ಕನ್ನಡ ಚಲನಚಿತ್ರ ನಟ ಸುದೀಪ್ ಬಿಜೆಪಿ ಪರ ಪ್ರಚಾರ ಮಾಡುವುದಾಗಿ ಹೇಳಿರುವುದರಿಂದ ಅವರು ನಟಿಸಿರುವ ಚಲನಚಿತ್ರಗಳು, ಜಾಹೀರಾತುಗಳು ಮತ್ತು ಕಿರುತೆರೆ ಕಾರ್ಯಕ್ರಮಗಳನ್ನು ಕರ್ನಾಟಕ ವಿಧಾನಸಬಾ ಚುನಾವಣೆ ಮುಕ್ತಾಯವಾಗುವವರೆಗೆ ಪ್ರಸಾರವಾಗದಂತೆ ತಡೆಹಿಡಿಯಬೇಕೆಂದು ಅಖಿಲ ಭಾರತ ವಕೀಲರ ಸಂಘ (All India Lawyers Union) ರಾಜ್ಯ ಕಾರ್ಯದರ್ಶಿ ಶ್ರೀನಿವಾಸಕುಮಾರ್ ರಾಜ್ಯ ಮುಖ್ಯ ಚುನಾವಣಾಯುಕ್ತರಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ.
ನಟ ಸುದೀಪ್ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದು, ಜೊತೆಗೆ ಕಿರುತೆರೆ ಕಾರ್ಯಕ್ರಮಗಳು, ಜಾಹಿರಾತುಗಳಲ್ಲಿ ನಟಿಸಿದ್ದು, ಕರ್ನಾಟಕದ ಜನರ ನಡುವೆ ಪ್ರಭಾವ ಇರುವ ಮತ್ತು ಪ್ರಭಾವ ಬೀರಬಹುದಾದ ಶಕ್ತಿ ಇರುವ ವ್ಯಕ್ತಿಯಾಗಿದ್ದಾರೆ. ಇವರು ಭಾರತೀಯ ಜನತಾ ಪಾರ್ಟಿ (ಬಿ.ಜೆ.ಪಿ) ಕರೆದಿದ್ದ ಮಾಧ್ಯಮ ಗೋಷ್ಠಿಯಲ್ಲಿ ಭಾಗವಹಿಸಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿರವರ ಪರವಾಗಿ ಹಾಗೂ ಮುಖ್ಯ ಮಂತ್ರಿಗಳು ಹೇಳಿದ ಅಭ್ಯರ್ಥಿಗಳ ಪರವಾಗಿ ಮತವನ್ನು ಕೋರಿ ಚುನಾವಣಾ ಪ್ರಚಾರ ನಡೆಸುವುದಾಗಿ ಸಾರ್ವಜನಿಕವಾಗಿ ಘೋಷಿಸಿರುತ್ತಾರೆ. ಹಾಗಾಗಿ ಸುದೀಪ್ ನಟಿಸಿರುವ ಚಲನಚಿತ್ರಗಳು, ಜಾಹೀರಾತುಗಳು ಮತ್ತು ಕಿರುತೆರೆ ಕಾರ್ಯಕ್ರಮಗಳು ಚುನಾವಣೆಯ ಕಾಲಘಟ್ಟದಲ್ಲಿ ನೀತಿ ಸಂಹಿತೆ ಜಾರಿ ಇರುವ ಸಂದರ್ಭದಲ್ಲಿ ಪ್ರಸಾರವಾದರೆ ಅದು ಜನತೆಯ ಮೇಲೆ ಪ್ರಭಾವ ಬೀರಿ ಭಾರತೀಯ ಜನತಾ ಪಾರ್ಟಿ (ಬಿ.ಜೆ.ಪಿ) ಪಕ್ಷಕ್ಕೆ ಪೂರಕ ವಾತಾವರಣ ನಿರ್ಮಾಣವಾಗಿ ಚುನಾವಣೆಯಲ್ಲಿ ಅನುಕೂಲವಾಗುವ ಸಾಧ್ಯತೆ ಇರುತ್ತದೆ ಎಂದು ಆಯೋಗಕ್ಕೆ ಬರೆದಿರುವ ಪತ್ರದಲ್ಲಿ ಅವರು ಉಲ್ಲೇಖಿಸಿದ್ದಾರೆ.
ಈ ವಿಚಾರವು ಅತ್ಯಂತ ವಿವಾದಾತ್ಮಕವಾಗಿದ್ದು, ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಬಿ.ಜೆ.ಪಿ ಯೇತರ ಕಾಂಗ್ರೆಸ್, ಜೆ.ಡಿ.ಎಸ್. ಸಿ.ಪಿ.ಎಂ, ಬಿ.ಎಸ್.ಪಿ., ಸರ್ವೋದಯ ಕರ್ನಾಟಕ ಪಕ್ಷಗಳೂ ಸೇರಿದಂತೆ ಪಕ್ಷೇತರವಾಗಿ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳಿಗೆ ಅನ್ಯಾಯ ಮಾಡಿದಂತಾಗುತ್ತದೆ. ಅದ್ದರಿಂದ ಕರ್ನಾಟಕ ರಾಜ್ಯ ಚುನಾವಣಾ ಆಯೋಗವು ಮಧ್ಯೆ ಪ್ರವೇಶಿಸಿ, ಸಕ್ರಿಯವಾಗಿ ಭಾಗವಹಿಸಿ ಚುನಾವಣಾ ಕಣದಲ್ಲಿರುವ ಎಲ್ಲಾ ಅಭ್ಯರ್ಥಿಗಳಿಗೂ ಸಮಾನವಾದ ವಾತಾವರಣ ನಿರ್ಮಾಣ ಮಾಡಿಕೊಡುವ ಜವಾಬ್ದಾರಿ ಹೊಂದಿದೆ ಎಂದಿರುವ ಅವರು, ನಟ ಸುದೀಪ್ ಅವರನ್ನು ಭಾರತೀಯ ಜನತಾ ಪಾರ್ಟಿ (ಬಿ.ಜೆ.ಪಿ) ಪಕ್ಷದ ರಾಜ್ಯ ಮಟ್ಟದ ಸ್ಟಾರ್ ಕ್ಯಾಂಪೇನರ್ ಎಂದು ಪರಿಗಣಿಸಿ ಅವರ ಹೆಸರನ್ನು ಭಾರತೀಯ ಜನತಾ ಪಾರ್ಟಿ (ಬಿ.ಜೆ.ಪಿ) ಪರ ಪ್ರಚಾರ ನಡೆಸುವ ಸ್ಟಾರ್ ಕ್ಯಾಂಪೇನರ್ ಪಟ್ಟಿಯಲ್ಲಿ ಸೇರಿಸಬೇಕು. ಅಲ್ಲದೇ ಸುದೀಪ್ ನಟಿಸಿರುವ ಚಲನಚಿತ್ರಗಳು, ಜಾಹೀರಾತುಗಳು ಮತ್ತು ಕಿರುತೆರೆ ಕಾರ್ಯಕ್ರಮಗಳನ್ನು ಕರ್ನಾಟಕ ವಿಧಾನಸಭಾ ಚುನಾವಣೆ ನೀತಿ ಸಂಹಿತೆ ಮುಕ್ತಾಯವಾಗುವವರೆಗೆ ಪ್ರಸಾರವಾಗದಂತೆ ತಡೆಹಿಡಿಯಬೇಕೆಂದು ಆಗ್ರಹಿಸಿದ್ದಾರೆ.




