Sunday, November 22, 2026

ಪ್ರಾಯೋಗಿಕ ಆವೃತ್ತಿ

ಸುಭಾಷ್ ಚಂದ್ರ ಭೋಸ್ ಅವರೇ ಈ ಕೃತ್ಯವನ್ನು ಒಪ್ಪುತ್ತಿರಲಿಲ್ಲ

ಮೂಲ: ಸುಶಾಂತ್ ಸಿಂಗ್
ಕನ್ನಡಕ್ಕೆ : ಸಂತೋಷ ಕೌಲಗಿ


ಗಾಂಧಿ ಮತ್ತು ಭೋಸ್ ಅವರ ನಡುವೆ ಇದ್ದ ಭಿನ್ನಾಭಿಪ್ರಾಯವನ್ನು ಅತಿಯಾಗಿ ಉತ್ಪ್ರೇಕ್ಷೆ ಮಾಡಲಾಗಿದೆ

ಭೋಸ್ ಅವರು ದೇಶ ಭಕ್ತರಲ್ಲಿ ದೇಶ ಭಕ್ತರು” ಎಂದರು. ಗಾಂಧೀಜಿ

ಭೋಸ್ ಅವರು ಸಾವರ್ಕರ ಅಲ್ಲ

ಮುಸ್ಲಿಂ ಲೀಗ್ ಮತ್ತು ಹಿಂದೂ ಮಹಾ ಸಭಾ ಎರಡಕ್ಕೂ ಎಚ್ಚರಿಕೆ


 

ದೆಹಲಿ ಇಂಡಿಯಾ ಗೇಟ್ ಬಳಿ ೧೯೬೮ ರಿಂದ ಖಾಲಿ ನಿಂತಿದ್ದ ಮಂಟಪದಲ್ಲಿ ಕಳೆದ ವಾರ ಸುಭಾಷ್ ಚಂದ್ರ ಭೋಸರ ಪ್ರತಿಮೆಯನ್ನು ನಿಲ್ಲಿಸಲಾಯಿತು. ೧೯೩೯ ರಿಂದ ೧೯೬೮ ರವರಗೆ ಈ ಮಂಟಪದಲ್ಲಿ ಕಿಂಗ್ ಜಾರ್ಜ್ -೫ ಅವ‌ರ ಅಮೃತ ಶಿಲೆಯ ಪ್ರತಿಮೆ ಅಲ್ಲಿತ್ತು. ಈತನು ಬ್ರಿಟಿಷ್ ಸಾಮ್ರಾಟನಾಗಿದ್ದ ಕಾಲದಲ್ಲಿ ‘ಹೊಸ ದೆಹಲಿ’ ರಾಜಧಾನಿಯಾಗಿ ರೂಪಗೊಳ್ಳತೊಡಗಿತು.

ಹಿಂದೆ ಈ ಮಂಟಪದಲ್ಲಿ ಮಹಾತ್ಮ ಗಾಂಧಿಯವರ ಪ್ರತಿಮೆಯನ್ನು ನಿಲ್ಲಿಸಬೇಕೆಂಬ ಪ್ರಸ್ತಾಪ ಬಂದಿತ್ತು. ಕಡೆಗೆ ಇಂದು ಅಲ್ಲಿ ಸುಭಾಷ್ ಚಂದ್ರ ಭೋಸರ ಪ್ರತಿಮೆಯನ್ನು ನಿಲ್ಲಿಸಿ ಭೋಸರು ಗಾಂಧಿಯ ಎದುರಾಳಿ ಎಂಬ ಅಭಿಪ್ರಾಯ ಮೂಡುವಂತೆ ಮಾಡಲಾಯಿತು. ಹಾವರ್ಡ ವಿಶ್ವವಿದ್ಯಾನಿಲಯದ ಚರಿತ್ರೆಕಾರ ಮತ್ತು ಭೋಸ್ ಅವರ ಜೀವನ ಚರಿತ್ರೆ ಬರೆದಿರುವ ಸುಗತ ಭೋಸ್ ಅವರು ಸ್ವಷ್ಟವಾಗಿ “ ಗಾಂಧಿ ಮತ್ತು ಭೋಸ್ ಅವರ ನಡುವೆ ಇದ್ದ ಭಿನ್ನಾಭಿಪ್ರಾಯವನ್ನು ಅತಿಯಾಗಿ ಉತ್ಪ್ರೇಕ್ಷೆ ಮಾಡಲಾಗಿದೆ. ೧೯೩೯ ರಲ್ಲಿ ಭೋಸ್ ಮತ್ತು ಗಾಂಧಿಯವರು ಬೇರ್ಪಟ್ಟಿದ್ದು ತಾತ್ಕಾಲಿಕವಾದದ್ದು.

ಗಾಂಧಿ ಮತ್ತು ಭೋಸ್ ಅವರ ಸಂಬಂಧವನ್ನು ವಿವರವಾಗಿ ನೋಡಿದರೆ ಅವರಿಬ್ಬರ ನಡುವೆ ಆಳವಾದ ಪ್ರೀತಿ, ವಿಶ್ವಾಸ ಮತ್ತು ಆತ್ಮೀಯತೆ ಇತ್ತು ಎಂಬುದು ಅರಿವಾಗುತ್ತದೆ.” ಎಂದು ಹೇಳುತ್ತಾರೆ. ಭೋಸರು ಕಾಂಗ್ರೆಸ್ ಆಧ್ಯಕ್ಷ ಪದವಿಗೆ ರಾಜಿನಾಮೆ ಕೊಟ್ಟಾಗಲೂ ಕೂಡ ಅವರು ಕಾಂಗ್ರೆಸ್ ನಲ್ಲಿದ್ದ ಬಲಪಂಥೀಯ ಧೋರಣೆಯ ಜನರನ್ನು ವಿರೋಧಿಸಿದರೆ ಹೊರತು, ಗಾಂಧಿಯವರ ಬಗ್ಗೆ ವೈಯುಕ್ತಿಕ ದೋಷಾರೋಪಣೆಯನ್ನಾಗಲೀ, ಟೀಕೆಯನ್ನಾಗಲೀ ಅವರು ಮಾಡಲಿಲ್ಲ. ಬದಲಿಗೆ ಅವರು ನೀಡಿದ ಹೇಳಿಕೆ ಹೀಗಿದೆ. ಯಾವಾಗಲೂ ನನ್ನ ಗುರಿ ಮತ್ತು ಉದ್ದೇಶವು ಗಾಂಧಿಯವರ ವಿಶ್ವಾಸವನ್ನು ಗಳಿಸುವುದೇ ಆಗಿದೆ. ಅದಕ್ಕಿರುವ ಸರಳ ಕಾರಣವೆಂದರೆ, ಬೇರೆ ಎಲ್ಲರ ವಿಶ್ವಾಸವನ್ನು ಗಳಿಸಿ ದೇಶದ ಅಪ್ರತಿಮ ವ್ಯಕ್ತಿಯ ವಿಶ್ವಾಸವನ್ನು ಗಳಿಸಲು ನಾನು ಸೋತರೆ ಅದಕ್ಕಿಂತ ದುರಂತ ಇನ್ನೊಂದಿಲ್ಲ.

ಗಾಂಧಿಯವರನ್ನು ‘ರಾಷ್ಟ್ರಪಿತ’ ಎಂದು ಅತ್ಯಂತ ಗೌರವದಿಂದ ಮೊದಲು ಕರೆದವರೇ ಸುಭಾಷ ಚಂದ್ರ ಭೋಸ್ ಅವರು. ಇದನ್ನು ಅವರು ೧೯೪೪ ಜುಲೈ ೬ ರಂದು ಸಿಂಗಪೂರ ರೇಡಿಯೋ ದ ಮೂಲಕ ಮಾಡಿದ ಭಾಷಣದಲ್ಲಿ ಮೊದಲ ಬಾರಿಗೆ ಈ ವಿಶೇಷಣವನ್ನು ಅವರು ಗಾಂಧೀಜಿಯವರಿಗೆ ನೀಡಿದರು. ೧೯೪೩ ರಲ್ಲಿ ಗಾಂಧಿಯವರ ಹುಟ್ಟಿದ ದಿನದಂದು ಬರ್ಲಿನ್ ನಿಂದ ಆಜಾದ್ ಹಿಂದ್ ರೇಡಿಯೋ ಮೂಲಕ ಭೋಸ್ ಅವರು” ಮಹಾತ್ಮ ಗಾಂಧೀಯವರು ಭಾರತಕ್ಕೆ ಮಾಡಿರುವ ಸೇವೆ ಮತ್ತು ದೇಶದ ಸ್ವಾತಂತ್ರಕ್ಕೆ ನೀಡಿರುವ ಕೊಡುಗೆ ವಿಶಿಷ್ಟವಾದುದು. ಅದಕ್ಕೆ ಸಮಾನವಾದುದು ಇನ್ನೊಂದಿಲ್ಲ.

ಭಾರತ ದೇಶದ ಚರಿತ್ರೆಯಲ್ಲಿ ಗಾಂಧಿಯವರ ಹೆಸರು ಸ್ವರ್ಣಾಕ್ಷರದಲ್ಲಿ ಬರೆಯಲ್ಪಟ್ಟು ಅದು ಶಾಶ್ವತವಾಗಿ ಇರುತ್ತದೆ” ಎಂದಿದ್ದಾರೆ. ಅಲ್ಲದೆ ಭೋಸ್ ಅವರು ಕಟ್ಟಿದ್ದ ಭಾರತೀಯ ರಾಷ್ಟ್ರೀಯ ಸೈನ್ಯದ ಒಂದು ತುಕಡಿಗೆ ಮಹಾತ್ಮ ಗಾಂಧಿಯವರ ಹೆಸರು ಇಟ್ಟಿದ್ದರು. ಇತ್ತೀಚಿಗೆ ಕೃಷ್ಟ ಭೋಸ್ ಅವರು ನೇತಾಜಿಯವರ ಬಗ್ಗೆ ಬರೆದಿರುವ ಪುಸ್ತಕದಲ್ಲಿ ಅಜಾದ್ ಹಿಂದ್ ಫೌಜ್ ಆಗ್ನೇಯ ಏಶಿಯಾದಲ್ಲಿ ಏರ್ಪಡಿಸುತ್ತಿದ್ದ ಕಾರ್ಯಕ್ರಮಗಳ ಅನೇಕ ಚಿತ್ರಗಳನ್ನು ನೋಡಬಹುದು. ಆ ಚಿತ್ರಗಳಲೆಲ್ಲಾ ವೇದಿಕೆಯ ಹಿಂದೆ ಮಹಾತ್ಮ ಗಾಂಧಿಯವರು ಬೃಹತ್ ಚಿತ್ರಗಳು ಇರುವುದನ್ನು ಕಾಣಬಹುದು.

ಗಾಂಧೀಜಿಯವರೂ ಕೂಡ ನೇತಾಜಿಯವರ ಬಗ್ಗೆ ಅಷ್ಟೇ ಆದರವನ್ನು ಹೊಂದಿದ್ದರು. ಅಮೇರಿಕಾದ ಪತ್ರಕರ್ತ ಲೂಯಿಸ್ ಫಿಶರ್‍ ಅವರು ಗಾಂಧೀಜಿಯವರನ್ನು, ಭೋಸರು ಎರಡನೇ ಮಹಾಯುದ್ಧದ ಸಂದರ್ಭದಲ್ಲಿ, ಜರ್ಮನಿಯಿಂದ ನೆರವು ಪಡೆಯುತ್ತಿರುವುದರ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂದು ಕೇಳಿದಾಗ ಗಾಂಧೀಜಿಯವರು” ಭೋಸ್ ಅವರು ದೇಶ ಭಕ್ತರಲ್ಲಿ ದೇಶ ಭಕ್ತರು” ಎಂದರು. ಗಾಂಧೀಜಿಯವರು ಐ ಎನ್ ಎ ಸೈನಿಕರನ್ನು ಬಂಧಿಸಿ ಇಟ್ಟಿದ್ದ ದೆಹಲಿಯ ಸೆರೆಮನೆಗೆ ಆಗಾಗ್ಗೆ ಭೇಟಿಯಿತ್ತು ಅವರೊಂದಿಗೆ ಮಾತನಾಡಿ ಧೈರ್ಯ ತುಂಬುತ್ತಿದ್ದರು.

ಇದೇ ರೀತಿಯಲ್ಲಿ ನೆಹರು ಮತ್ತು ಭೋಸ್ ಅವರ ಸಂಬಂಧದ ಬಗ್ಗೆಯೂ ದುರ್ನೀತಿಯ ಪ್ರಚಾರವನ್ನು ಮಾಡಲಾಗುತ್ತಿದೆ. ಕಾಂಗ್ರೆಸ್ ನಲ್ಲಿದ್ದ ಪ್ರಗತಿಪರ ಗುಂಪಿನಲ್ಲಿ ನೆಹರು-ಭೋಸ್ ಒಟ್ಟಿಗೆ ಇದ್ದರು. ಗಾಢವಾದ ಗೆಳೆತನ ಅವರಿಬ್ಬರ ನಡುವೆ ಇತ್ತು. ನೆಹರು ಅವರು ಸೆರೆವಾಸ ಅನುಭವಿಸುತ್ತಿದ್ದಾಗ ಯುರೋಪಿನ ಕ್ಷಯ ರೋಗದ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಕಮಲಾ ನೆಹರು ಅವರ ಆರೈಕೆಯನ್ನು ಭೋಸ್‌ ಅವರು ಮಾಡುತ್ತಿದ್ದರು.

೧೯೩೮ ರಲ್ಲಿ ರಾಷ್ಟ್ರೀಯ ಯೋಜನಾ ಸಮಿತಿಯ ನೇತೃತ್ವವನ್ನು ವಹಿಸಿಕೊಳ್ಳಲು ಆಗ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಭೋಸ್ ಅವರು ನೆಹರು ಅವರನ್ನು ಕೇಳಿ ಕೊಂಡರು. ಆದರೆ ಬಹಳ ಕೆಲಸದ ಒತ್ತಡ ಇದ್ದುದರಿಂದ ಆ ಜವಾಬ್ದಾರಿಯನ್ನು ಹೊರಲು ನೆಹರು ಅವರು ಹಿಂದೇಟು ಹಾಕುತ್ತಿದ್ದರು. ಆಗ ಮಧ್ಯ ಪ್ರವೇಶಿಸಿದ ರವೀಂದ್ರ ನಾಥ ಟಾಗೋರ್‍ ಅವರು “ಕಾಂಗ್ರೆಸ್ ನ ಚುಕ್ಕಾಣಿ ಹಿಡಿದಿರುವವರಲ್ಲಿ ಕೇವಲ ಇಬ್ಬರು ಪ್ರಗತಿಪರರು ಇದ್ದಾರೆ. ಅವರು ನೆಹರು ಮತ್ತು ಸುಭಾಷ್ ಬಾಬು. ಸದ್ಯ ಸುಭಾಷ್ ಬಾಬು ಕಾಂಗ್ರೆಸ್ ಅಧ್ಯಕ್ಷರಾಗಿರುವುದರಿಂದ ಆ ಜವಾಬ್ದಾರಿಯನ್ನು ನೆಹರೂ ಅವರು ವಹಿಸಿಕೊಳ್ಳುವುದು ಅನಿವಾರ್ಯ” ಎಂದರು.

ಭೋಸ್ ಇಂಡಿಯನ್ ನ್ಯಾಶನಲ್ ಆರ್ಮಿಯ ಮತ್ತೊಂದು ತುಕಡಿಗೆ ನೆಹರು ಅವರ ಹೆಸರನ್ನು ಇಟ್ಟಿದ್ದರು. ಬ್ರಿಟಿಷ್ ಸರ್ಕಾರದ ಮಿಲಿಟರಿ ನ್ಯಾಯಾಲಯದಲ್ಲಿ ಇಂಡಿಯನ್ ನ್ಯಾಶನಲ್ ಆರ್ಮಿಯ ಸೈನಿಕರ ಪರವಾಗಿ ವಾದಿಸಲು ನೆಹರು ಅವರು ತಾವು ತ್ಯಜಿಸಿದ್ದ ವಕೀಲಿ ವೃತ್ತಿಯನ್ನು ಮತ್ತೆ ಕೈಗೊಂಡು ಮೂವತ್ತು ವರ್ಷಗಳ ನಂತರ ಮತ್ತೆ ಕರಿಯ ಕೋಟನ್ನು ಧರಿಸಿದರು. ಆಗಸ್ಟ್ ೧೬, ೧೯೪೭ ರ ರಾತ್ರಿ ತಮ್ಮ ಮೊದಲ ಸ್ವಾತಂತ್ರ ದಿನಾಚರಣೆಯ ಭಾಷಣವನ್ನು ಕೆಂಪು ಕೋಟೆಯ ಮೇಲಿಂದ ಮಾಡಿದ ನೆಹರು ಅವರು, ಇದು ’ದಿಲ್ಲಿ ಚಲೋ’ ಮಾಡಿ ಕೆಂಪು ಕೋಟೆಯ ಮೇಲೆ ತ್ರಿವರ್ಣ ಧ್ವಜ ಹಾರಿಸಬೇಕೆಂಬ ಸುಭಾಷ ಚಂದ್ರ ಭೋಸ್ ಅವರ ಕನಸು ನನಸಾದ ದಿನ ಎಂದರು. ಗಾಂಧೀಜಿಯವರ ಹೆಸರನ್ನು ಪ್ರಸ್ತಾಪಿಸಿದ ನಂತರ ’ನಾನು ದೇಶಕ್ಕಾಗಿ ತ್ಯಾಗ ಮಾಡಿದ ಎಲ್ಲರ ಹೆಸರನ್ನು ಹೇಳುವ ಅಗತ್ಯವಿಲ್ಲ, ಆದರೂ ಸುಭಾಷ್ ಚಂದ್ರ ಭೋಸರ ಹೆಸರನ್ನು ಹೇಳದೇ ಇರಲಾಗದು. ಅವರು ವಿದೇಶಗಳಲ್ಲಿ ಈ ರಾಷ್ಟ್ರ ಬಾವುಟವನ್ನು ಹಾರಿಸಿದರು ,ಆದರೆ ಇಂದು ಕೆಂಪು ಕೋಟೆಯ ಮೇಲೆ ಈ ಬಾವುಟ ಹಾರುವ ಸಮಯದಲ್ಲಿ ಅವರು ನಮ್ಮೊಂದಿಗೆ ಇಲ್ಲ. ಅವರ ಕನಸು ನನಸಾದದ್ದನ್ನು ನೋಡಲು ಅವರು ಇಲ್ಲ ಎಂದರು.

ಅಜಾದ್ ಹಿಂದ್ ಸರ್ಕಾರದ ಭಾವುಟ ಎಂದು ಭೋಸರು ಹಾರಿಸಿದ್ದು ಕಾಂಗ್ರೆಸ್ಸಿನ ಬಾವುಟವೇ ಆಗಿತ್ತು. ತ್ರಿವರ್ಣಗಳ ನಡುವೆ ಚರಕ ಇತ್ತು. ರಾಷ್ಟ್ರ ಗೀತೆಯಾಗಿ ಆಯ್ದು ಕೊಂಡದ್ದು ’ಜನಗಣ ಮನ’ ಆಗಿತ್ತು. ಭೋಸ್ ಅವರು ಹದಿನಾರಾಣೆ ಜಾತ್ಯತೀತರಾಗಿದ್ದರು. ಅವರಿಗೆ ಭಾರತದ ಮಿಶ್ರ ಸಂಸ್ಕೃತಿಯಲ್ಲಿ ನಂಬಿಕೆ ಇತ್ತು. ಐಎನ್ಎ ಯಲ್ಲಿ ಅವರ ಅತ್ಯಂತ ಹತ್ತಿರದ ಸಂಗಾತಿಗಳು ಮುಸುಲ್ಮಾನರಾಗಿದ್ದರು. ಸಿಂಗಪೂರ್‍ ದೇಶದಲ್ಲಿ ಜಾತಿಯ ಕಾರಣದಿಂದ ಕೆಲವರಿಗೆ ದೇವಸ್ಥಾನ ಪ್ರವೇಶ ನಿರಾಕರಿಸಿದ್ದಕ್ಕೆ ಅವರು ದೇವಸ್ಥಾನವನ್ನು ಪ್ರವೇಶಿಸದೇ ಹಿಂದಿರುಗಿದ್ದರು. ಪ್ರಧಾನ ಮಂತ್ರಿ ಮೋದಿಯವರು ತಮ್ಮ ಭಾಷಣದಲ್ಲಿ ಸ್ವತಂತ್ರ ಭಾರತ ನೇತಾಜಿಯವರ ಮಾರ್ಗದಲ್ಲಿ ಹೆಜ್ಜೆ ಹಾಕಲಿಲ್ಲ ಎಂದಿದ್ದಾರೆ. ಆದರೆ ನೇತಾಜಿಯವರ ನಿಜವಾದ ಮಾರ್ಗವು ಇಂದು ಅಧಿಕಾರದಲ್ಲಿ ಇರುವ ಹಲವರಿಗೆ ನಡೆಯಲು ಸಾಧ್ಯವೇ ಇಲ್ಲ.

ಕಾಂಗ್ರೆಸ್ ಪಕ್ಷವು ಭಾರತ ಬಿಟ್ಟು ತೊಲಗಿ ಚಳುವಳಿಗೆ ಕರೆ ಕೊಟ್ಟಾಗ, ಜರ್ಮನಿಯಲ್ಲಿದ್ದ ಭೋಸ್ ಅವರು ಮಾಡಿದ ಭಾಷಣದಲ್ಲಿ ಮುಸ್ಲಿಂ ಲೀಗ್ ಮತ್ತು ಹಿಂದೂ ಮಹಾ ಸಭಾ ಎರಡಕ್ಕೂ ಎಚ್ಚರಿಕೆ ನೀಡುವ ಮಾತನ್ನಾಡಿದ್ದಾರೆ. ಅವರು ಈ ಎರಡು ಸಂಘಟನೆಗಳನ್ನು ತಿರಸ್ಕಾರದಿಂದ ನೋಡುತ್ತಿದ್ದರು. ಅಜಾದ್ ಹಿಂದ್ ಸರ್ಕಾರ್‍ ಅಂಡಮಾನ್ ಮತ್ತು ನಿಕೋಬಾರ್‍ ನಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಿದಾಗ ಭೋಸ್ ಅವರು ತಮ್ಮ ಭಾಷಣದಲ್ಲಿ ಎಲ್ಲಿಯೂ ಸಾವರ್ಕರ್‍ ಅವರ ಹೆಸರನ್ನು ಪ್ರಸ್ತಾಪಿಸಿಯೇ ಇಲ್ಲ. ಭೋಸ್ ಅವರಿಗೆ ಹಿಟ್ಲರ್‍ ಬಗ್ಗೆ ಅಂತಹ ಒಲವು ಏನೂ ಇಲ್ಲದಿದ್ದರೂ, ಭಾರತದ ಸ್ವತಂತ್ರಕ್ಕಾಗಿ ಆತನ ನೆರವನ್ನು ಪಡೆಯಲು ಪ್ರಯತ್ನಿಸಿದ್ದರು. ಆದರೆ ಹಿಂದುತ್ವ ಸಂಘಟನೆಗಳು ಹಿಟ್ಲರನ ನಾಝಿ ವಿಚಾರಧಾರೆಯನ್ನು ಅನುಸರಿಸುತ್ತಲೇ ಬ್ರಿಟೀಷರಿಗೆ ವಿಧೇಯವಾಗಿದ್ದವು.

ಭೋಸ್ ಅವರು ಸಾವರ್ಕರ ಅಲ್ಲ. ಆದರೆ ಇಂದು ನಿಲ್ಲಿಸಿರುವ ಅವರ ಪ್ರತಿಮೆಯನ್ನು ಹಿಂದುತ್ವದ ವಿಚಾರಧಾರೆಯೊಂದಿಗೆ ಸಮೀಕರಿಸಲಾಗುತ್ತಿದೆ. ವಿನಾಯಕ ಚತುರ್ವೇದಿ ಅವರ ಇತ್ತೀಚಿನ ಪುಸ್ತಕದಲ್ಲಿ ಸಾವರ್ಕರ್‍ ಅವರ ಅಂತಿಮ ತೀರ್ಮಾನವು “ಹಿಂದೂಗಳು ಹಿಂದೆ ಯುದ್ಧದ ಸ್ಥಿತಿಯಲ್ಲಿಯೇ ಇದ್ದರು. ಮುಂದೆಯೂ ಸಹ ಅವರು ತಮ್ಮ ಭವಿಷ್ಯಕ್ಕಾಗಿ ಯುದ್ಧವನ್ನು ಆಲಂಗಿಸಿಕೊಳ್ಳುವುದು ಅವರಿಗೆ ಅನಿವಾರ್ಯವಾಗಿದೆ. ’ಹಿಂದೂಗಳು ತಾವು ಹಿಂದೂಗಳು ಎಂಬುದನ್ನು ಹಿಂಸೆಯ ವರ್ತನೆ ಇಂದಷ್ಟೇ ಅರ್ಥಮಾಡಿಕೊಳ್ಳುತ್ತಾರೆ” ಇದು ಗಾಂಧೀಜಿಯವರ ಅಹಿಂಸೆಯ ನಂಬಿಕೆಗೆ ಬದಲಾಗಿ, ಸಾವರ್ಕರ್‍ ಅವರ ಮೇಲಿನ ನಿಲುವು ದೇಶದ ಪ್ರಬಲ ನಂಬಿಕೆ ಎಂದು ಬಿಂಬಿಸುವ ಪ್ರಯತ್ನವಾಗಿದೆ. ಮಿಲಿಟರಿ ಸಮವಸ್ತ್ರದಲ್ಲಿ ಕಾಣುವ ಭೋಸ್ ಅವರು ಈ ನಂಬಿಕೆಯನ್ನು ಮುನ್ನೆಲೆಗೆ ತರಲು ಮಹತ್ವದ ಸಾಧನವಾಗಿ ಅವರಿಗೆ ಕಾಣುತ್ತಿದ್ದಾರೆ. ಆದರೆ ಇದು ಭೋಸ್ ಅವರು ತಮ್ಮ ಜೀವಮಾನದುದ್ದಕ್ಕೂ ಪ್ರಬಲವಾಗಿ ವಿರೋಧಿಸಿದ ತತ್ವವೇ ಆಗಿದೆ.

ಈಗ ಮೂರ್ತಿ ರೂಪದಲ್ಲಿ ಸುಭಾಷ್ ಚಂದ್ರ ಭೋಸ್ ಅವರನ್ನು ನಿಲ್ಲಿಸಿರುವ ಆ ಖಾಲಿ ಮಂಟಪ ಒಂದು ರೂಪಕವಾಗಿತ್ತು. ಅದು ಯಾರಿಗೂ ವಿಧೇಯನಾಗಿರುವ ಅಗತ್ಯವಿಲ್ಲವೆಂದು ಹೇಳುತ್ತಿತ್ತು. ಹಾಗೆಯೇ ಪ್ರಜಾಪ್ರಭುತ್ವದಲ್ಲಿ ಅಧಿಕಾರ ಎಂಬುದು ಅಶಾಶ್ವತವಾದುದು ಎಂಬುದನ್ನೂ ಅದು ಪ್ರತಿನಿಧಿಸುತ್ತಿತ್ತು. ಆದರೆ ಇಂದು ಮತ್ತೊಂದು ಸಂಕೇತದ ಬೀಜವನ್ನು ಅಲ್ಲಿ ಬಿತ್ತಲಾಗಿದೆ. ರಾಷ್ಟ್ರದ ಶಕ್ತಿಕೇಂದ್ರದಲ್ಲಿ ಒಬ್ಬ ರಾಜಕೀಯ ನಾಯಕ ಸೈನ್ಯದ ಸಮವಸ್ತ್ರವನ್ನು ಧರಿಸಿ ನಿಂತ ಪ್ರತಿಮೆ ಅಲ್ಲಿ ನಿಂತಿದೆ. ಸುಭಾಷ ಚಂದ್ರ ಭೋಸ್ ಅವರ ವ್ಯಕ್ತಿತ್ವವನ್ನು ತಪ್ಪಾಗಿ ಅರ್ಥೈಸಿ, ಅವರಿಗೆ ಗಾಂಧೀಜಿ ಮತ್ತು ನೆಹರು ಅವರೊಂದಿಗೆ ಖಾಸಗಿ ವೈರತ್ವ ಇತ್ತು ಎಂದು ಬಿಂಬಿಸಲಾಗುತ್ತದೆ. ಗಾಂಧೀ ಅವರ ಕಲ್ಪನೆಯ ಭಾರತಕ್ಕೆ ಸುಭಾಷಚಂದ್ರ ಭೋಸರ ವಿರೋಧವಿತ್ತು ಎನ್ನುವಂತೆ ಮಾಡಲಾಗುತ್ತಿದೆ. ಆದರೆ ಇದೇ ಸಮಯದಲ್ಲಿ ಸತ್ಯಕ್ಕಿಂತಲೂ ಯಾವುದನ್ನೂ ವಿಸ್ತರಿಸಲು ಸಾಧ್ಯವಿಲ್ಲಎಂಬುದನ್ನೂ ನಾವು ಅರಿತುಕೊಳ್ಳಬೇಕಿದೆ.

ಸಾಭಾರ: ಡೆಕ್ಕನ್ ಹೆರಾಲ್ಡ್.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ