ಕ್ರೀಡೆಯಲ್ಲಿ ಸೋಲು-ಗೆಲುವನ್ನು ಸಮಚಿತ್ತದಿಂದ ಸ್ವೀಕರಿಸಬೇಕು.ಆಟಗಾರನಿಗೆ ಕ್ರೀಡಾ ಮನೋಭಾವ ಬಹಳ ಮುಖ್ಯ ಎಂದು ಮಿಮ್ಸ್ ನಿರ್ದೇಶಕ ಡಾ.ಹರೀಶ್ ಅಭಿಪ್ರಾಯ ವ್ಯಕ್ತಪಡಿಸಿದರು.
ಮಂಡ್ಯ ನಗರದ ಪಿಇಟಿ ಕ್ರೀಡಾಂಗಣದಲ್ಲಿ ರಾಜೀವ್‌ಗಾಂಧಿ ವೈದ್ಯಕೀಯ ವಿಶ್ವವಿದ್ಯಾನಿಲಯ ಬೆಂಗಳೂರು ಮತ್ತು ಮಿಮ್ಸ್ ಆಯೋಜಿಸಿದ್ದ ರಾಜ್ಯಮಟ್ಟದ ಕ್ರಿಕೆಟ್ ಪಂದ್ಯಾವಳಿ-2022ರ ಸಮಾರೋಪ ಸಮಾರಂಭದಲ್ಲಿ ವಿಜೇತ ತಂಡಗಳಿಗೆ ಬಹುಮಾನ ಮತ್ತು ಪ್ರಮಾಣಪತ್ರ ವಿತರಿಸಿ ಅವರು ಮಾತನಾಡಿದರು.
ರಾಜೀವ್‌ಗಾಂಧಿ ವೈದ್ಯಕೀಯ ವಿಶ್ವವಿದ್ಯಾನಿಲಯ ಮತ್ತು ಮಿಮ್ಸ್ ವತಿಯಿಂದ ರಾಜ್ಯಮಟ್ಟದ ಕ್ರಿಕೆಟ್ ಪಂದ್ಯಾವಳಿ ಉತ್ತಮವಾಗಿ ನಡೆದಿದೆ. ಮಳೆಯ ಪ್ರಭಾವದಿಂದ ನಾನಾ ತೊಂದರೆಗಳನ್ನು ಎದುರಿಸಬೇಕಾಯಿತು. ಅದನ್ನೂ ಕ್ರೀಡಾ ಮನೋಭಾವದಿಂದ ಸ್ವೀಕರಿಸೋಣ ಎಂದರು.
ಸುಮಾರು 92 ತಂಡಗಳು ಸ್ಪರ್ಧೆಯಲ್ಲಿ ಪಾಲ್ಗೊಂಡು ಉತ್ತಮ ಸ್ಪರ್ಧೆ ನೀಡಿವೆ. ಈ ಕ್ರಿಕೆಟ್ ಪಂದ್ಯಾವಳಿಯಲ್ಲಿ ಎ.ಜೆ. ಮೆಡಿಕಲ್ ಕಾಲೇಜ್ ಮಂಗಳೂರು ತಂಡವು ಪ್ರಥಮ ಸ್ಥಾನ ಪಡೆದಿದೆ. ಮುಂದಿನ ದಿನಗಳಲ್ಲಿ ದ್ವಿತೀಯ ಸ್ಥಾನ ಪಡೆದ ಕೆ.ಯು.ಜಿ ಮೆಡಿಕಲ್ ಕಾಲೇಜ್ ಸುಳ್ಯ ತಂಡವು ಪ್ರಥಮ ಬಹುಮಾನ ಪಡೆಯಲಿ ಎಂದು ಆಶಿಸಿದರು.
ಇದೇ ಸಂದರ್ಭದಲ್ಲಿ ಪ್ರಥಮ ಎ.ಜೆ. ಮೆಡಿಕಲ್ ಕಾಲೇಜ್ ಮಂಗಳೂರು ತಂಡ, ದ್ವಿತೀಯ ಕೆ.ಯು.ಜಿ ಮೆಡಿಕಲ್ ಕಾಲೇಜ್ ಸುಳ್ಯ ತಂಡ, ತೃತೀಯ ಜಿಮ್ಸ್ ಗುಲಬರ್ಗ, ನಾಲ್ಕನೇ ಸ್ಥಾನ ಕೃಪಾನಿಧಿ ಫಾರ‍್ಮಸಿ ಕಾಲೇಜು ಬೆಂಗಳೂರು ತಂಡಗಳು ಬಹುಮಾನ ಪಡೆದುಕೊಂಡವು.
ಕಾರ್ಯಕ್ರಮದಲ್ಲಿ ರಾಜೀವ್ ಗಾಂಧಿ ವಿವಿ ಸಿಂಡಿಕೇಟ್ ಸದಸ್ಯ ಡಾ.ಶ್ರೀಧರ್, ಮಿಮ್ಸ್ ಪ್ರಾಂಶುಪಾಲ ಡಾ.ತಮ್ಮಣ್ಣ, ವಿವಿ ವೀಕ್ಷಕ ಡಾ.ಜೋಸೆಫ್ ಅನಿಲ್, ಕ್ರೀಡಾ ಸಮಿತಿ ಸದಸ್ಯ ಡಾ. ಸಿದ್ದೇಗೌಡ, ಮಿಮ್ಸ್ ದೈಹಿಕ ಶಿಕ್ಷಣ ನಿರ್ದೇಶಕ ಡಾ.ಎಸ್.ಎಂ. ಸುರೇಶ್ ಮತ್ತಿತರರಿದ್ದರು.