಪಹಾರ ವಿತರಿಸಲಾಯಿತು

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ