Thursday, September 26, 2024

ಪ್ರಾಯೋಗಿಕ ಆವೃತ್ತಿ

ಶ್ರೀಲಂಕಾ ಪ್ರಧಾನಿಯಾಗಿ ಡಾ.ಹರಿಣಿ ಅಮರಸೂರಿ ನೇಮಕ

ಹರೀಶ್ ಗಂಗಾಧರ್

ಶ್ರೀಲಂಕಾದ ನೂತನ ರಾಷ್ಟ್ರಪತಿಯಾಗಿ ಕಮ್ಯುನಿಸ್ಟ್ ಪಾರ್ಟಿಯ ಅನುರ ಕುಮಾರ ದಿಸ್ಸನಾಯಕೆ ಅಧಿಕಾರ ಸ್ವೀಕರಿಸಿದ ನಂತರ ಡಾ.ಹರಿಣಿ ಅಮರಸೂರಿಯರವರನ್ನು ಪ್ರಧಾನಿಯಾಗಿ ನೇಮಕ ಮಾಡಿದ್ದಾರೆ.

ಡಾ. ಹರಿಣಿ ದೆಹಲಿ ವಿಶ್ವವಿದ್ಯಾಲಯದಿಂದ ಪದವಿ ಪಡೆದವರು. ಅಲ್ಲಿ ಅವರು ಸಮಾಜಶಾಸ್ತ್ರದ ವಿದ್ಯಾರ್ಥಿಯಾಗಿದ್ದರು. ನಂತರ ಆಸ್ಟ್ರೇಲಿಯಾದಲ್ಲಿ ಸ್ನಾತಕೋತ್ತರ ಪದವಿ ಪಡೆದು, ತಮ್ಮ ಪಿಎಚ್ಡಿಯನ್ನು ಎಡಿನ್ಬ್ರ ವಿಶ್ವವಿದ್ಯಾಲಯದಿಂದ ಪಡೆದರು. ಶ್ರೀಲಂಕಾಕ್ಕೆ ಮರಳಿದ ಮೇಲೆ ಸರಕಾರಿ ಪೋಷಿತ ವಿಶ್ವವಿದ್ಯಾಲಯಗಳಲ್ಲಿ ಮಾನವಶಾಸ್ತ್ರ ಮತ್ತು ಸಮಾಜಶಾಸ್ತ್ರ ಬೋಧಿಸಿದ್ದಾರೆ.

ತಮ್ಮ ವೃತ್ತಿ ಜೀವನವನ್ನು ಬೋಧನೆಗಷ್ಟೇ ಸೀಮಿತವಾಗಿಸಿಕೊಳ್ಳದ ಪ್ರೊ.ಹರಿಣಿ ಹಲವಾರು ಚಳುವಳಿಯಲ್ಲಿ ಭಾಗವಹಿಸಿದ್ದಾರೆ. ಬೋಧಕರ ಒಕ್ಕೂಟದ ನಾಯಕಿಯಾಗಿದ್ದಾರೆ. ಸಾರ್ವಜನಿಕ ಶಿಕ್ಷಣದಲ್ಲಿ ಸರಕಾರ ಹೆಚ್ಚು ಹೂಡಿಕೆ ಮಾಡಬೇಕೆಂದು ಒತ್ತಾಯಿಸಿ ನಡೆದ ಚಳುವಳಿಯ ಮುಂದಾಳತ್ವವನ್ನು ಹರಿಣಿ ವಹಿಸಿದ್ದಾರೆ.

1990ರ ದಶಕದಲ್ಲಿ ಪದವಿ ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿ ಒಕ್ಕೂಟ (ಸ್ಟೂಡೆಂಟ್ ಯೂನಿಯನ್) ಕಣ್ಮರೆಯಾಗತೊಡಗಿದವು. “ವಿಶ್ವವಿದ್ಯಾಲಯ ಇರೋದು ಓದಲಿಕ್ಕೆ ರಾಜಕೀಯ ಮಾಡಲಿಕ್ಕಲ್ಲ” ಎಂಬ ನಂಬಿಕೆಯನ್ನು ವಿದ್ಯಾರ್ಥಿಗಳಲ್ಲಿ ಮತ್ತು ಪೋಷಕರ ಮನದಲ್ಲಿ ವ್ಯವಸ್ಥಿತವಾಗಿ ಬಿತ್ತಲಾಯಿತು.

ಆಗ ಬಿತ್ತನೆ ಮಾಡಿದ ಬೀಜಗಳು ಈಗ ಫಲ ನೀಡುತ್ತಿವೆ. ಸರ್ಕಾರಿ ವಿಶ್ವವಿದ್ಯಾಲಯಗಳು ಬೋಧಕರಿಲ್ಲದೆ, ಮೂಲಭೂತ ಸೌಕರ್ಯವಿಲ್ಲದೆ ಸೊರಗಿದರೆ, ಖಾಸಗಿ ವಿಶ್ವವಿದ್ಯಾಲಯಗಳು ಅಣಬೆಯಂತೆ ಬೆಳೆದುಬಿಟ್ಟಿವೆ. ಉಳ್ಳವರಿಗೆ ಮಾತ್ರ ಉತ್ತಮ ಶಿಕ್ಷಣವೆನ್ನುವಂತಹ ಹಂತಕ್ಕೆ ನಾವು ತಲುಪಿಬಿಟ್ಟಿದ್ದೇವೆ. ಸರ್ಕಾರಗಳ ಮಾರಕ ನೀತಿಗಳನ್ನು ಅರ್ಥ ಮಾಡಿಕೊಂಡು ಪ್ರಶ್ನಿಸುವ ಪ್ರಜ್ಞೆ ಯುವಕರಲ್ಲಿ ಇಲ್ಲವಾಗಿದೆ. “ಭ್ರಷ್ಟ ರಾಜಕೀಯ ನಮಗೇಕೆ! ಯಾರಾದ್ರೂ ಏನಾದ್ರೂ ಮಾಡಿಕೊಳ್ಳಲಿ” ಎಂಬ ಮಟ್ಟಕ್ಕೆ ಇಂದಿನ ಯುವ ಜನತೆ ತಲುಪಿದೆ.

ಸಾರ್ವಜನಿಕ ಶಿಕ್ಷಣ ವ್ಯವಸ್ಥೆ, ನಮ್ಮ ರಾಜಕೀಯ ವ್ಯವಸ್ಥೆ ಸುಧಾರಿಸಬೇಕಾದರೆ ಎಲ್ಲಾ ವಿಶ್ವವಿದ್ಯಾಲಯ ಮತ್ತು ಪದವಿ ಕಾಲೇಜುಗಳಲ್ಲಿ ವಿದ್ಯಾರ್ಥಿ ಸಂಘಟನೆ ಸದೃಢವಾಗಬೇಕು. ಅವರಲ್ಲಿ ರಾಜಕೀಯ ಪ್ರಜ್ಞೆ ಬೆಳೆಯಬೇಕು. ಸದ್ಯಕ್ಕಂತೂ “ಓದೋದು ಬಿಟ್ಟು ರಾಜಕೀಯ ಮಾಡ್ತಾರೆ” ಎನ್ನುವ ನೆಪ ಹೇಳಿ ವಿದ್ಯಾರ್ಥಿ ಸಂಘಟನೆಗಳನ್ನು, ಅವರ ದನಿಯನ್ನು ಹತ್ತಿಕ್ಕಲಾಗಿದೆ. ವಿದ್ಯಾರ್ಥಿಗಳ ಕೊಂದುಕೊರತೆ ಕೇಳುವವರಿಲ್ಲದ, ಸಂಘಟಿತ ಹೋರಾಟದ ಸದ್ದು ಕೂಡ ಕೇಳದ ಹಾಗೆ ಮಾಡಲಾಗಿದೆ.

ವಿದ್ಯಾರ್ಥಿ ಜೀವನದಲ್ಲಿ ಹೋರಾಟ, ಚಳುವಳಿ, ರಾಜಕೀಯ ಇರಬಾರದೇ? ವಿದ್ಯಾರ್ಥಿಗಳಿಗೆ ರಾಜಕೀಯ ಪ್ರಜ್ಞೆ ಇಲ್ಲದಿದ್ದಾಗ ಯಾರಿಗೆ ಲಾಭ? ಜೆಎನ್ ಯು, ಎನ್ ಎಸ್ ಡಿ ವಿದ್ಯಾರ್ಥಿಗಳ ನ್ಯಾಯಯುತ ಹೋರಾಟಗಳನ್ನು ನಮ್ಮ ಮುಖ್ಯವಾಹಿನಿಗಳು ಬಿಂಬಿಸಿದ್ದು ಹೇಗೆ ಮತ್ತು ಏಕೆ? ಸಂಶೋಧನೆ ಮತ್ತು ವಿದ್ಯಾರ್ಥಿಗಳ ಇಂಟಲೆಕ್ಟ್ ಅನ್ನು ಸಮಾಜ ದ್ವೇಷಿಸುವ ಮಟ್ಟಕ್ಕೆ ಏಕೆ ತಲುಪಿದೆ? ದೇಶದ ಬಹುಪಾಲು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಸಿಗದ ಹಾಗೆ ಹೇಗೆ ಮತ್ತು ಏಕೆ ನೋಡಿಕೊಳ್ಳಲಾಗಿದೆ? ವಿದ್ಯಾರ್ಥಿ ಸಂಘಟನೆಗಳು ತಣ್ಣಗಾದರೆ, ಬೋಧಕರ ಒಕ್ಕೂಟಗಳೇಕೆ ಜಾತಿ,ಧರ್ಮಗಳ ಬಣಗಳಾಗಿ ಹೋಗಿವೆ? ಎಲ್ಲಾ ಪ್ರಶ್ನೆಗಳಿಗೂ ಉತ್ತರ ಹುಡುಕಿಕೊಳ್ಳುವ ಸೂಕ್ತ ಸಮಯವಿದು… For now I am happy with the choice and gender representation… ಹರಿಣಿ ಶ್ರೀಲಂಕಾವನ್ನು ಆರ್ಥಿಕ ಸಂಕಷ್ಟಗಳಿಂದ ಪಾರು ಮಾಡಲಿ….

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!