Friday, October 18, 2024

ಪ್ರಾಯೋಗಿಕ ಆವೃತ್ತಿ

ಶ್ರೀರಂಗಪಟ್ಟಣ ದಸರಾ ಉದ್ಘಾಟನೆ ಮಾಡುತ್ತಿರೋದು ನನ್ನ ಪುಣ್ಯ: ಶಿವರಾಜ್ ಕುಮಾರ್

ಮೈಸೂರಿನಲ್ಲಿ ದಸರಾ ಪ್ರಾರಂಭಕ್ಕೂ ಮೊದಲು ಶ್ರೀರಂಗಪಟ್ಟಣದಲ್ಲಿ ದಸರಾ ನಡೆಯುತ್ತಿತ್ತು.ಇಂತಹ ಐತಿಹಾಸಿಕ ದಸರಾ ಉದ್ಘಾಟನೆ ಮಾಡುತ್ತಿರೋದು ನನ್ನ ಪುಣ್ಯ ಎಂದು ನಟ ಶಿವರಾಜ್ ಕುಮಾರ್ ಹೇಳಿದರು.

ಶ್ರೀರಂಗಪಟ್ಟಣ ದಸರಾ ಉದ್ಘಾಟಿಸಿ ಮಾತನಾಡಿದ ಅವರು, ದಸರಾ ಉದ್ಘಾಟನೆ ನನಗೆ ಖುಷಿ ಕೊಟ್ಟಿದೆ ಎಂದು ನುಡಿದರು.

ಈ ಬಾರಿ ಅತ್ಯಂತ ವಿಜೃಂಭಣೆ

ಅಂಬಾರಿ ಮೆರವಣಿಗೆಗೂ ಮುನ್ನ ಜಿಲ್ಲಾ ಉಸ್ತುವಾರಿ ಸಚಿವ ಎನ್ ಚಲುವರಾಯಸ್ವಾಮಿ ಮಾತನಾಡಿ, ಶ್ರೀರಂಗಪಟ್ಟಣ ದಸರಾವು ಮೈಸೂರಿಗಿಂತ ಮೊದಲು ಪ್ರಾರಂಭವಾಗಿದೆ. ಕಳೆದ ವರ್ಷಕ್ಕಿಂತ ಈ ಬಾರಿ ಅತ್ಯಂತ ವಿಜೃಂಭಣೆಯಿಂದ ಮಾಡಲಾಗುತ್ತಿದೆ. ಆಚರಣೆ ಮಾಡಲಾಗುತ್ತಿದೆ. ಸಂಜೆ ವೇದಿಕೆ ಕಾರ್ಯಕ್ರಮಗಳಿದ್ದು, 4 ದಿನಗಳ ಕಾಲ ಸಾಂಸ್ಕೃತಿಕ ಕಾರ್ಯಕ್ರಮಗಳು ನಿರಂತರವಾಗಿ ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳು ಹೆಚ್ಚಾಗಿ ಆಯೋಜಿಸಿರುವುದರಿಂದ ಬಹಳ ಆಕರ್ಷಣೀಯವಾಗಿದೆ. ಆಹಾರ ಮಳಿಗೆ ಹಾಗೂ ಜೊತೆಗೆ ದಸರಾ ವಸ್ತು ಪ್ರದರ್ಶನವನ್ನು ಆಯೋಜಿಸಲಾಗಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಎಂದು ಹೇಳಿ ಎಲ್ಲರಿಗೂ ದಸರಾ ಹಬ್ಬದ ಶುಭಾಶಯಗಳನ್ನು ತಿಳಿಸಿದರು.

ಕಣ್ತುಂಬಿಕೊಳ್ಳಲು ಸಾಧ್ಯ

ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಮಾತನಾಡಿ , ಸಾರ್ವಜನಿಕರು ದಸರಾ ಹಬ್ಬ ಕಣ್ತುಂಬಿಕೊಳ್ಳಬೇಕೆಂದರೆ ಮೈಸೂರು, ಶ್ರೀರಂಗಪಟ್ಟಣದಲ್ಲಿ ವಿಜೃಂಭಣೆಯಿಂದ ಆಚರಿಸಲಾಗುವ ದಸರಾ ಹಬ್ಬವನ್ನು ನೋಡಬೇಕು. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ
ಸೇರಿ ನಾಡಹಬ್ಬ ದಸರಾವನ್ನು ಆಚರಿಸುತ್ತಿರುವುದು ಬಹಳ ಸಂತೋಷದ ವಿಷಯವಾಗಿದೆ ಎಂದರು.

ಮೈಸೂರು ದಸರಾ ಪ್ರಾರಂಭವಾಗುವ ಮುಂಚೆ ಶ್ರೀರಂಗಪಟ್ಟಣದಲ್ಲಿ ದಸರಾ ಹಬ್ಬವು ಆರಂಭವಾಗಿತ್ತು. ವಿಜಯನಗರ ಸಾಮ್ರಾಜ್ಯವು ಅಸ್ತಿತ್ವದಲ್ಲಿದ್ದಾಗ ವಿಜಯನಗರದ ದಸರಾ ಜೊತೆಗೆ ಶ್ರೀರಂಗಪಟ್ಟಣದಲ್ಲೂ ಕೂಡ ದಸರಾ ಹಬ್ಬವನ್ನು ಆಚರಿಸಲಾಗುತ್ತಿತ್ತು. ಶ್ರೀರಂಗಪಟ್ಟಣದಿಂದ ರಾಜ ಮನೆತನವು ಮೈಸೂರಿಗೆ ಹೋದ ನಂತರ ಶ್ರೀರಂಗಪಟ್ಟಣದಿಂದ ಮೈಸೂರಿಗೆ ದಸರಾ ಹಬ್ಬವನ್ನು ವರ್ಗಾಯಿಸಲಾಯಿತು. ನೂರಾರು ವರ್ಷಗಳ ಇತಿಹಾಸವನ್ನು ನೆನಪಿಸುವ ಶ್ರೀರಂಗಪಟ್ಟಣ ದಸರಾವನ್ನು ಮತ್ತೆ ಆಚರಿಸಲು ಶುರು ಮಾಡಲಾಯಿತು. ಶ್ರೀರಂಗಪಟ್ಟಣ ದಸರಾ ಆಚರಣೆ ಪ್ರಾರಂಭವಾದ ನಂತರ ಮತ್ತೊಮ್ಮೆ ಶ್ರೀರಂಗಪಟ್ಟಣ ದಸರಾ ವೈಭವವನ್ನ ಕಾಣಬಹುದಾಗಿದೆ. ವಿಜಯದಶಮಿಯು ಪ್ರತಿಯೊಬ್ಬರಿಗೂ ಒಳ್ಳೆಯದನ್ನು ಮಾಡಲಿ, ಒಳ್ಳೆಯದಕ್ಕೆ ಯಾವಾಗಲೂ ಗೆಲುವಿರಲಿ ಎಂದು ಶುಭ ಹರೈಸಿದರು.

ಇದೇ ಸಂದರ್ಭದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, ಶ್ರೀರಂಗಪಟ್ಟಣ ದಸರಾ ಹಬ್ಬವು ವಿಜೃಂಭಣೆ ಹಾಗೂ ಬಹಳ ಉತ್ಸಾಹದಿಂದ ಆಚರಿಸಲಾಗುತ್ತಿದೆ. ದಸರಾ ಹಬ್ಬವು ಸಾಂಸ್ಕೃತಿಕ ಹಾಗೂ ಐತಿಹಾಸಿಕ ಹಬ್ಬವಾಗಿದ್ದು, ಬಹಳ ಹೆಮ್ಮೆಯಿಂದ ಈ ಪರಂಪರೆಯನ್ನು ಉಳಿಸಿಕೊಂಡು ಹೋಗಲಾಗುತ್ತಿದೆ. ಎಲ್ಲ ಜಾತಿ, ಜನಾಂಗ, ಭಾಷೆಯ ಜನರು ವಿವಿಧ ಕಡೆಗಳಿಂದ ಕೂಡ ದಸರಾ ಹಬ್ಬವನ್ನು ವೀಕ್ಷಿಸಲು ಬರುವುದು ಸಂತೋಷದ ವಿಷಯವಾಗಿದೆ. ಸೌಹಾರ್ದ ರೀತಿಯಲ್ಲಿ ದಸರಾ ಹಬ್ಬವು ನಡೆಯುತ್ತದೆ. ಎಲ್ಲರಿಗೂ ಶುಭವಾಗಲಿ ಎಂದು ಬಯಸುತ್ತೇನೆ ಎಂದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!