Friday, April 19, 2024

ಪ್ರಾಯೋಗಿಕ ಆವೃತ್ತಿ

ದಕ್ಷಿಣ ಪದವೀಧರ ಕ್ಷೇತ್ರದಲ್ಲಿ ಜಿದ್ದಾಜಿದ್ದಿನ ಕದನ

ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆ ಮತದಾನಕ್ಕೆ ಕ್ಷಣಗಣನೆ ಆರಂಭವಾಗಿದೆ. ಮಂಡ್ಯ, ಮೈಸೂರು, ಹಾಸನ, ಚಾಮರಾಜನಗರ ಜಿಲ್ಲೆಗಳ ಒಳಗೊಂಡ ದಕ್ಷಿಣ ಪದವೀಧರ ಕ್ಷೇತ್ರದ ಪ್ರಚಾರ ಕಾರ್ಯ ಮುಗಿದಿದ್ದು, ಕೊನೆಯ ಎರಡು ದಿನಗಳ ಕಸರತ್ತು ಆರಂಭವಾಗಿದೆ.ಈ ಎರಡು ದಿನಗಳಲ್ಲಿ ನಡೆಯುವ ಚುನಾವಣೆ ತಂತ್ರಗಳು ಅಭ್ಯರ್ಥಿಗಳ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಲಿದೆ‌.

ಜಿದ್ದಾಜಿದ್ದಿನ ಕದನ ಕಣವಾಗಿರುವ ದಕ್ಷಿಣ ಪದವೀಧರ ಕ್ಷೇತ್ರದಲ್ಲಿ ಮೂರು ಪಕ್ಷಗಳ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದು, ಪಕ್ಷೇತರ ಅಭ್ಯರ್ಥಿಗಳಾದ ರೈತಸಂಘದ ಪ್ರಸನ್ನ ಎನ್.ಗೌಡ ಹಾಗೂ ಬಿಜೆಪಿ ಟಿಕೆಟ್ ಸಿಗದೆ ಪಕ್ಷೇತರವಾಗಿ ಸ್ಪರ್ಧೆಗಿಳಿದಿರುವ ಎನ್.ಎಸ್. ವಿನಯ್ ಪ್ರಮುಖ ಅಭ್ಯರ್ಥಿಗಳ ಆಯ್ಕೆಗೆ ತೊಡಕಾಗುವ ಸಾಧ್ಯತೆಗಳು ನಿಚ್ಚಳವಾಗಿದೆ. ಕನ್ನಡ ಕನ್ನಡ ಚಳುವಳಿ ಹೋರಾಟಗಾರ ವಾಟಾಳ್ ನಾಗರಾಜ್ ಕೂಡ ಸ್ಪರ್ಧೆಯಲ್ಲಿದ್ದು,ಜನರ ಗಮನ ಸೆಳೆದಿದ್ದಾರೆ.

ಕಾಂಗ್ರೆಸ್ ಪಕ್ಷ ಕಾವೇರಿ ಹೋರಾಟಗಾರ, ಮಾಜಿ ಸಂಸದ ಜಿ.ಮಾದೇಗೌಡರ ಪುತ್ರ ಮಧು ಅವರನ್ನು ಕಣಕ್ಕಿಳಿಸಿದರೆ, ಬಿಜೆಪಿ ಕಳೆದ ಬಾರಿ ಸೋತಿದ್ದ ಮೈ.ವಿ. ರವಿಶಂಕರ್ ಅವರಿಗೆ ಟಿಕೆಟ್ ನೀಡಿದೆ.ಜೆಡಿಎಸ್ ಎಚ್.ಕೆ‌. ರಾಮು ಅವರನ್ನು ಕಣಕ್ಕಿಳಿಸಿದ್ದು ಕ್ಷೇತ್ರದಲ್ಲಿ ತೀವ್ರ ಹಣಾಹಣಿಗೆ ಕಾರಣವಾಗಿದೆ.

ಮತದಾರರ ವಿವರ

ದಕ್ಷಿಣ ಪದವೀಧರ ಕ್ಷೇತ್ರದಲ್ಲಿ 1,41,963 ಒಟ್ಟು ಮತದಾರರಿದ್ದಾರೆ.ಅವರಲ್ಲಿ82,512 ಪುರುಷ ಮತದಾರರು, 59,427 ಮಹಿಳಾ ಮತದಾರರು ಹಾಗೂ ಇತರೆ 24 ಮಂದಿ ಮತದಾರರಿದ್ದಾರೆ. ಮಂಡ್ಯದಲ್ಲಿ 47,301 ಮತದಾರರು ನೋಂದಣಿ ಆಗಿದ್ದರೆ, ಮೈಸೂರಿನಲ್ಲಿ 58,263 ಹಾಸನದಲ್ಲಿ 24, 536 ಮತ್ತು ಚಾಮರಾಜನಗರದಲ್ಲಿ 12,146 ಮತದಾರರು ಅಭ್ಯರ್ಥಿಗಳ ಹಣೆಬರಹ ಬರೆಯಲಿದ್ದಾರೆ. ನಾಲ್ಕು ಜಿಲ್ಲೆಗಳಲ್ಲಿ ಒಟ್ಟು 150 ಮತ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಮಂಡ್ಯ ಜಿಲ್ಲೆಯಲ್ಲಿ 45 ಮತ ಕೇಂದ್ರಗಳನ್ನು ತೆರೆಯಲಾಗಿದೆ.

ಪ್ರತಿಷ್ಟೆಯ ಕಣ

ದಕ್ಷಿಣ ಪದವೀಧರ ಕ್ಷೇತ್ರದ ಕದನ ಕಣ ಎಲ್ಲಾ ಪಕ್ಷಗಳಿಗೂ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ. ಹಾಲಿ ಸದಸ್ಯ ಕೆ.ಟಿ. ಶ್ರೀಕಂಠೇಗೌಡ ತಾವು ಟಿಕೆಟ್ ಪಡೆಯದೆ ರಾಜ್ಯ ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಎಚ್. ಕೆ. ರಾಮು ಅವರಿಗೆ ಟಿಕೆಟ್ ಕೊಡಿಸಿದ್ದಾರೆ.

ಕಳೆದ 35 ವರ್ಷಗಳಿಂದ ಜೆಡಿಎಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ಕೆಲಸ ಮಾಡುತ್ತಿದ್ದ ಕೀಲಾರ ಜಯರಾಮು ಅವರಿಗೆ ಟಿಕೆಟ್ ಸಿಗದಿರುವುದರಿಂದ ಬೇಸತ್ತಿರುವ ಜೆಡಿಎಸ್ ಪಕ್ಷದ ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ ಹಾಗೂ ಟಿಕೆಟ್ ಬಯಸಿದ್ದ ಕೀಲಾರ ಜಯರಾಮ್ ಇಬ್ಬರು ಬಹಿರಂಗವಾಗಿಯೇ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಮಧು ಮಾದೇಗೌಡರು ಬೆಂಬಲ ಸೂಚಿಸಿ ಮತಯಾಚಿಸಿದ್ದಾರೆ.

ಜೆಡಿಎಸ್ ನಲ್ಲಿ ಇದ್ದುಕೊಂಡೆ ಮರಿತಿಬ್ಬೇಗೌಡರು ಮಧು ಮಾದೇಗೌಡರ ಪರವಾಗಿ ಮತಯಾಚನೆ ನಡೆಸಿರುವುದು ಜೆಡಿಎಸ್ ಅಭ್ಯರ್ಥಿಗೆ ತೊಡಕಾಗುವ ಎಲ್ಲಾ ಸಾಧ್ಯತೆಗಳಿವೆ. ಬಿಜೆಪಿಯ ಮೈ.ವಿ. ರವಿಶಂಕರ್ ಪರ ರಾಜ್ಯ ಬಿಜೆಪಿ ನಾಯಕರ ದಂಡೇ ನಾಲ್ಕು ಜಿಲ್ಲೆಗಳಲ್ಲಿ ಪ್ರಚಾರ ನಡೆಸಿದ್ದು ಈ ಬಾರಿ ಶತಾಯಗತಾಯ ಗೆಲುವಿಗೆ ಪಣ ತೊಟ್ಟು ನಿಂತಿದೆ. ಆಡಳಿತ ಪಕ್ಷ ಬಿಜೆಪಿ ಘಟಾನುಘಟಿ ನಾಯಕರು ನಾಲ್ಕು ಜಿಲ್ಲೆಗಳಲ್ಲಿ ಭರ್ಜರಿ ಪ್ರಚಾರವನ್ನು ಮಾಡಿದ್ದು ಅಭ್ಯರ್ಥಿಯ ಗೆಲುವಿಗೆ ಟಿಂಕ ಕಟ್ಟಿ ನಿಂತಿದ್ದಾರೆ.

ರೈತ ಸಂಘ ಮತ್ತು ದಲಿತ ಸಂಘರ್ಷ ಸಮಿತಿ ಸೇರಿದಂತೆ 40 ಸಂಘಟನೆಗಳ ಬೆಂಬಲದೊಂದಿಗೆ ಕಣಕ್ಕಿಳಿದಿರುವ ಪ್ರಸನ್ನ ಎನ್. ಗೌಡ ಕೂಡ ಕ್ಷೇತ್ರದಲ್ಲಿ ಹವಾ ಎಬ್ಬಿಸಿದ್ದಾರೆ. ಮಾಜಿ ಸಚಿವ ಈಶ್ವರಪ್ಪನವರ ಆಪ್ತ ಸಹಾಯಕನಾಗಿದ್ದ ಎನ್.ಎಸ್. ವಿನಯ್ ಹಲವು ಬಾರಿ ಚಿತ್ರನಟ ಪ್ರೇಮ್ ಅವರನ್ನು ಕರೆತಂದು ಭರ್ಜರಿ ಪ್ರಚಾರ ನಡೆಸಿದ್ದಲ್ಲದೆ ಅಂತಿಮ ಎರಡು ದಿನಗಳ ಕಸರತ್ತಿನಲ್ಲಿ ಜೋರಾಗಿಯೇ ಸದ್ದು ಮಾಡುತ್ತಿದ್ದಾರೆ.

ಕೈಗೆ ಉತ್ತಮ ವಾತಾವರಣ

ದಕ್ಷಿಣ ಪದವೀಧರ ಕ್ಷೇತ್ರ ಆದಾಗಿನಿಂದಲೂ ಕಾಂಗ್ರೆಸ್ ಅಭ್ಯರ್ಥಿ ಒಂದು ಬಾರಿಯೂ ಆಯ್ಕೆಯಾಗಿಲ್ಲ. ಆದರೆ ಈ ಬಾರಿ ಕಾಂಗ್ರೆಸ್ ಪಕ್ಷದ ಮಧು ಜಿ. ಮಾದೇಗೌಡರಿಗೆ ಉತ್ತಮ ಅವಕಾಶ ಸಿಕ್ಕಿದೆ. ಮಧು ಮಾದೇಗೌಡರಿಗೆ ತಂದೆ ಜಿ.ಮಾದೇಗೌಡರ ಜನಪರ ಹೋರಾಟ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ಮಾಡಿರುವ ಸಾಧನೆಗಳೇ ಶ್ರೀರಕ್ಷೆಯಾಗಿದೆ. ಜಿ ಮಾದೇಗೌಡರ ಮುಖ ನೋಡಿಕೊಂಡು ಮಧು ಅವರಿಗೆ ಮತ ನೀಡುವುದಾಗಿ ಹೇಳುತ್ತಿದ್ದಾರೆ.

ಕಾಂಗ್ರೆಸ್ ಪಕ್ಷ ಕಳೆದ ಸ್ಥಳೀಯ ಸಂಸ್ಥೆಗಳ ವಿಧಾನಪರಿಷತ್ ಚುನಾವಣೆಯಲ್ಲಿ ಜೆಡಿಎಸ್ ಪ್ರಾಬಲ್ಯದ ಮಂಡ್ಯ ಜಿಲ್ಲೆಯಲ್ಲಿ ದಿನೇಶ್ ಗೂಳಿ ಗೌಡರನ್ನು ಗೆಲ್ಲಿಸಿಕೊಳ್ಳುವ ಮೂಲಕ ಒಗ್ಗಟ್ಟಿನ ತಂತ್ರಗಾರಿಕೆ ಬಳಸಿತ್ತು. ಅದೇ ತಂತ್ರವನ್ನು ಕಾಂಗ್ರೆಸ್ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಬಳಸುತ್ತಿದ್ದು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್,ಮಾಜಿ ಸಂಸದ ಧ್ರುವನಾರಾಯಣ್, ಮಾಜಿ ಸಚಿವರಾದ ಚೆಲುವರಾಯಸ್ವಾಮಿ, ನರೇಂದ್ರಸ್ವಾಮಿ ಸೇರಿದಂತೆ ಹಲವು ನಾಯಕರು ಪ್ರತಿಷ್ಠೆಯನ್ನಾಗಿ ತೆಗೆದುಕೊಂಡು ಪ್ರಚಾರ ನಡೆಸಿದ್ದಾರೆ.

ಜೆಡಿಎಸ್ ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡರು ಬಹಿರಂಗವಾಗಿಯೇ ಮಧು ಮಾದೇಗೌಡರಿಗೆ ಮತ ಕೇಳುತ್ತಿರುವುದು ಮಧು ಮಾದೇಗೌಡರಿಗೆ ಪ್ಲಸ್ ಪಾಯಿಂಟ್ ಆಗಿದೆ.

ಬಿಜೆಪಿಗೆ ಪ್ರತಿಷ್ಟೆ

ಬಿಜೆಪಿ ಪಕ್ಷ ಈ ಕ್ಷೇತ್ರವನ್ನು ಪ್ರತಿಷ್ಠೆಯಾಗಿ ಸ್ವೀಕರಿಸಿದೆ. ರವಿಶಂಕರ್ ಅವರನ್ನು ಶತಾಯಗತಾಯ ಗೆಲ್ಲಿಸಿಕೊಳ್ಳಲು ನಾನಾ ತಂತ್ರಗಾರಿಕೆ ನಡೆಸುತ್ತಿದ್ದು, ಬಿಜೆಪಿ ನಾಯಕರಾದ ಸದಾನಂದಗೌಡ, ಸಿ.ಟಿ.ರವಿ ಸಚಿವರಾದ ಅಶ್ವಥ್ ನಾರಾಯಣ್, ಕೆ. ಗೋಪಾಲಯ್ಯ ಕೆ.ಸಿ. ನಾರಾಯಣಗೌಡ,ಬಿ.ವೈ.ವಿಜಯೇಂದ್ರ, ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಪಿ. ಉಮೇಶ್ ಸೇರಿದಂತೆ ಮೊದಲಾದವರು ರವಿಶಂಕರ್ ಪರ ಪ್ರಚಾರ ನಡೆಸಿದ್ದಾರೆ. ಆಡಳಿತಾರೂಢ ಬಿಜೆಪಿ ಪಕ್ಷಕ್ಕೆ ಚುನಾವಣೆ ಪ್ರತಿಷ್ಠೆಯಾಗಿದ್ದು,ಅಂತಿಮ ಹಂತದ ತಂತ್ರಗಾರಿಕೆ ಮಾಡುತ್ತಿದೆ.

ಜೆಡಿಎಸ್ ಪಕ್ಷಕ್ಕೆ ಮರ್ಯಾದೆ ಪ್ರಶ್ನೆ

ಜೆಡಿಎಸ್ ಪಕ್ಷಕ್ಕೆ ಈ ಕ್ಷೇತ್ರ ಗೆಲ್ಲುವುದು ಮರ್ಯಾದೆಯ ಪ್ರಶ್ನೆಯಾಗಿದೆ. ಅಭ್ಯರ್ಥಿ ಆಯ್ಕೆಯಲ್ಲಿ ಜಿಲ್ಲೆಯ ಜೆಡಿಎಸ್ ಶಾಸಕರು ಹಾಗೂ ನಾಯಕರ ಮಾತಿಗೆ ಬೆಲೆ ದೊರೆಯದ ಕಾರಣ ಹಲವರಲ್ಲಿ ಅಸಮಾಧಾನವಿದೆ.ಇದು ಎಚ್. ಕೆ. ರಾಮು ಅವರ ಚುನಾವಣಾ ಪ್ರಚಾರದಲ್ಲೂ ಕಂಡು ಬಂದಿದೆ. ಜಿಲ್ಲೆಯ ಏಳು ಕ್ಷೇತ್ರಗಳಲ್ಲಿ ಜೆಡಿಎಸ್ ಶಾಸಕರು ಇದ್ದರೂ ಅಷ್ಟೊಂದು ಉತ್ಸಾಹಭರಿತವಾಗಿ ಪ್ರಚಾರ ನಡೆಸಿಲ್ಲ.

ಜಿಲ್ಲೆಯಾದ್ಯಂತ ಜೆಡಿಎಸ್ ನಲ್ಲಿ ಹುರುಪಿನ ವಾತಾವರಣ ಕಂಡುಬಂದಿಲ್ಲ. ವಿಧಾನಪರಿಷತ್ ಸದಸ್ಯ ಕೆ.ಟಿ. ಶ್ರೀಕಂಠೇಗೌಡರು ಟಿಕೆಟ್ ಕೊಡಿಸಿದ್ದರಿಂದ ಹೆಚ್ಚು ಪ್ರಚಾರ ನಡೆಸುತ್ತಿದ್ದಾರೆ. ಸಿ.ಎಸ್. ಪುಟ್ಟರಾಜು, ಡಿ.ಸಿ. ತಮ್ಮಣ್ಣ, ರವೀಂದ್ರ ಶ್ರೀಕಂಠಯ್ಯ, ಎಂ. ಶ್ರೀನಿವಾಸ್, ಸುರೇಶ್ ಗೌಡ ಅನ್ನದಾನಿ ತಕ್ಕಮಟ್ಟಿಗೆ ಪ್ರಚಾರ ನಡೆಸಿದ್ದಾರೆ. ಜೆಡಿಎಸ್ ವರಿಷ್ಠ ಹೆಚ್.ಡಿ. ಕುಮಾರಸ್ವಾಮಿ ನಾಲ್ಕಾರು ತಾಲೂಕುಗಳಲ್ಲಿ ಒಂದು ದಿನ ಪ್ರಚಾರ ನಡೆಸಿ ಹೋಗಿದ್ದಾರೆ. ಮಂಡ್ಯ ಮತ್ತು ಹಾಸನ ಜೆಡಿಎಸ್ ಭದ್ರಕೋಟೆಯಾಗಿದ್ದು ಇಲ್ಲಿರುವ ಮತದಾರರನ್ನು ಜೆಡಿಎಸ್ ಪಕ್ಷ ನೆಚ್ಚಿಕೊಂಡಿದೆ.ಜೆಡಿಎಸ್ ನ ಮರಿತಿಬ್ಬೇಗೌಡ ಜೆಡಿಎಸ್ ಅಭ್ಯರ್ಥಿಗೆ ಕೈಕೊಟ್ಟಿರುವುದು ಮಾರಕವಾಗುವ ಲಕ್ಷಣಗಳಿವೆ.

ಪ್ರಸನ್ನ, ವಿನಯ್ ಹವಾ

ರೈತ ಸಂಘದ ಪ್ರಸನ್ನ ಎನ್. ಗೌಡ ಹಾಗೂ ಬಿಜೆಪಿ ಟಿಕೆಟ್ ಸಿಗದ ಕಾರಣ ಪಕ್ಷೇತರರಾಗಿ ಸ್ಪರ್ಧಿಸಿರುವ ಎನ್. ಎಸ್ .ವಿನಯ್ ಪ್ರಮುಖ ಪಕ್ಷಗಳ ಅಭ್ಯರ್ಥಿಗಳಿಗೆ ಸವಾಲು ಹಾಕಿದ್ದಾರೆ.ಹಲವಾರು ಸಂಘಟನೆಗಳ ಬೆಂಬಲ ಪಡೆದಿರುವ ಪ್ರಸನ್ನ ಗೌಡರಿಗೆ ರೈತಸಂಘದ ಹಾಗೂ ಸಂಘಟನೆಗಳ ನಾಯಕರು ಕೂಡಿಸುವ ಮತಗಳ ಮೇಲೆ ಕಣ್ಣಿಟ್ಟಿದ್ದಾರೆ. ಬಿಜೆಪಿ ಟಿಕೆಟ್ ಸಿಗದ ಕಾರಣ ಬಂಡಾಯ ಎಂದು ಘೋಷಿಸಿಕೊಂಡಿರುವ ವಿನಯ್ ಬಿಜೆಪಿಯ ಮತ ಬುಟ್ಟಿಗೆ ಕೈ ಹಾಕುವ ಸಾಧ್ಯತೆಗಳಿವೆ. ಪದವೀಧರ ಕ್ಷೇತ್ರದ ಚುನಾವಣೆ ಮತದಾನಕ್ಕೆ ಕ್ಷಣಗಣನೆ ಆರಂಭವಾಗಿದ್ದು ಕ್ಷೇತ್ರದ ಸದಸ್ಯ ಯಾರಾಗಬಹುದೆಂಬ ಕುತೂಹಲ ಮೂಡಿಸಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!