ನಾವು ಮಾಡುವ ಕೆಲಸವನ್ನು ಪ್ರೀತಿಸದ ಹೊರತು, ಕೆಲಸ ನಮ್ಮನ್ನು ಅಪ್ಪಿಕೊಳ್ಳುವುದಿಲ್ಲ, ಇದನ್ನು ಅರಿತುಕೊಂಡು ನಮ್ಮ ಸೇವಾ ದಕ್ಷತೆಯನ್ನು ವೃದ್ದಿಸಿಕೊಂಡರೆ ಯಶಸ್ಸು ಗಳಿಸಲು ಸಾಧ್ಯವಿದೆ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಅಭಿಪ್ರಾಯಿಸಿದರು.
ಮಂಡ್ಯ ನಗರದ ಜಿ.ಪಂ. ಕಾವೇರಿ ಸಭಾಂಗಣದಲ್ಲಿ ಜಿಲ್ಲಾ ಸರ್ಕಾರಿ ನೌಕರರ ಸಂಘ ಆಯೋಜಿಸಿದ್ದ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ, ಎಚ್.ಆರ್.ಎಂ.ಎಸ್ 2.0 ಮತ್ತು ಕೆ-2 ತಂತ್ರಾಂಶಗಳ ಕುರಿತ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಸರ್ಕಾರ ಜಾರಿಗೊಳಿಸುವ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಟಾನಗೊಳಿಸುವ ಹೊಣೆಗಾರಿಕೆ ಸರ್ಕಾರಿ ನೌಕರರು ಹಾಗೂ ಅಧಿಕಾರಿಗಳಾದ್ದಾಗಿದ್ದು, ಒಕ್ಕೊರಲ ಕಾರ್ಯ ನಿರ್ವಹಣೆಯಿಂದ ಯಶಸ್ಸುಗಳಿಸಬಹುದಾಗಿದ್ದು, ಜಿಲ್ಲೆಯ ಸಮರ್ಥ ನೌಕರ ವರ್ಗದ ದಕ್ಷತೆಯ ಕಾರ್ಯ ನಿರ್ವಹಣೆಗೆ ಜಿಲ್ಲಾಡಳಿತದ ವತಿಯಿಂದ ಮೆಚ್ಚುಗೆ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿ ಸುಮಾರು 19 ಲಕ್ಷ ಜನಸಂಖ್ಯೆಯಿದ್ದು 18 ಸಾವಿರ ಮಂದಿ ಸರ್ಕಾರಿ ನೌಕರರು ಕಾರ್ಯ ನಿರ್ವಹಿಸುತ್ತಿದ್ದು ಸರ್ಕಾರಿ ಯೋಜನೆಗಳನ್ನು ಸಮರ್ಥವಾಗಿ ಜಾರಿಗೊಳಿಸಲು ಪ್ರಾಮಾಣಿಕತೆ ಹಾಗೂ ಪರಿಶುದ್ದ ಕಾರ್ಯ ನಿರ್ವಹಣೆಯ ಅಗತ್ಯತೆ ಇದೆ ಎಂದರು.
ಅಧಿಕಾರಿಗಳ ಕಾರ್ಯ ನಿರ್ವಹಣೆ ನೌಕರರಿಗೆ ಅನುಕರಣೆಯಾಗಲಿ – ನಂದಿನಿ
ಶಿಕ್ಷಕರು ಹಾಗೂ ಪೋಷಕರ ನಡೆ – ನುಡಿಯನ್ನು ವಿದ್ಯಾರ್ಥಿಗಳು ಹಾಗೂ ಮಕ್ಕಳು ಅನುಸರಿಸುತ್ತಾರೆ, ಅದೇ ರೀತಿ ಇಲಾಖಾ ಮುಖ್ಯಸ್ಥರ ಕಾರ್ಯ ನಿರ್ವಹಣೆಯನ್ನು ನೌಕರರು ಪಾಲಿಸುತ್ತಾರೆ. ಅದಕ್ಕಾಗಿ ನಮ್ಮ ಕಾರ್ಯ ನಿರ್ವಹಣೆ ನೌಕರರಿಗೆ ಅನುಕರಣೆಯಾಗುವಂತಿರಲಿ ಎಂದು ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಂದಿನಿ ಕೆ.ಆರ್ ತಿಳಿಸಿದರು.
ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ವಿಷಯ ಜ್ಞಾನ ಹಾಗೂ ಧನಾತ್ಮಕ ಶಕ್ತಿ ರೂಢಿಸಿಕೊಳ್ಳಬೇಕು, ಆಗ ಎಂತಹ ಕಠಿಣ ಸವಾಲುಗಳನ್ನು ಎದುರಿಸಲು ಸಾಧ್ಯವಾಗುತ್ತದೆ, ಮಹಿಳಾ ನೌಕರರು ನೈಪುಣ್ಯತೆ ಮತ್ತು ಅರಿವು ಪಡೆದುಕೊಳ್ಳಲು ಮುಂದಾಗಬೇಕೆಂದು ಕಿವಿಮಾತು ಹೇಳಿದರು.
ಪ್ರತಿಯೊಬ್ಬ ನೌಕರರಿಗೂ ವೃತ್ತಿ ಗೌರವ ನೀಡಬೇಕು, ರಾಷ್ಟ್ರಕವಿ ಕುವೆಂಪು ಹೇಳಿರುವಂತೆ ಇಲ್ಲಿ ಯಾರು ಶ್ರೇಷ್ಟರಲ್ಲ ಯಾರೂ ಕನಿಷ್ಟರಲ್ಲ, ಎಲ್ಲರೂ ಶ್ರೀ ಸಾಮಾನ್ಯರು ಎಂಬ ಮಾತಿಗರ್ಥವಾಗಿ ಡಿ.ಗ್ರೂಪ್, ಚಾಲಕರು, ಸ್ವಚ್ಚತಾಗಾರರು, ವಾಟರ್ ಮೆನ್, ಬಿಲ್ ಕಲೆಕ್ಟರ್ ಗಳಿಗೆ ವೃತ್ತಿ ಗೌರವ ನೀಡಬೇಕು ಕಾರ್ಯನಿರ್ವಹಣೆಯಲ್ಲಿ ಸ್ವಾತಂತ್ರ್ಯ ನೀಡಬೇಕೆಂದರು.
ಪ್ರತಿಯೊಬ್ಬರೂ ಒಳ್ಳೆಯ ಯೋಚನೆ, ಯೋಜನೆ ಇಟ್ಟುಕೊಂಡು ಸರ್ಕಾರಿ ಕೆಲಸಕ್ಕೆ ಸೇರುತ್ತಾರೆ. ಸದಾ ಸೃಜನಾತ್ಮಕತೆ ರೂಢಿಸಿಕೊಂಡರೇ ಯಶಸ್ಸು ಗಳಿಸಲು ಸಾಧ್ಯ ಎಂದು ಅಭಿಪ್ರಾಯಿಸಿದ ಅವರು ಜಿಲ್ಲೆಯ ಹಲವು ಸಾಧನೆಗಳಲ್ಲಿ ನೌಕರರ ಪಾತ್ರವು ಅಪಾರ ಎಂದು ಬಣ್ಣಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆ.ನಾಗೇಶ್, ಜಿಲ್ಲಾಧಿಕಾರಿಗಳು, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಉತ್ತಮ ಕಾರ್ಯ ನಿರ್ವಹಣೆಯಿಂದ ಜಿಲ್ಲೆಗೆ ಹಲವು ಸಾಧನಾ ಪ್ರಶಸ್ತಿಗಳು ಲಭ್ಯವಾಗಿದ್ದು, ಉಭಯ ಅಧಿಕಾರಿಗಳ ಪ್ರೇರಣೆ ನಮ್ಮ ನೌಕರರ ಕಾರ್ಯ ನಿರ್ವಹಣೆಗೆ ಸಹಕಾರಿಯಾಗಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಜಿಲ್ಲೆಯ ಸರ್ಕಾರಿ ನೌಕರರ ಕುಂದುಕೊರತೆ, ಯೋಜನೆಗಳ ಅನುಷ್ಟಾನಕ್ಕೆ ವ್ಯಕ್ತವಾಗುವ ಸಂಶಯಗಳನ್ನು ನಿವಾರಿಸಲು ಕಾರ್ಯಾಗಾರ ಆಯೋಜಿಸಿರುವ ಜಿಲ್ಲಾ ಸರ್ಕಾರಿ ನೌಕರರ ಸಂಘದ ಕಾರ್ಯವೈಖರಿಯನ್ನು ಪ್ರಶಂಸಿಸಿದ ಜಿಲ್ಲಾಧಿಕಾರಿಗಳು ನೌಕರರಿಗೆ ಸಲ್ಲಬೇಕಾದ ವೈದ್ಯಕೀಯ ಭತ್ಯೆ, ಮುಂಬಡ್ತಿ, ಗೌರವ ಧನ ಬಿಡುಗಡೆ ಸೇರಿದಂತೆ ಇತರೆ ಸಮಸ್ಯೆಗಳ ನಿವಾರಣೆಗೆ ಒತ್ತು ನೀಡಲಾಗುವುದೆಂದರು.
ಜಿಲ್ಲೆಯಲ್ಲಿ ಈ ಹಿಂದೆ ನಡೆದ ಸಾಮಾಜಿಕ ಮತ್ತು ಶೈಕ್ಷಣಿಕ ಗಣತಿದಾರರಿಗೆ ಸರ್ಕಾರದಿಂದ ಬಿಡುಗಡೆಯಾಗಿದ್ದ 7.63 ಕೋಟಿ ಸಹಾಯಧನದ ಪೈಕಿ 7 ಕೋಟಿ ಹಣ ತ್ವರಿತ ಬಿಡುಗಡೆಗೆ ಜಿಲ್ಲಾಡಳಿತ ಹೊಣೆಗಾರಿಕೆ ನಿರ್ವಹಿಸಿದೆ. ತಾಂತ್ರಿಕ ಅಡಚಣೆಯಿಂದ ಬಾಕಿ ಇರುವ 63 ಲಕ್ಷ ರೂ. ಬಿಡುಗಡೆಗೂ ಪ್ರಯತ್ನಿಸಲಾಗುತ್ತಿದೆ ಎಂದರು.
ಮಂಡ್ಯ ಜಿಲ್ಲೆಯ ಸರ್ಕಾರಿ ನೌಕರರ ವಲಯ ಸರ್ಕಾರದ ಯೋಜನೆ ಹಾಗೂ ಕಾರ್ಯಕ್ರಮಗಳ ಯಶಸ್ಸಿಗೆ ಜಿಲ್ಲಾಡಳಿತದ ಜೊತೆ ಹೆಗಲಿಗೆ ಹೆಗಲು ಕೊಟ್ಟು ದುಡಿದ ಪರಿಣಾಮ ಜಿಲ್ಲೆಯಲ್ಲಿ ನಡೆದ ಚುನಾವಣೆಗಳು, ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ, ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಹಾಗೂ ಸರ್ಕಾರಿ ಕಾರ್ಯಕ್ರಮಗಳು ಯಶಸ್ವಿಯಾಗಿದೆ. ಇದು ಜಿಲ್ಲೆಯ ಸರ್ಕಾರಿ ನೌಕರರ ದಕ್ಷತೆಯನ್ನು ಪ್ರತಿಬಿಂಬಿಸುತ್ತದೆ ಎಂದು ತಿಳಿಸಿದರು.
ಪ್ರತಿಯೊಬ್ಬ ಸರ್ಕಾರಿ ನೌಕರರು ತಮ್ಮ ಕಾರ್ಯ ನಿರ್ವಹಣೆಯ ಸ್ಥಳವನ್ನು ಸ್ವಂತ ಮನೆಯಂತೆ ಪ್ರೀತಿಸಬೇಕು. ಕೆಲಸ ಪ್ರೀತಿಯ ವ್ಯಕ್ತ ರೂಪ ಎಂದು ಮನಗಾಣಬೇಕು ಎಂದು ಕಿವಿಮಾತು ಹೇಳಿದ ಜಿಲ್ಲಾಧಿಕಾರಿಗಳು ಪ್ರತಿ ನೌಕರರು ತಮ್ಮ ಸೇವಾವಧಿಯಲ್ಲಿ ಶಿಸ್ತು, ದಕ್ಷತೆ, ಪ್ರೀತಿ ಎಂಬ ಮೂರು ಮೌಲ್ಯಗಳನ್ನು ರೂಢಿಸಿಕೊಳ್ಳಬೇಕು ಆ ಮೂಲಕ ಆತ್ಮಸಾಕ್ಷಿ ಮತ್ತು ಮನಸಾಕ್ಷಿ ಮೆಚ್ಚುವ ಕೆಲಸ ನಿರ್ವಹಣೆಗೆ ಮುಂದಾಗಬೇಕೆಂದರು.
ಜಿಲ್ಲೆಯ ಸರ್ಕಾರಿ ನೌಕರರಿಗೆ ನಗದು ರಹಿತ ಚಿಕಿತ್ಸೆ ನೀಡಲು ಜಾರಿಗೊಳಿಸಿರುವ ಆರೋಗ್ಯ ಸಂಜೀವಿನಿ ಯೋಜನೆಯನ್ನು ಮೂರು ಆಸ್ಪತ್ರೆಗಳಿಂದ 12 ಆಸ್ಪತ್ರೆಗಳಿಗೆ ವಿಸ್ತರಿಸಲಾಗಿದೆ. ಕಂದಾಯ ಇಲಾಖೆಯ 13 ಬೇಡಿಕೆಗಳ ಈಡೇರಿಕೆಗೆ ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.
ಎಚ್.ಆರ್.ಎಂ.ಎಸ್ 2.0 ಮತ್ತು ಕೆ-2 ತಂತ್ರಾಂಶದ ಕಾರ್ಯ ನಿರ್ವಹಣೆಗೆ ಎದುರಾಗುವ ತೊಡಕುಗಳನ್ನು ನಿವಾರಿಸಲು ಸಂಪನ್ಮೂಲ ವ್ಯಕ್ತಿಗಳಿಂದ ಮಾಹಿತಿ ನೀಡಲಾಗುವುದು, ಅದನ್ನು ಅಸ್ಥೆಯಿಂದ ಅರಿತು ಪಾರದರ್ಶಕತೆ ಹಾಗೂ ಕಾಗದರಹಿತ ನಿರ್ವಹಣೆಗೆ ಮುಂದಾಗಬೇಕೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಜಿ.ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಆರ್.ನಂದಿನಿ, ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದ ಮೂರ್ತಿ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆ.ನಾಗೇಶ್, ಸಂಪನ್ಮೂಲ ವ್ಯಕ್ತಿ ಶ್ರೀಪಾದು, ಕಂದಾಯಾಧಿಕಾರಿಗಳ ಸಂಘದ ಅಧ್ಯಕ್ಷ ತಮ್ಮಣ್ಣಗೌಡ ಹಾಗೂ ನೌಕರರ ಸಂಘ ಪದಾಧಿಕಾರಿಗಳಾದ ಶ್ರೀನಿವಾಸ್, ಹೇಮಣ್ಣ, ವಿಜಯ್ ಕುಮಾರ್ ಇತರರು ಉಪಸ್ಥಿತರಿದ್ದರು.




