Tuesday, November 24, 2026

ಪ್ರಾಯೋಗಿಕ ಆವೃತ್ತಿ

ಎಲ್ಲ ಅಂಗವಿಕಲರಿಗೆ ಘನತೆಯ ಜೀವನ ಲಭಿಸಬೇಕು: ಜಿ.ಎನ್.ನಾಗರಾಜ್

ರಾಜ್ಯದ ಎಲ್ಲ ಅಂಗವಿಕಲರಿಗೆ ಶಿಕ್ಷಣ, ಉದ್ಯೋಗ ಹಾಗೂ ಘನತೆಯ ಜೀವನ ಲಭಿಸಬೇಕು. ರಾಜ್ಯದಲ್ಲಿ ಇಂದಿಗೂ ಕೂಡ ಅಂಗವಿಕಲರು ಅನೇಕ ಸಮಸ್ಯೆಗಳಿಂದ ಕಷ್ಟದಲ್ಲಿ ಜೀವನ ಸಾಗಿಸುತ್ತಿದ್ದಾರೆ. ವಿವಿಧ ರೀತಿಯ ಅನ್ಯಾಯಗಳನ್ನು ಅನುಭವಿಸುತ್ತ ಸಂಕಟಗಳನ್ನೇ ಬದುಕಾಗಿಸಿಕೊಂಡಿದ್ದಾರೆ. ಇದನ್ನು ಅರ್ಥ ಮಾಡಿಕೊಂಡು ಸರ್ಕಾರ ಅವರಿಗೆ ಸಕಲ ಸವಲತ್ತುಗಳನ್ನು ಒದಗಿಸಬೇಕೆಂದು ಕರ್ನಾಟಕ ರಾಜ್ಯ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟದ ರಾಜ್ಯಾಧ್ಯಕ್ಷ ಜಿ.ಎನ್.ನಾಗರಾಜ್ ಒತ್ತಾಯಿಸಿದರು.

ಮಂಡ್ಯನಗರದ ಕರ್ನಾಟಕ ಸಂಘದ ಕೆವಿಎಸ್ ಶತಮಾನೋತ್ಸವ ಭವನದಲ್ಲಿ ಆಯೋಜಿಸಿದ್ದ ಅಂಗವಿಕಲರ ಹಾಗೂ ಪಾಲಕರ 3ನೇ ರಾಜ್ಯ ಸಮ್ಮೇಳನದಲ್ಲಿ ಮಾತನಾಡಿದ ಅವರು,  ಸಂವಿಧಾನ ಪೀಠಿಕೆಯು ದೇಶದ ಪ್ರತಿಯೊಬ್ಬರಿಗೂ ಆರ್ಥಿಕ, ಸಾಮಾಜಿಕ, ರಾಜಕೀಯ ನ್ಯಾಯ ಒದಗಿಸುವುದಾಗಿ ಹೇಳಿದೆ. ಆದರೆ ಅಂಗವಿಕಲರಿಗೆ ಇದುವರೆಗೂ ನ್ಯಾಯ ಸಿಕ್ಕಿಲ್ಲ. ಇನ್ನೂ ಎಷ್ಟು ವರ್ಷ ಪರವಾವಲಂಬಿಗಳಾಗಿ ಜೀವಿಸಬೇಕು ಎಂದು ಪ್ರಶ್ನಿಸಿದರು

ರಾಜ್ಯದಲ್ಲಿ ಕುವೆಂಪು ಅವರು ಹೇಳಿದಂತೆ ಸರ್ವರಿಗೂ ಸಮಬಾಳು ಸರ್ವರಿಗೂ ಸಮಪಾಲು ಎಂಬ ನ್ಯಾಯ ಒಕ್ಕೂಟ ಸರ್ಕಾರದಲ್ಲಿ ನಮಗಿನ್ನೂ ಲಭ್ಯವಾಗಿಲ್ಲ. ಕಾರಣ ಅಂಗವಿಕಲರಲಿ ಒಗ್ಗಟ್ಟಿಲ್ಲದಿರುವುದು. ಎಲ್ಲರೂ ಒಗ್ಗೂಡಿದರೆ ಅಂಗವಿಕಲರ ಬೇಡಿಕೆಗಳು ಈಡೇರಲು ಸಾಧ್ಯ ಎಂದು ಕಿವಿಮಾತು ಹೇಳಿದರು.

ಸರ್ಕಾರದ ಹಲವು ಯೋಜನೆಗಳು ಜಾರಿಯಲ್ಲಿದ್ದರೂ ಶಿಕ್ಷಣ, ಉದ್ಯೋಗ ಪಡೆಯುವುದೇ ಸವಾಲಾದರೆ ಕುಟುಂಬದಲ್ಲಿನ ಬಡತನ,ಹಸಿವು ವಿಕಲಚೇತನರನು ಘನತೆಯ ಜೀವನದಿಂದ ದೂರ ಮಾಡುತ್ತಿದೆ. ಹಾಗಾಗಿ ಅಂಗವಿಕಲರ ಬಹುದಿನದ ಕನಸಾಗಿದ್ದ ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಕಾಯ್ದೆ-೨೦೧೬ ಸಂಸತ್ತಿನಲ್ಲಿ ಅನುಷ್ಠಾನಗೊಂಡಿದೆ. ಈ ಕಾಯ್ದೆಯು ಅಂಗವಿಕಲರಿಗೆ ಶಿಕ್ಷಣ ಮತ್ತು ಉದ್ಯೋಗ ನೀಡುವುದಕ್ಕೆ ಕನಿಷ್ಠ ಖಾತರಿಯನ್ನು ನೀಡುತ್ತದೆ. ಮಾತ್ರವಲ್ಲ ತಾರತಮ್ಯ ರಹಿತ ಜೀವನ ನಡೆಸಲು ಅನುಕೂಲಗಳನ್ನು ಒದಗಿಸಿದೆ. ಸಮಾಜದಲ್ಲಿ ಅಂಗವಿಕಲರ ಕುರಿತಂತೆ ಜಾಗೃತಿ ಮೂಡಿಸುವ ಅಂಶಗಳಿಗೆ ಕಾಯ್ದೆ ಒತ್ತು ನೀಡಿರುವುದರಿಂದ ಶೀಘ್ರ ಅನುಷ್ಠಾನಗೊಳಿಸಬೇಕೆಂದು ಆಗ್ರಹಿಸಿದರು.

ಅಂಗವಿಕಲರ ಮಾಸಿಕ ಜೀವನ ನಿರ್ವಹಣ ಭತ್ಯೆಯನ್ನು ಕನಿಷ್ಠ 3 ಸಾವಿರ ರೂ.ಕೊಡಬೇಕು, ಶೇ.75 ನ್ಯೂನ್ಯತೆ ಇದ್ದವರಿಗೆ ಕನಿಷ್ಠ 5 ಸಾವಿರ ರೂ.ನೀಡಬೇಕೆಂಬುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಸರ್ಕಾರ ಆದ್ಯ ಗಮನ ನೀಡಬೇಕೆಂದು ಒತ್ತಾಯಿಸಿದರು.

ವೇದಿಕೆಯಲ್ಲಿ ಅಂಗವಿಕಲರ ಹಕ್ಕುಗಳ ರಾಷ್ಟ್ರೀಯ ವೇದಿಕೆ ಕಾರ್ಯಾಧ್ಯಕ್ಷ ನಂಬುರಾಜನ್, ಗ್ರಾಪಂ ನೌಕರರ ಸಂಘದ ರಾಜ್ಯ ಪ್ರ.ಕಾರ್ಯದರ್ಶಿ ಜಿ.ರಾಮಕೃಷ್ಣ, ಕೃಷಿ ಕೂಲಿಕಾರರ ಸಂಘದ ರಾಜ್ಯ ಅಧ್ಯಕ್ಷ ಎಂ.ಪುಟ್ಟ ಮಾದು, ಪ್ರಾಂತ ರೈತಸಂಘದ ಟಿ.ಎಲ್.ಕೃಷ್ಣೇಗೌಡ, ರಂಗಪ್ಪ ದಾಸರ್, ಎ.ರಾಜನ್, ಮಂಜುನಾಥ್ ಹೆಬ್ಬಾರ್, ಸ್ವಾಗತ ಸಮಿತಿ ಅಧ್ಯಕ್ಷ ಎನ್.ನಾಗರಾಜು, ದೊಡ್ಡ ಮರಿಗೌಡ, ಸಿ.ಕುಮಾರಿ ಮತ್ತಿತರರಿದ್ದರು.

ಇದಕ್ಕೂ ಮುನ್ನ ರ‍್ಯಾಲಿಗೆ ಚಾಲನೆ ನೀಡಿದ ಜಿಲ್ಲಾಧಿಕಾರಿ ಡಾ.ಕುಮಾರ ಅವರು, ವಿಶೇಷ ಸಾಮರ್ಥ್ಯರಿಗೆ  ಇರುವವರಿಗೆ ಸಿಗಬೇಕಾದ ಎಲ್ಲ ಹಕ್ಕುಗಳು, ಸರ್ಕಾರದ ಸೌಲಭ್ಯಗಳನ್ನು ಒದಗಿಸುವಲ್ಲಿ ಕ್ರಮ ವಹಿಸುವುದಾಗಿ ಭರವಸೆ ನೀಡಿವ ಶುಭ ಹಾರೈಸಿದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ