Tuesday, October 22, 2024

ಪ್ರಾಯೋಗಿಕ ಆವೃತ್ತಿ

ಶಿವ ದೈವವಾದರೂ ಅದಕ್ಕಿಂತ ಆತನೊಬ್ಬ ಆದರ್ಶ ವ್ಯಕ್ತಿ

✍️ ಪೂರ್ಣಿಮ ಜಿ

ಈ ದಿನ ಶಿವ ರಾತ್ರಿ ಬೇರೆ ಹಬ್ಬಗಳಂತೆ ಈ ಹಬ್ಬವನ್ನು ಮೌಢ್ಯತೆಯಿಂದ ನೋಡದೆ ಸ್ವಲ್ಪ ವಿಶಿಷ್ಟವಾಗಿ ನೋಡಬೇಕು ಎಂದು ನನಗೆ ಅನಿಸುತ್ತದೆ. ಶಿವನನ್ನು ಅರ್ಧನಾರೀಶ್ವರ ಎಂದು ಕರೆಯುವುದು ವಾಡಿಕೆ. ಆದರೆ ಅದರಲ್ಲಿ ಬೇರೆಯ ಹಲವು ಸಂದೇಶಗಳಿವೆ ಎಂದು ನನ್ನ ಭಾವನೆ. ಜೀವನದಲ್ಲಿ ಏಳು ಬೀಳುಗಳಲ್ಲಿ ಕಷ್ಟಸುಖ ಗಳಲ್ಲಿ ಗಂಡಿನಷ್ಟೆ ಪಾತ್ರವನ್ನು ಹೆಣ್ಣು ಕೂಡ ಹೊಂದಿರುತ್ತಾಳೆ, ಲೋಕದ ಸೃಷ್ಟಿಯ ಕಾರ್ಯದಲ್ಲಿ ಹೆಣ್ಣಿನ ಪಾತ್ರವು ಬಹಳ ಮುಖ್ಯವಾದದ್ದು ಹಾಗೆ ಹೆಣ್ಣು ದಾಸಿಯಲ್ಲ ಗಂಡಿನಷ್ಟೆ ಸಮಾನಳು ಎನ್ನುವ ಸಂದೇಶ ನೀಡಿದಂತೆ ಅನಿಸುತ್ತದೆ.

ಶಿವ ಸ್ಮಶಾನ ವಾಸಿ, ವಿಭೂತಿ ಭಸ್ಮಗಳನ್ನು ಮೈಗೆಲ್ಲ ಬಳಿದುಕೊಂಡು ರುದ್ರಾಕ್ಷಿ ಮಾಲೆ ಧರಿಸಿರುವಂತೆಯೇ ನಾವು ಹಲವು ಚಿತ್ರಪಟಗಳಲ್ಲಿ ನೋಡಿದ್ದೇವೆ. ಇದೆಲ್ಲಾ ಏನನ್ನು ಹೇಳುತ್ತದೆ, ಆಡಂಬರದ ಬದುಕಿನಿಂದ ದೂರ ಇದ್ದವನು ಸರಳತೆಯನ್ನು ಮೈಗೂಡಿಸಿ ಕೊಂಡಿದ್ದವನು, ವಜ್ರ ವೈಡೂರ್ಯದ ಹಂಗು ತೊರೆದವನು ಎನಿಸುತ್ತದೆ.

ಇನ್ನೂ ಸ್ಮಶಾನದಲ್ಲಿ ಹೆಣದ ರಾಶಿಗಳ ನಡುವೆ ಉರಿವ ಚಿತೆಗಳ ನಡುವೆ ವಾಸಿಸುವ ಶಿವ ಪವಿತ್ರ ಎಂದು ನಮ್ಮ ಪುರಾಣ ಕಥೆಗಳು ಹೇಳುತ್ತವೆ. ಆತ ಶ್ರೇಷ್ಠ ಕನಿಷ್ಠ ಗಳ ಅಂಗಿಲ್ಲದೆ ಬದುಕಿನ ಸಾರ್ಥಕತೆಯನ್ನು ಕಂಡು ಕೊಂಡಿದ್ದ ಎಂದು ಅರ್ಥ ಮಾಡಿಕೊಳ್ಳಬಹುದೇನೋ.

ಕಪಾಲ ಹಿಡಿದು ‘ಶಿವನು ಭಿಕ್ಷಕ್ಕೆ ಬಂದ ನೋಡು ಬಾರೆ ತಂಗಿ’ ಎಂದು ಒಂದು ಜಾನಪದ ಗೀತೆ ಇದೆ. ಶಿವ ಭಿಕ್ಷೆ ಮಾಡುವುದರ ಮೂಲಕ ತನ್ನ ಹೊಟ್ಟೆಯನ್ನು ತುಂಬಿಸಿಕೊಳ್ಳುತ್ತಿದ್ದಾತ ಎಂದಾದರೆ ಅವನ ಪ್ರಕಾರ ಯಾವ ಕೆಲಸವೂ ಮೇಲಲ್ಲ ಯಾವ ಕೆಲಸವೂ ಕೀಳಲ್ಲ ಎಂಬ ಸಂದೇಶ ಸಾರಿದಂತಲ್ಲವೇ…?

ಗಂಗೆ ಗೌರಿ ಇಬ್ಬರು ಹೆಂಡತಿಯರೆಂದು ಹೇಳುವುದು ವಾಡಿಕೆ. ಅದರಲ್ಲೂ ಗಂಗೆ ಬೆಸ್ತ ಜನಾಂಗದವಳು ಎಂದು ಹೇಳುತ್ತಾರೆ. ಗೌರಿ ಬ್ರಾಹ್ಮಣ ಸಮುದಾಯದವಳು ಎಂದು ಹೇಳುತ್ತಾರೆ, ಇಲ್ಲಿಯೂ ಕೂಡಾ ಅಂತರ್ಜಾತಿ ವಿವಾಹ ಆಗಿದೆ ಎಂದು ಪರಿಗಣಿಸಬಹುದಲ್ಲವೆ…?

ಗೌರಿಗೆ ದೇಹದ ಅರ್ಧಭಾಗ ಕೊಟ್ಟನಾದರೆ ಗಂಗೆಯನ್ನು ಶಿರದಲ್ಲಿ ಇಟ್ಟುಕೊಂಡಿದ್ದ ಎಂದು ಹೇಳುವುದು ವಾಡಿಕೆ. ನನಗೊಂದು ಅನುಮಾನ ಗಂಗೆ ಯಾವತ್ತು ಮುಟ್ಟಾಗಲಿಲ್ಲವೇ ಖಂಡಿತವಾಗಿ ಆಕೆಯು ಹೆಣ್ಣು ಪ್ರಕೃತಿ ದತ್ತವಾಗಿ ಮುಟ್ಟಾಗುವುದು ಸಹಜ ಪ್ರಕ್ರಿಯೆ. ಶಿವನಿಗೆ ಗಂಗೆಯ ಮುಟ್ಟು ಯಾವಾಗಲು ಅಪವಿತ್ರ ಎನಿಸಿರಲಾರದು. ಹಾಗೆನಾದರೂ ಅನಿಸಿದ್ದರೆ ಆತ ಗಂಗೆಯನ್ನು ತಲೆಯ ಮೇಲೆ ಹೊತ್ತುಕೊಂಡು ತಿರುಗುತ್ತಿರಲಿಲ್ಲ ಅಲ್ಲವೇ ?

ಬೇಡರ ಕಣ್ಣಪ್ಪನ ಮಾಂಸ ನೈವೇದ್ಯಕ್ಕೆ ಒಲಿದ ಶಿವ ಅದನ್ನು ಅರ್ಪಿಸಿಕೊಂಡನಾದರೆ, ಆಹಾರದಲ್ಲಿ ಮೇಲು ಕೀಳಿನ ಭಾವವಿಲ್ಲದೆ ಎಲ್ಲವನ್ನೂ ಗೌರವಿಸುವಾತ ಎಂಬಂತಲ್ಲವೇ..

ಹಿಂದು ಸಂಸ್ಕೃತಿಯಲ್ಲಿ ಪೂಜಿಸುವ ಇತರೆ ದೇವರುಗಳಿಗಿಂತ ಶಿವ ಭಿನ್ನವಲ್ಲವೇ… ಆತನನ್ನು ಪೂಜಿಸುವವರು ಅವನ ಸಂದೇಶಗಳನ್ನು ಅರ್ಥ ಮಾಡಿಕೊಳ್ಳದೆ ಮೌಢ್ಯತೆಯ ಕಂದಾಚಾರದಲ್ಲಿ ಬಿದ್ದು ಹೊರಳುತ್ತಿರುವರು.

ನನಗೆ ಶಿವ ದೇವನೆನ್ನುವುದಕ್ಕಿಂತ ಒಬ್ಬ ಆದರ್ಶ ವ್ಯಕ್ತಿ ಎನಿಸುತ್ತಾನೆ. ಇಬ್ಬರ ಹೆಂಡಿರ ಗಂಡನಾದರೂ ಶಿವ, ಏಕ ಪತ್ನಿ ವ್ರತಸ್ಥ ಶ್ರೀರಾಮಚಂದ್ರನಿಗಿಂತಲೂ ಶ್ರೇಷ್ಠ ಎನಿಸುತ್ತಾನೆ. ಯಾಕೆಂದರೆ ಹೆಂಡತಿಯ ಶೀಲದ ಮೇಲೆ ಶಂಕಿಸಿ ಕಾಡಿಗಟ್ಟುವ ಹಾಗೂ ಅಗ್ನಿಪ್ರವೇಶ ಮಾಡಿಸುವ ಪುರುಷಾಧಿಪತ್ಯದ ಮನಸ್ಸಿಗಿಂತ, ಹೆಂಡತಿಯರಿಗೆ ದೇಹದ ಅರ್ಧಭಾಗದಲ್ಲಿ ಮತ್ತು ಶಿರದಲ್ಲಿ ಜಾಗ ಕೊಟ್ಟು ಹೆಣ್ಣಿನ ಸಮಾನತೆ ಮತ್ತು ಘನತೆಯ ಸಂದೇಶ ಸಾರಿದ ಶಿವ ಶ್ರೇಷ್ಠನಾಗುತ್ತಾನೆ. ಉಳಿದವರಿಗೆ ಶಿವ ದೈವವಾದರೂ ನನಗೆ ಆತ ಒಬ್ಬ ಆದರ್ಶ ವ್ಯಕ್ತಿ ಎನಿಸುತ್ತಾನೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!