ಮಂಡ್ಯ ತಾಲ್ಲೂಕು ಚೀರನಹಳ್ಳಿ ಗ್ರಾಮದಲ್ಲಿ ಸುಮಾರು 800 ವರ್ಷಗಳ ಇತಿಹಾಸವುಳ್ಳ ಶ್ರೀ ಬೀರೇಶ್ವರ ದೇವಸ್ಥಾನಕ್ಕೆ ದಲಿತರಿಗೆ ಪ್ರವೇಶವಿಲ್ಲ, ದೇವರ ಮೆರವಣಿಗೆ ಪೂಜಾ ಕುಣಿತದಲ್ಲಿ ದಲಿತರು ಭಾಗವಹಿಸುವಂತಿಲ್ಲ ಎಂಬಂತಹ ಅಸ್ಪೃಶ್ಯತೆ ಆಚರಣೆಗೆ ಜೀವಂತವಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ಹಾಗೂ ವಕೀಲ ಲಕ್ಷ್ಮಣ್ ಚೀರನಹಳ್ಳಿ ಆರೋಪಿಸಿದ್ದಾರೆ.
ಕುರುಬ ಸಮುದಾಯದ ಅರ್ಚಕರ ಉಸ್ತುವಾರಿಕೆಯಲ್ಲಿ ಈ ದೇವಸ್ತಾನ ನಡೆಯುತ್ತಿದೆ. ಈ ದೇವಸ್ಥಾನಕೇ ಕೋಟಿ ಮೀರಿದ ಆದಾಯ ನದಿಯಂತೆ ಹರಿದು ಬರುತ್ತಿದೆ, ಯಾರದೋ ತಿಜೋರಿ ತುಂಬುತ್ತಿದೆ… ಇದೆ ಭಕ್ತರ ಕಾಣಿಕೆ ವಿಚಾರವಾಗಿ ಪೂಜಾರಿಗಳಲ್ಲೇ ಜಗಳ ಆಗಿ ನ್ಯಾಯಾಲಯಕ್ಕೂ ಹೋಗಿ ಬಂದಿರುವುದು ಎಲ್ಲರಿಗೂ ತಿಳಿದ ವಿಷಯವಾಗಿದೆ ಎಂದು ಅವರು ನುಡಿಕರ್ನಾಟಕ.ಕಾಂ ಗೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೀರೇಶ್ವರ ದೇವಸ್ಥಾನವು ಮುಜರಾಯಿ ಇಲಾಖೆಗೆ ಸೇರಿದ್ದು , ಆರು ತಿಂಗಳ ಹಿಂದೆ ಮುಜರಾಯಿ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತರಲಾಗಿ, ತತ್ ಕ್ಷಣವೇ ಅಧಿಕಾರಿಗಳ ಮೂಲಕ ಜಾತಿ, ಧರ್ಮಗಳ ತಾರತಮ್ಯ ವಿಲ್ಲದ ದೇವಸ್ಥಾನಕ್ಕೆ ಪ್ರವೇಶ ಇದೆ ಎಂಬ ಬೋರ್ಡ್ ಹಾಕಿಸಲಾಗಿತ್ತು. ಆದರೆ ಜಾತಿವಾದಿ ಕಿಡಿಗೇಡಿಗಳು ಕಳೆದ ವಾರ ಬೋರ್ಡ್ ಕಿತ್ತು ಬಿಸಾಕಿ ಕಾನೂನು ಉಲ್ಲಂಘನೆ ಮಾಡಿದ್ದಾರೆ ಎಂದು ದೂರಿದ್ದಾರೆ.
ಗ್ರಾಮಸ್ಥರಿಂದ ಹಣ ವಸೂಲಿ
ಆಶ್ಚರ್ಯವೆಂದರೆ ಕಳೆದ ವರ್ಷ ಶ್ರೀ ಬೀರೇಶ್ವರ ದೇವಸ್ಥಾನದ ನವೀಕರಣಕ್ಕೆ ಮುಜರಾಯಿ ಇಲಾಖೆಯಿಂದ ಅನುಮತಿಯನ್ನೇ ಪಡೆಯದೆ, ಎಲ್ಲಾ ಜಾತಿಯ ಜನರಂತೆ, ದಲಿತರ ಮನೆಗಳಲ್ಲಿ ತಲಾ ಒಂದು ಸಾವಿರ ರೂಪಾಯಿಗಳನ್ನು ಪಡೆದು ಕೊಂಡಿದ್ದಾರೆ. ದೇವಸ್ಥಾನಕ್ಕೆ ದಲಿತರ ಹಣಬೇಕು. ಆದರೆ ಅವರಿಗೆ ದೇವಸ್ಥಾನ ಪ್ರವೇಶ ಮಾತ್ರ ನಿಷಿದ್ಧ. ಇದೆಂತಹ ಅನ್ಯಾಯ ಅಲ್ವ? ನವೀಕರಣದ ಹೆಸರಲ್ಲಿ ಕೋಟಿಗಟ್ಟಲೇ ಹಣ ಹರಿದಾಡಿದೆ…. ಈ ಹಣದಲ್ಲಿ ಸ್ಥಳೀಯ ಪುಡಾರಿಗಳು ಸೇರಿದಂತೆ ಅಧಿಕಾರಿಗಳ ಜೇಬುಗಳು ಕೂಡ ಭರ್ತಿಯಾಗಿರೋದು ಗುಟ್ಟಾಗಿ ಉಳಿದಿಲ್ಲ ಎಂದು ಕಿಡಿಕಾರಿದ್ಧಾರೆ.

ಇದೇ ಮಾರ್ಚಿ 23, 24 ಮತ್ತು 25ಕ್ಕೆ ಚೀರನಹಳ್ಳಿಯಲ್ಲಿ ದೊಡ್ಡ ಹಬ್ಬ ಮಾಡಲು ಎಲ್ಲಾ ಮನೆಗಳಲ್ಲೂ 2500/- ಗಳನ್ನು ಸಂಗ್ರಹಿಸುತ್ತಿದ್ದಾರೆ. ಅದರಂತೆ ದಲಿತರ ಮನೆಗಳಲ್ಲೂ ಸಹ ತಲಾ 2500 ರೂಗಳನ್ನು ಕೊಡಬೇಕು ಎಂದು ಸವರ್ಣಿಯರು ಫರ್ಮಾನ ಹೊರಡಿಸಿದ್ದಾರೆ. ಈ ವಿಚಾರವಾಗಿ ಚೀರನಹಳ್ಳಿ ಗ್ರಾಮದ ಪರಿಶಿಷ್ಟ ಜಾತಿಯ ಮುಖಂಡರು ಮತ್ತು ನಿವಾಸಿಗಳು ಸಭೆ ಸೇರಿ, ಸದರಿ ಸಭೆಯಲ್ಲಿ ಶ್ರೀಬೀರೇಶ್ವರ ದೇವಸ್ಥಾನದಲ್ಲಿ ಎಲ್ಲರಂತೆ ನಮಗೂ ಸಮಾನವಾಗಿ ಅವಕಾಶ ಮತ್ತು ತಾರತಮ್ಯವಿಲ್ಲದೆ ಪೂಜೆ ಮಾಡಿಸಲು ಅವಕಾಶ ಕೊಟ್ಟರೆ ಮಾತ್ರ ನಾವು ಹಣ ಕೊಡೋಣ. ಇಲ್ಲದಿದ್ದರೆ ಕೊಡುವುದು ಬೇಡ ಎಂದು ಈ ದಿನ ಸಭೆಯಲ್ಲಿ ಸರ್ವಾನುಮತದ, ಒಂದು ಐತಿಹಾಸಿಕ ತೀರ್ಮಾನ ಮಾಡಲಾಯಿತು.
ಹಾಗೆಯೇ ಈ ವಿಚಾರವಾಗಿ ತಾರತಮ್ಯ ಸರಿಪಡಿಸಲು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಲು ಸವರ್ಣೀಯರಿಗೆ 3 ದಿನಗಳ ಕಾಲಾವಕಾಶ ಕೊಡೋಣವೆಂದು, ಗ್ರಾಮದ ಒಕ್ಕಲಿಗ, ಕುರುಬ ಮತ್ತು ಬೇಸ್ತ ಸಮುದಾಯಗಳ ಮುಖಂಡರಿಗೆ ತಿಳಿಸಲಾಗಿದೆ.

ಈ ವಿಚಾರ ನಮ್ಮ ಚೀರನಹಳ್ಳಿಯಲ್ಲೇ ಸೌಹಾರ್ದಯುತವಾಗಿ ಬಗೆಹರಿದರೆ ತುಂಬಾ ಒಳ್ಳೆಯದು. ಅಕಸ್ಮಾತ್ ಹಾಗೆ ಆಗದಿದ್ದರೆ ಕಾನೂನು ಹೋರಾಟಕ್ಕೆ ಚೀರನಹಳ್ಳಿಯ ದಲಿತ ಸಮುದಾಯವು ತೀರ್ಮಾನಿಸಿದೆ. ಮನುಷ್ಯನ ಘನತೆಗಾಗಿ ನಡೆಯುತ್ತಿರುವ ಹೋರಾಟದಲ್ಲಿ ಮುಖ್ಯವಾಗಿ ಜಿಲ್ಲೆಯ ಒಕ್ಕಲಿಗ ಮತ್ತು ಕುರುಬ ಸಮುದಾಯದ ಪ್ರಗತಿಪರರು ಹಾಗೂ ಮಾನವ ಹಕ್ಕುಗಳ ಪರ ಇರುವ ಎಲ್ಲಾ ಸಂಘಟನೆಗಳು, ಹೋರಾಟಗಾರರು ನಮ್ಮ ನೆರವಿಗೆ ನಿಲ್ಲಬೇಕೆಂದು ಅವರು ಮನವಿ ಮಾಡಿದ್ಧಾರೆ.




