ರಾಜ್ಯದ ಅಭಿವೃದ್ದಿಯೊಂದಿಗೆ ಸ್ಥಿರ ಸರ್ಕಾರ ನೀಡುವುದು ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ. ರಾಜ್ಯಕ್ಕೆ ಹಲವಾರು ಜನಪರ ಯೋಜನೆಗಳನ್ನು ಕೊಟ್ಟಿರುವ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕೆಂದು ಕೆಪಿಸಿಸಿ ರಾಜ್ಯ ಉಪಾಧ್ಯಕ್ಷ ಚಲುವರಾಯಸ್ವಾಮಿ ಮನವಿ ಮಾಡಿದರು.
ಮಳವಳ್ಳಿ ಪಟ್ಟಣದ ಅನಂತರಾಂ ವೃತ್ತದಲ್ಲಿ 75 ನೇ ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವದ ಅಂಗವಾಗಿ ಕಾಂಗ್ರೆಸ್ ಪಕ್ಷದ ವತಿಯಿಂದ ನಡೆದ ಕಿರುಗಾವಲಿನಿಂದ ಮಳವಳ್ಳಿ ಪಾದಯಾತ್ರೆಯಲ್ಲಿ ಭಾಗವಹಿಸಿ ಮಾತನಾಡಿದರು.
ಅಭಿವೃದ್ದಿಯಿಂದ ಜನಪರ ಯೋಜನೆಯಿಂದ ಮತ ಕೊಡುವುದಿಲ್ಲ ಎನ್ನುವುದು ಸ್ವಷ್ಟವಾಗಿದೆ. 165 ಭರವಸೆಗಳಲ್ಲಿ ಎರಡು-ಮೂರು ಯೋಜನೆಗಳನ್ನು ಬಿಟ್ಟು ಉಳಿದೆಲ್ಲಾ ಯೋಜನೆಗಳನ್ನು ಸಿದ್ದರಾಮಯ್ಯ ಅವರು ಕೊಟ್ಟಿದ್ದರೂ ಜನರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿಲ್ಲ.
ಕಳೆದ ನಾಲ್ಕೂವರೆ ವರ್ಷದಲ್ಲಿ ಮುಖ್ಯಮಂತ್ರಿಗಳ ಬದಲಾವಣೆ ಕಂಡಿದ್ದೀವೆಯೇ ಹೊರತು ಯಾವುದೇ ಅಭಿವೃದ್ದಿ ಯೋಜನೆಗಳನ್ನು ಕೊಟ್ಟಿಲ್ಲ ಎಂದು ಬಿಜೆಪಿ ವಿರುದ್ದ ಕಿಡಿಕಾರಿದರು.
ಸ್ವಾತಂತ್ರ್ಯವನ್ನು ತಂದುಕೊಡಲು ಕಾಂಗ್ರೆಸ್ ಪಕ್ಷ ಪ್ರಮುಖ ಪಾತ್ರ ವಹಿಸಿರುವುದನ್ನು ಸಾರ್ವಜನಿಕರಿಗೆ ಮನವರಿಕೆ ಮಾಡುವ ಉದ್ದೇಶದಿಂದ ರಾಷ್ಟ್ರೀಯ ಕಾಂಗ್ರೆಸ್ ಕರೆಯ ಮೇರೆಗೆ ರಾಜ್ಯಾಧ್ಯಂತ ಸ್ವಾತಂತ್ರ್ಯ ನಡಿಗೆ
ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ, ಆಗಸ್ಟ್ 15ರಂದು ಬೆಂಗಳೂರಿನಲ್ಲಿ ನಡೆಯಲಿರುವ ಪಾದಯಾತ್ರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿಕೊಡಬೇಕೆಂದು ಮನವಿ ಮಾಡಿದರು.
ಕೆಪಿಸಿಸಿ ಉಪಾಧ್ಯಕ್ಷ ಹಾಗೂ ಮಾಜಿ ಸಚಿವ ಪಿ.ಎಂ ನರೇಂದ್ರಸ್ವಾಮಿ ಮಾತನಾಡಿ, ದೇಶಕ್ಕಾಗಿ ತ್ಯಾಗ, ಬಲಿದಾನ ನೀಡಿರುವ ಕಾಂಗ್ರೆಸ್ ಪಕ್ಷ ಸ್ವಾತಂತ್ರ್ಯ ಅಮೃತ ಮಹೋತ್ಸವ ಆಚರಿಸಲು ಅಧಿಕಾರವನ್ನು ಹೊಂದಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಪಾದಯಾತ್ರೆಯನ್ನು ಹಮ್ಮಿಕೊಂಡಿದ್ದು, ಮಂಡ್ಯ ಜಿಲ್ಲೆಗೂ ಆಗಮಿಸುವುದರಿಂದ ಕಾಂಗ್ರೆಸ್ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ
ಭಾಗವಹಿಸಬೇಕೆಂದು ಹೇಳಿದರು.
ನಾಲ್ಕುವರೆ ವರ್ಷದಲ್ಲಿ ಯಾವುದೇ ಯೋಜನೆಗಳನ್ನು ಜಾರಿಗೆ ತರದವರು ಡೋಂಗಿ ರಾಜಕಾರಣ ಮಾಡುತ್ತಿದ್ದಾರೆ. ತಾನು ತಂದ ಯೋಜನೆಗಳಿಗೆ ಗುದ್ದಲಿ ಹಿಡಿಯುತ್ತಿದ್ದಾರೆ. ಹಲವು ಯೋಜನೆಗಳು ಸತ್ತು ಬಿದ್ದಿವೆ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಕನಕ ಭವನ ನಿರ್ಮಾಣಕ್ಕೆ ಅನುಮೋದನೆ ನೀಡಿದ್ದರು. ಅದನ್ನು ತಾನು ತಂದೆ ಎಂದು ಬ್ಯಾನರ್ ಹಾಕಿಸಿಕೊಂಡಿರುವುದು ನಾಚಿಕೆಗೇಡಿನ ಸಂಗತಿ ಎಂದು ಶಾಸಕ ಅನ್ನದಾನಿ ಹೆಸರೇಳದೆ ಟೀಕಿಸಿದರು.
ಮಂಡ್ಯ ಜಿಲ್ಲೆಯಲ್ಲಿ ಅಧಿಕಾರ ಪಡೆದ ಜೆಡಿಎಸ್ ಜಿಲ್ಲೆಗೆ ಕೊಟ್ಟ ಕೊಡುಗೆ ಏನು ಎನ್ನುವುದನ್ನು ಶ್ವೇತಪತ್ರ ಹೊರಡಿಸಲಿ. ಕೇಂದ್ರದ ಬಿಜೆಪಿ ಸರ್ಕಾರ ದೇಶವನ್ನು ಮಾರಲು ಹೊರಟಿದೆ. ರಾಜ್ಯದಲ್ಲಿ ಪ್ರಾದೇಶಿಕ ಪಕ್ಷವೊಂದು ಬಹಿರಂಗವಾಗಿ ಬಿಜೆಪಿಯನ್ನು ಬೈಯುವುದು, ಒಳಗೆ ಬೆಂಬಲ ಕೊಡುವುದು ಮಾಡುತ್ತಾರೆ ಎಂದು ಜೆಡಿಎಸ್ ವಿರುದ್ದ ಹರಿಹಾಯ್ದರು.
ಮುಖ್ಯಮಂತ್ರಿ ಆಯ್ಕೆ ವಿಚಾರದಲ್ಲಿ ಹೈಕಮಾಂಡ್ ತೀರ್ಮಾನವೇ ಅಂತಿಮ. ಡಿ.ಕೆ.ಶಿವಕುಮಾರ್
ಹಾಗೂ ಸಿದ್ದರಾಮಯ್ಯ ಯಾರೂ ಬೇಕಾದರೂ ಮುಖ್ಯಮಂತ್ರಿಯಾಗಬಹುದು. ಕಾಂಗ್ರೆಸ್ ಕುಟುಂಬದ
ಸಮಸ್ಯೆಯನ್ನು ಪಕ್ಷವೇ ಬಗೆಹರಿಸಿಕೊಳ್ಳುತ್ತೇವೆಂದು ಹೇಳಿದರು.
ಕಿರುಗಾವಲಿನಿಂದ ಮಳವಳ್ಳಿಗೆ ಆಗಮಿಸಿದ ಪಾದಯಾತ್ರೆ ಉದ್ದಕ್ಕೂ ಡೊಳ್ಳುಕುಣಿತ, ಪೂಜಾಕುಣಿತ, ತಮಟೆ ಸೇರಿದಂತೆ ಜಾನಪದ ಕಲಾತಂಡಗಳು ಗಮನ ಸೆಳೆದವು. ಮಹಿಳೆಯರು ಕುಂಭ ಹೊತ್ತು ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಿದರು. ತ್ರಿವರ್ಣ ಧ್ವಜ ನೋಡುಗರ ಮನ ಸೆಳೆಯುವಲ್ಲಿ ಯಶಸ್ವಿಯಾಯಿತು.
ಕಾರ್ಯಕ್ರಮದಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ರೋಜಿ ಜಾನ್, ಮಾಜಿ ಶಾಸಕರಾದ ರಮೇಶ್ ಬಾಬು
ಬಂಡಿಸಿದ್ದೇಗೌಡ, ಕೆ.ಬಿ. ಚಂದ್ರಶೇಖರ್, ಮಧು ಮಾದೇಗೌಡ, ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ
ದಡದಪುರ ಶಿವಣ್ಣ, ಕುರುಬರ ಸಂಘದ ರಾಜ್ಯ ಉಪಾಧ್ಯಕ್ಷ ಪುಟ್ಟಬಸವಯ್ಯ, ಜಿಲ್ಲಾಧ್ಯಕ್ಷ ಸುರೇಶ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದೇವರಾಜು, ಸುಂದರ್ರಾಜು, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅಂಜನಾ ಶ್ರೀಕಾಂತ್ ಸೇರಿದಂತೆ ಇತರರಿದ್ದರು.




