ಮಂಡ್ಯ ತಾಲೂಕಿನ ಮಾರಸಿಂಗಹಳ್ಳಿಯಲ್ಲಿ ಐತಿಹಾಸಿಕ ಭಾವೈಕ್ಯತೆಯ ಸಿಡಿ ಮಹೋತ್ಸವವು ವಿಜೃಂಭಣೆಯಿಂದ ನಡೆದು ಸಂಪನ್ನಗೊಂಡಿತು.
ಜ.೬ರಂದು ಆರಂಭಗೊಂಡ ಭಾವೈಕ್ಯತೆಯ ಸಿಡಿ ಉತ್ಸವಕ್ಕೆ ಶುಕ್ರವಾರ ರಾತ್ರಿ ಶ್ರೀ ಕಾಳಲಿಂಗೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿ, ಮೀಸಲು ನೀರು ತಂದು, ತಮಟೆ ನಗಾರಿ ಮೇಳದಲ್ಲಿ ನಾಡಿಗೆ ಮತ್ತು ಗ್ರಾಮಕ್ಕೆ ಯಾವುದೇ ಕೆಡಕು, ಅನಾವುತಗಳಾಗದಿರಲಿ ಎಂದು ಪ್ರಾರ್ಥಿಸಿ, ಸಾಮೂಹಿಕ ಪೂಜೆ ಸಲ್ಲಿಸಿದರು. ಉತ್ಸವ ಪ್ರಯುಕ್ತ ಪ್ರಮುಖ ರಸ್ತೆಗಳಿಗೆ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು.
ಜ.೭ರಂದು ಸಿಡಿ ಮಹೋತ್ಸವಕ್ಕಾಗಿ ತಮಟೆ ನಗಾರಿ ಮೇಳದಲ್ಲಿ ಮುಂಜಾನೆ ಮನೆ ಮನೆಗಳಿಂದ ಕಳಸ-ತಂಬಿಟ್ಟು ಆರತಿಯೊಂದಿಗೆ ಶ್ರೀ ಕಾಳಲಿಂಗೇಶ್ವರ ದೇವಾಲಯದಲ್ಲಿ ಜಮಾವಣೆಗೊಂಡು ಪೂಜೆಸಲ್ಲಿಸಿ, ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿ, ಗ್ರಾಮದೇವತೆಗಳಾದ ಶ್ರೀಬಸವೇಶ್ವರ, ಶ್ರೀಬೋರಪ್ಪ, ಶ್ರೀ ಮಾರಮ್ಮ ದೇವಾಲಗಳಲ್ಲಿ ಪೂಜೆ ಸಲ್ಲಿಸಿ ನಂತರ ಸಿಡಿ ಮಾಳಕ್ಕೆ ತೆರಳಿದರು.
ಸಿಡಿ ಮಾಳದಲ್ಲಿ ಭಾವೈಕ್ಯತೆಯ ಸಿಡಿ ಮಹೋತ್ಸವದ ಪೂಜೆ ಸಲ್ಲಿಸಿ, ಮಳೆ-ಬೆಳೆ-ಇಷ್ಠಾರ್ಥ ಸಿದ್ದಿಗಾಗಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ, ಹರಕೆಗಳನ್ನು ಸಮರ್ಪಿಸಿ, ಪ್ರಸಾದ ಸ್ವೀಕರಿಸಿ, ಸಿಡಿ ಮಹೋತ್ಸವನ್ನು ಶ್ರದ್ಧಾಭಕ್ತಿಯಿಂದ ಸಂಪನ್ನಗೊಳಿಸಿದರು.
ಕಾರ್ಯಕ್ರಮದಲ್ಲಿ ಯಜಮಾನರಾದ ಕಾಳಪ್ಪ, ಕರಿಪುಟ್ಟಯ್ಯ, ಕೆ.ಎಸ್.ಸಿದ್ದರಾಜು, ಅರ್ಚಕ ಮಹದೇವಸ್ವಾಮಿ, ಗ್ರಾ.ಪಂ.ಮಾಜಿ ಸದಸ್ಯರಾದ ಮಹದೇವಯ್ಯ, ಸವಿತಾ, ಎಂ,ಕೆ.ಮಹದೇವಯ್ಯ, ಹಿರಿಯರಾದ ಚಂಡಿಕಾಳಯ್ಯ, ಸಿದ್ದರಾಜು, ಶ್ರೀನಿವಾಸ್, ಸಣ್ಣಯ್ಯ ಮತ್ತಿತರರಿದ್ದರು.




