Tuesday, November 24, 2026

ಪ್ರಾಯೋಗಿಕ ಆವೃತ್ತಿ

ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ (ಜಾತಿ ಗಣತಿ) ವಿರೋಧಿಸುವವರಿಗೆ ಕೆಲವು ಪ್ರಶ್ನೆಗಳು….

ಕಾಂತರಾಜ ಆಯೋಗ ಸಲ್ಲಿಸಿದ ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ ವರದಿ (ಜಾತಿ ಗಣತಿ ವರದಿ ಎಂದು ತಪ್ಪಾಗಿ ಅರ್ಥೈಸಲಾಗುತ್ತಿದೆ) ಸರ್ಕಾರಗಳ ಬೇಜವಾಬ್ದಾರಿ, ವಿರೋಧ ಪಕ್ಷಗಳ ನಿರ್ಲಕ್ಷ್ಯ ಮತ್ತು ರಾಜಕಾರಣಿಗಳ ಸ್ವಾರ್ಥದಿಂದಾಗಿ ಒಂದು ದಶಕದವರೆಗೆ ಧೂಳು ತಿನ್ನುತ್ತಾ ಬಿದ್ದಿದ್ದು ಈಗ ಫೀನಿಕ್ಸ್ ಹಕ್ಕಿಯಂತೆ ಮರುಜೀವ ಪಡೆದುಕೊಂಡಿರುವುದು ಸ್ವಾಗತಾರ್ಹ. ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ ಈ ಬೆಳವಣಿಗೆಯನ್ನು ಸ್ವಾಗತಿಸಿದ್ದು ಶೀಘ್ರದಲ್ಲೇ ಜಾರಿಗೆ ಬರಲಿ ಎಂದು ಆಗ್ರಹಿಸಿದ್ದಾರೆ.

ಆದರೆ ವೀರಶೈವ ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯಗಳ ಸಂಘಟನೆಗಳು, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು, ಕಾಂಗ್ರೆಸ್ಸಿನ ಶಾಮನೂರು ಶಿವಶಂಕರಪ್ಪ (ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ರಾಷ್ಟ್ರೀಯ ಅಧ್ಯಕ್ಷರಾಗಿ ವಿರೋಧ), ವಿಜಯೇಂದ್ರ, ಹೆಚ್.ಡಿ. ಕುಮಾರಸ್ವಾಮಿ, ಆರ್.ಅಶೋಕ, ಕೇಂದ್ರ ಸಚಿವ ಸೋಮಣ್ಣ, ಡಾ.ಸಿ.ಎಚ್.ಮಂಜುನಾಥ, ರಂಭಾಪುರಿಯ ಶ್ರೀ ವೀರಸೋಮೇಶ್ವರ ಸ್ವಾಮೀಜಿ…ಮುಂತಾದವರು ಹಿಗ್ಗಾ-ಮುಗ್ಗಾ ವಿರೋಧಿಸುತ್ತಿದ್ದಾರೆ. ಈ ಎಲ್ಲ ಸಂಘಟನೆಗಳು, ಪಕ್ಷಗಳು ಮತ್ತು ಮಹನೀಯರಿಗೆ ಕೆಲ ಪ್ರಶ್ನೆಗಳನ್ನು ಕೇಳಬೇಕು

1) 2019ರ ಚುನಾವಣೆ ಸಂದರ್ಭದಲ್ಲಿ ಕೇಂದ್ರ ಬಿಜೆಪಿ ಸರಕಾರ ಆರ್ಥಿಕವಾಗಿ ಹಿಂದುಳಿದವರು (EWS) ಎಂಬ ಹೊಸ ಗುಂಪು ರಚಿಸಿ ಅವರಿಗೆ 10% ಮೀಸಲಾತಿ ನೀಡಿದಾಗ ಕರ್ನಾಟಕಕ್ಕೆ ಸೀಮಿತವಾಗಿ ಮಾತನಾಡುವುದಾದರೆ ಲಿಂಗಾಯತ ಮತ್ತು ಒಕ್ಕಲಿಗರ ಪಾಲನ್ನೇ ದೋಚಲಾಗಿತ್ತು. ಆಗ ಇವರಾರೂ ಯಾಕೆ ಪ್ರತಿರೋಧಿಸಲಿಲ್ಲ?

2) 1990 ರ ದಶಕದಲ್ಲಿ ಮಂಡಲ ಮೀಸಲಾತಿ ವರದಿ ಬಂದಾಗ ಲಿಂಗಾಯತ ಮತ್ತು ಒಕ್ಕಲಿಗರಲ್ಲಿಯ ಹಿಂದುಳಿದ ಜಾತಿಗಳು ಆ ವರದಿಯ ಫಲಾನುಭವಿಗಳು ಆಗಿದ್ದಾಗ್ಯೂ ಈ ಎರಡೂ ಸಮುದಾಯಗಳ ಸಂಘಟನೆಗಳು ಆ ವರದಿಯನ್ನು ಯಾಕೆ ವಿರೋಧಿಸಿದರು? ಪ್ರಾದೇಶಿಕವಾಗಿ ಬಲಾಢ್ಯವಾಗಿರುವ ಈ ಸಂಘಟನೆಗಳು ಸಾಂಸ್ಕೃತೀಕರಣದ ಪ್ರಭಾವಕ್ಕೆ ಒಳಗಾಗಿ ಬಿಜೆಪಿ/ ಆರ್ ಎಸ್ ಎಸ್ ನ ಮೂಗಿನ ನೇರಕ್ಕೆ ವರ್ತಿಸುತ್ತಿವೆಯೇ? ಅಥವಾ ತಮ್ಮ ಸಮುದಾಯಗಳಲ್ಲಿಯೇ ಅತೀ ಹಿಂದುಳಿದ ಜಾತಿಗಳ ಕಲ್ಯಾಣ ಇವರಿಗೆ ಬೇಕಾಗಿಲ್ಲವೇ?

3) ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕಳೆದ ಅವಧಿಯಲ್ಲಿ ಸಂವಿಧಾನಾತ್ಮಕ ಅಖಿಲ ಭಾರತ ಸೇವೆಗಳನ್ನು ಬದಿಗೆ ಸರಿಸಿ ಕೇಂದ್ರ ಸರ್ಕಾರದ ಜಂಟಿ ಕಾರ್ಯದರ್ಶಿ ಮಟ್ಟದ ಹುದ್ದೆಗಳಿಗೆ ಖಾಸಗಿ ಕ್ಷೇತ್ರದಿಂದ ಸಮಾನಾಂತರ ( Lateral) ನೇಮಕಾತಿ ಮಾಡುವ ಮೂಲಕ ವೀರಶೈವ ಲಿಂಗಾಯತ, ಒಕ್ಕಲಿಗ ಮತ್ತು ಇತರರ ಪಾಲಿಗೇನೇ ಕೈ ಹಾಕಿದಾಗ ಯಾಕೆ ಸುಮ್ಮನೇ ಉಳಿದುಕೊಂಡಿರಿ?

4) ಈಗ ಜಯಪ್ರಕಾಶ್ ಆಯೋಗ 3-ಎ ಮತ್ತು 3-ಬಿ ಎರಡೂ ಪ್ರವರ್ಗಗಳ ಮೀಸಲಾತಿಯನ್ನು ತಲಾ 3% ಹೆಚ್ಚು ಮಾಡಿದ್ದು ಅದರ ಪ್ರಮುಖ ಫಲಾನುಭವಿಗಳು ವೀರಶೈವ ಲಿಂಗಾಯತ/ಲಿಂಗಾಯತ ಮತ್ತು ಒಕ್ಕಲಿಗರೇ ಆಗಿದ್ದರೂ ವರದಿಯನ್ನು ವಿರೋಧಿಸಲು ಕಾರಣವೇನು?
‌
5) ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮೀಸಲಾತಿ ನಿಗದಿ ಮಾಡಲು ನಿಖರ ಅಂಕಿ, ಅಂಶಗಳನ್ನು ಆಧಾರವಾಗಿಟ್ಟುಕೊಳ್ಳಬೇಕೆಂದು ದೇಶದ ವರಿಷ್ಠ ನ್ಯಾಯಾಲಯವೇ ನಿರ್ದೇಶಿಸಿರುವಾಗ ವಿರೋಧವೇಕೆ? ಒಂದೆಡೆ ಸ್ಥಳೀಯ ಸಂಸ್ಥೆಗಳಿಗೆ ಕರ್ನಾಟಕ ಕಾಂಗ್ರೆಸ್ ಸರ್ಕಾರ ಚುನಾವಣೆ ನಡೆಸುತ್ತಿಲ್ಲ ಎಂದು ಗೂಬೆ ಕೂಡಿಸುತ್ತ ನೀವೇ ಮೀಸಲಾತಿ ನಿಗದಿಪಡಿಸಲು ಅವಶ್ಯವಿರುವ ಈ ವರದಿಯನ್ನು ವಿರೋಧಿಸುತ್ತಿರುವುದೇತಕ್ಕೇ?

6) ಹಿಂದುಳಿದ, ದಲಿತ, ಅಲ್ಪಸಂಖ್ಯಾತ, ಮಹಿಳಾ ಮತ್ತು ಎಲ್ಲ ಜಾತಿಗಳ ಬಡವರ್ಗಗಳ ಕಲ್ಯಾಣಕ್ಕಾಗಿ ಯೋಜನೆಗಳನ್ನು ರೂಪಿಸಲು ನಿಖರ ಅಂಕಿ, ಅಂಶಗಳು ಬೇಕೇ, ಬೇಕು. ಈ ವರ್ಗಗಳ ಕಲ್ಯಾಣದ ಮಂತ್ರ ಜಪಿಸುವ ಈ ಪಕ್ಷಿಗಳು, ಸಂಘಟನೆಗಳು ಮತ್ತು ಮುಖಂಡರು ಇದೇ ಉದ್ದೇಶಕ್ಕೆ ರಚಿತವಾಗಿರುವ ಆಯೋಗದ ವರದಿಯನ್ನು ವಿರೋಧಿಸುವದೇಕೆ?

7) ವೀರಶೈವ ಲಿಂಗಾಯತ/ ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯಗಳಲ್ಲಿ ಅತೀ ಹಿಂದುಳಿದ ಗಾಣಿಗ, ಕುಂಬಾರ, ಮಾಳಿ, ಹಡಪದ, ಲಾಳಗೊಂಡ, ಹಟ್ಟಿಕಾರ, ಶಿಲ್ಪಿ, ನೇಕಾರ, ಹಂಡೆ ವಜೀರ್, ಕುಡು ಒಕ್ಕಲಿಗ, ಪಂಚಮಸಾಲಿ..ಮುಂತಾದವರು ಹಾಗೂ ಕುಂಚಿಟಿಗ, ದಾಸ, ಮುಳ್ಳು…ಮುಂತಾದವರು ಒಕ್ಕಲಿಗ ಹಿಂದುಳಿದ ಉಪಜಾತಿಗಳು ಈ ವರದಿಯ ಫಲಾನುಭವಿಗಳಾಗಿದ್ಧು ಆದರೂ ವರದಿಯನ್ನು ವಿರೋಧಿಸಲು ಕಾರಣವೇನು….? ಈ ಎರಡೂ ಸಮುದಾಯಗಳ ಮೇಲ್ವರ್ಗದವರಿಗೆ ತಮ್ಮದೇ ಸಮುದಾಯಗಳ ಹಿಂದುಳಿದವರ ಕಲ್ಯಾಣಕ್ಕಿಂತ ರಾಜಕೀಯವೇ ಮುಖ್ಯವೇ?

8) ಸಂವಿಧಾನ ಬದ್ಧ ಸರ್ಕಾರದ ಸಂವಿಧಾನ ಬದ್ಧ ಮುಖ್ಯಮಂತ್ರಿ ಮತ್ತು ಸಂವಿಧಾನಿಕ ಸಂಸ್ಥೆ ಸರ್ಕಾರದ ಬೇರೆ, ಬೇರೆ ಸಮುದಾಯಗಳು ಮತ್ತು ಧರ್ಮಗಳಿಗೆ ಸೇರಿದ ಅಧಿಕಾರಿಗಳನ್ನು ಬಳಸಿಕೊಂಡು ಉದ್ದೇಶಪೂರ್ವಕವಾಗಿ ಯಾವುದೇ ಜಾತಿ ಮತ್ತು ಸಮುದಾಯದ ಜನಸಂಖ್ಯೆ ಮತ್ತು ಇತರೇ ಅಂಕಿ ಅಂಶಗಳನ್ನು ಹೆಚ್ಚು, ಕಡಿಮೆ ಮಾಡಲು ಸಾಧ್ಯವೇ? ಅದೂ ಈ ಪ್ರಜಾಪ್ರಭುತ್ವ ಮತ್ತು ಮಾಹಿತಿ ಹಕ್ಕುಯುಗದಲ್ಲಿ ಇಂತಹ ಹುಚ್ಚಾಟ ಸಾಧ್ಯವೇ? ಹಾಗೇನಾದರೂ ಆಗಿದ್ದರೆ 10 ವರ್ಷಗಳ ಹಿಂದೆಯೇ ಇಂದು ವರದಿಯನ್ನು ವಿರೋಧಿಸುವ ನಾಯಕರೆಲ್ಲ ಸೇರಿ ಸಿದ್ದರಾಮಯ್ಯನವರು ಮತ್ತು ಕಾಂಗ್ರೆಸ್ ಪಕ್ಷದ ಮೇಲೆ ರಣಹದ್ದುಗಳಂತೆ ಮುಗಿ ಬೀಳುತ್ತಿದ್ದರು!,

9) ಕೊನೆಯದಾಗಿ ಆದರೆ ಮುಖ್ಯವಾಗಿ ಹೇಳಬೇಕೆಂದರೆ, ಶಾಮನೂರು ಶಿವಶಂಕರಪ್ಪ ಅವರು ಮತ್ತು ಒಕ್ಕಲಿಗರ ಸಂಘದ ಕೋನಪ್ಪರೆಡ್ಡಿ ಹಾಗೂ ಕೆಂಚಪ್ಪಗೌಡರ ವರದಿ ಜಾರಿ ಮಾಡಿದರೆ ಸರ್ಕಾರವನ್ನೇ ಬೀಳಿಸುವದಾಗಿ ಬೆದರಿಕೆ ಹಾಕಿದ್ದಾರೆ. ಇಂತಹ ಮಾತು ಕೇಳಿದರೆ ನಾವೇನಾದರೂ ಮಧ್ಯಕಾಲೀನ ಯುಗದಲ್ಲಿದ್ದೇವಾ ಎಂದು ಕೇಳಬೇಕಾಗುತ್ತದೆ. ಆ ಕಾಲದಲ್ಲಿ ಪುಂಡ, ಪೋಕರಿಗಳು ಇಂತಹ ಬೆದರಿಕೆ ಹಾಕುವ ಮೂಲಕ ತಮ್ಮ ಇಷ್ಟಾರ್ಥ ಸಾಧಿಸಿಕೊಳ್ಳುತ್ತಿದ್ದರು. ಆದರೆ, ನಾವಿಂದು ಸಂವಿಧಾನ ಮತ್ತು ಕಾನೂನಿನ ಆಶ್ರಯದಲ್ಲಿ ಬದುಕುತ್ತಿದ್ದೇವೆ. ಇಂತಹ ಗೊಡ್ಡು ಬೆದರಿಕೆ ಹಾಕುವವರನ್ನು ಕಾನೂನು ಪ್ರಕಾರ ಶಿಕ್ಷಿಸಬಹುದು. ಆದ್ದರಿಂದ, ಕರ್ನಾಟಕದ ಎಲ್ಲ ಮಹಾ ಜನತೆಯಲ್ಲಿ ವಿನಂತಿಯೇನೆಂದರೆ ಯಾರೂ ಭಾವೋದ್ವೇಗಕ್ಕೆ ಒಳಗಾಗದೆ ನ್ಯಾಯ ಮತ್ತು ಸಮಾನತೆಯನ್ನು  ದ್ರಷ್ಟಿಯಲ್ಲಿಟ್ಟುಕೊಂಡು ವರದಿ ಕುರಿತು ಅಭಿಪ್ರಾಯ ತಾಳಬೇಕಾಗಿದೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ