ಪ್ರಸ್ತುತ ವಿದ್ಯಾರ್ಥಿಗಳಿಗೆ ಕೌಶಲ್ಯ ಆಧಾರಿತ ಶಿಕ್ಷಣ ಅನಿವಾರ್ಯವಾಗಿದ್ದು, ಅದರೊಂದಿಗೆ ಮಾನವೀಯ ಮೌಲ್ಯಗಳು ಮಿಳಿತವಾಗಿರಬೇಕು’ ಎಂದು ರಾಮ್ ಮನೋಹರ ಲೋಹಿಯಾ ವಿಚಾರ ವೇದಿಕೆ ಅಧ್ಯಕ್ಷ ಬಿ.ಎಸ್. ಶಿವಣ್ಣ ಅಭಿಪ್ರಾಯ ವ್ಯಕ್ತಪಡಿಸಿದರು.
ಶ್ರೀರಂಗಪಟ್ಟಣ ತಾಲ್ಲೂಕಿನ ಬೆಳವಾಡಿ ಬಳಿಯ ಮಹಾರಾಜ ತಾಂತ್ರಿಕ ಮಹಾ ವಿದ್ಯಾಲಯ ಮೈಸೂರು (ಎಂಐಟಿಎಂ) ಸಂಸ್ಥೆಯಲ್ಲಿ ಶನಿವಾರ ಏರ್ಪಡಿಸಿದ್ದ ಸಂಕಲ್ಪ ದಿನ (ಓರಿಯಂಟೇಷನ್ ಪ್ರೋಗ್ರಾಂ) ಉದ್ಘಾಟಿಸಿ ಅವರು ಮಾತನಾಡಿದರು.

ಜಾತಿ,ವರ್ಗ,ವರ್ಣ, ಲಿಂಗ ಬೇಧವಿಲ್ಲದ ಸಮಾಜಕ್ಕಾಗಿ ಯುವ ಜನರು ಮುಂದಾಗಿ, ವಿಶ್ವ ಮಾನವತ್ವ ಬೆಳೆಸಿಕೊಳ್ಳಬೇಕು.ಹಾಗೆಯೇ ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆಯುವ ಜೊತೆಗೆ ಗಾಂಧಿ,ಬುದ್ಧ, ಅಂಬೇಡ್ಕರ್ ಅವರ ವಿಚಾರಗಳನ್ನೂ ತಿಳಿದುಕೊಳ್ಳಬೇಕು.ಪ್ರಾಧ್ಯಾಪಕರು ಕೂಡ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವ ಜೊತೆಗೆ ಬುದ್ಧ,ಬಸವ,ಗಾಂಧಿ,ಅಂಬೇಡ್ಕರ್ ಅವರ ವಿಚಾರಗಳನ್ನು ವಿದ್ಯಾರ್ಥಿಗಳಲ್ಲಿ ಬಿತ್ತಬೇಕು.ಆಗ ಸಮ ಸಮಾಜ ನಿರ್ಮಾಣ ಸಾಧ್ಯ ಎಂದರು.
ವಿದ್ಯಾರ್ಥಿಗಳು ಉನ್ನತ ವಿದ್ಯಾಭ್ಯಾಸ ಪಡೆದು,ಒಳ್ಳೆಯ ಅಂಕಗಳನ್ನು ಗಳಿಸಿ ಉತ್ತಮ ಹುದ್ದೆಗಳಿಗೇರಿ ಪೋಷಕರಿಗೆ, ಪ್ರಾಧ್ಯಾಪಕರಿಗೆ ಗೌರವ ತರಬೇಕೆಂದು ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಹೆಚ್ಚು ಅಂಕ ಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.
ಸಂಸ್ಥೆ ಅಧ್ಯಕ್ಷ ಬಿ.ಜಿ. ನರೇಶಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಸುವರ್ಣ ಟಿವಿ ಅಜಿತ್ ಹನುಮಕ್ಕನವರ್, ಪ್ರಾಂಶುಪಾಲ ಎಸ್. ಮುರಳಿ, ಅಡಳಿತಾಧಿಕಾರಿ ಅನಿರುದ್ಧ, ಸಂಸ್ಥೆಯ ಉಪಾಧ್ಯಕ್ಷ ಜಿ. ಹೇಮಂತಕುಮಾರ್, ವೈ.ಟಿ.ಕೃಷ್ಣೇಗೌಡ, ಎಚ್.ಕೆ.ಚೇತನ್, ಟಿ. ವಾಸುದೇವ್, ಟಿಸಿಎಸ್ ಕಂಪೆನಿಯ ಪ್ರಾದೇಶಿಕ ಮುಖ್ಯಸ್ಥ ಪ್ರವೀಣ್ ಚಂದ್ರನ್, ಡಿ.ಎಸ್.ಗುರು, ಗಾಡ್‌ಪ್ರೇ ದೇವಪುತ್ರ ಪಾಲ್ಗೊಂಡಿದ್ದರು.




