ಸಕ್ಕರೆ ಕಾರ್ಖಾನೆಗಳು ಕಬ್ಬು ಸರಬರಾಜು ಮಾಡುವ ರೈತರಿಗೆ 15 ದಿನದೊಳಗೆ ಹಣ ಪಾವತಿಸುವಂತೆ ಮಂಡ್ಯ ಜಿಲ್ಲಾಧಿಕಾರಿ ಡಾ.ಕುಮಾರ ಅವರು ತಿಳಿಸಿದರು.
ಮಂಡ್ಯ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸಕ್ಕರೆ ಕಾರ್ಖಾನೆ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದರು. ಕಳೆದ ಸಾಲಿನಲ್ಲಿ ರೈತರು ನಿಗದಿತ ಅವಧಿಯಲ್ಲಿ ಹಣ ಪಾವತಿ ಮಾಡಿರುವುದಿಲ್ಲ ಎಂದು ಹಲವಾರು ದೂರುಗಳನ್ನು ಸಲ್ಲಿಸಿದ್ದು, ಈ ಬಾರಿ ದೂರಿಗೆ ಆಸ್ಪದ ನೀಡದಂತೆ ಹಣ ಪಾವತಿಸಿ ಎಂದರು.
ಮಂಡ್ಯ ಜಿಲ್ಲೆಯಲ್ಲಿ 5 ಸಕ್ಕರೆ ಕಾರ್ಖಾನೆಗಳು ಕಬ್ಬು ನುರಿಸುವ ಕೆಲಸಕ್ಕೆ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಅದರ ವರದಿಯನ್ನು ಬೆಂಗಳೂರಿನ ಕೇಂದ್ರ ಕಚೇರಿಗೆ ಕಳುಹಿಸಬೇಕಿರುತ್ತದೆ. ಸಕ್ಕರೆ ಆಯುಕ್ತರು ನೀಡುವ ದಿನಾಂಕದಂದು ಎಲ್ಲಾ ಸಕ್ಕರೆ ಕಾರ್ಖಾನೆಗಳು ಕಬ್ಬು ನುರಿಸುವ ಕೆಲಸಕ್ಕೆ ಚಾಲನೆ ನೀಡುವುದು. ಇದಲ್ಲದೇ ಕಬ್ಬು ನುರಿಸುವ ಕೆಲಸಕ್ಕೆ ನವೀಕರಣ ಪತ್ರವನ್ನು ಕಾರ್ಖಾನೆಗಳು ಪಡೆದುಕೊಳ್ಳುವುದು ಎಂದರು.
ಸಕ್ಕರೆ ಕಾರ್ಖಾನೆ ಅವರು ತಮ್ಮ ವ್ಯಾಪ್ತಿಗೆ ನಿಗದಿಪಡಿಸಿರುವ ಕಬ್ಬನ್ನು ಮಾತ್ರ ಕಟಾವು ಮಾಡಲು ಅವಕಾಶವಿರುತ್ತದೆ. ಇದನ್ನು ಮನದಟ್ಟು ಮಾಡಿಕೊಂಡು ಕಾರ್ಖಾನೆಗಳಲ್ಲಿ ಸಣ್ಣ ಪುಟ್ಟ ಆಂತರಿಕ ತೊಂದರೆಗಳಿದ್ದಲ್ಲಿ ಈಗಲೇ ಸರಿಪಡಿಸಿಕೊಳ್ಳಿ ಎಂದರು.
ಕಬ್ಬು ಕಟಾವು ಮಾಡಲು ಸುಮಾರು 15000 ಕಾರ್ಮಿಕರು ಹೊರ ಜಿಲ್ಲೆ ಅಥವಾ ರಾಜ್ಯದಿಂದ ಜಿಲ್ಲೆಗೆ ಬರುತ್ತಾರೆ. ಸಕ್ಕರೆ ಕಾರ್ಖಾನೆಯವರು ತಮ್ಮ ವ್ಯಾಪ್ತಿಯ ಕಾರ್ಮಿಕರಿಗೆ ಮೂಲಭೂತ ವ್ಯವಸ್ಥೆಗಳಾದ ಕುಡಿಯುವ ನೀರು, ಶೌಚಾಲಯದ ವ್ಯವಸ್ಥೆ ಮಾಡಬೇಕು. ಮಳೆಗಾಲದ ಸಂದರ್ಭದಲ್ಲಿ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಇರುತ್ತದೆ. ಅವುಗಳ ಬಗ್ಗೆ ಕಾರ್ಮಿಕರಲ್ಲಿ ಅರಿವು ಮೂಡಿಸಬೇಕು. ಅವರಿಗೆ ಒಪ್ಪಂದ ಮಾಡಿಕೊಂಡಿರುವ ರೀತಿ ಸರಿಯಾದ ಸಮಯಕ್ಕೆ ಹಣ ಪಾವತಿಮಾಡಬೇಕು ಎಂದರು.
ಕೋರಮಂಡಲ್ ಸಕ್ಕರೆ ಕಾರ್ಖಾನೆಯು ದಿನಕ್ಕೆ 4000 ಮೆಟ್ರಿಕ್ ಟನ್ ಕಬ್ನು ನುರಿಸುವ ಸಾಮರ್ಥ್ಯವಿದ್ದು, ಒಟ್ಟು 5.5 ಲಕ್ಷ ಮೆಟ್ರಿಕ್ ಟನ್ ಕಬ್ಬು ನುರಿಸುವ ಗುರಿ ಹೊಂದಿದ್ದಾರೆ,
ಎನ್ ಎಸ್ ಎಲ್ ಸಕ್ಕರೆ ಕಾರ್ಖಾನೆಯು ದಿನಕ್ಕೆ 5000 ಮೆಟ್ರಿಕ್ ಟನ್ ಕಬ್ಬು ನುರಿಸುವ ಸಾಮರ್ಥ್ಯವಿದ್ದು ಒಟ್ಟು 7 ಲಕ್ಷ ಮೆಟ್ರಿಕ್ ಟನ್ ಕಬ್ಬು ನುರಿಸುವ ಗುರಿ ಹೊಂದಿದ್ದಾರೆ.
ಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆಯು 5000 ಮೆಟ್ರಿಕ್ ಟನ್ ಕಬ್ಬು ನುರಿಸುವ ಸಾಮರ್ಥ್ಯವಿದ್ದು ಒಟ್ಟು 8 ಲಕ್ಷ ಮೆಟ್ರಿಕ್ ಟನ್ ಕಬ್ಬು ನುರಿಸುವ ಗುರಿ ಹೊಂದಿದ್ದಾರೆ.
ಎಂ.ಆರ್.ಎನ್ ಸಕ್ಕರೆ ಕಾರ್ಖಾನೆಯು ದಿನಕ್ಕೆ 3500 ಮೆಟ್ರಿಕ್ ಟನ್ ಕಬ್ಬು ನುರಿಸುವ ಸಾಮರ್ಥ್ಯವಿದ್ದು ಒಟ್ಟು 4 ಲಕ್ಷ ಮೆಟ್ರಿಕ್ ಟನ್ ಕಬ್ಬು ಹರಿಯುವ ಗುರಿ ಹೊಂದಿದ್ದಾರೆ.
ಮೈ ಶುಗರ್ ಸಕ್ಕರೆ ಕಾರ್ಖಾನೆಯು 4,20,000 ಕಬ್ಬು ನುರಿಸುವ ಗುರಿ ಹೊಂದಲಾಗಿದೆ. ಪ್ರತಿ ದಿನ 4000 ಮೆಟ್ರಿಕ್ ಟನ್ ಕಬ್ಬು ನುರಿಸುವ ಸಾಮರ್ಥ್ಯವಿದೆ ಎಂದು ಆಯಾ ಸಕ್ಕರೆ ಕಾರ್ಖಾನೆಯ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ ಸಕ್ಕರೆ ಕಾರ್ಖಾನೆಗಳು ನೀಡಿದ ಮಾಹಿತಿಯನ್ನು ಕ್ರೋಢೀಕರಿಸಿ ಸಕ್ಕರೆ ಕಾರ್ಖಾನೆಗಳು ಕಬ್ಬು ನುರಿಸುವ ಕಾರ್ಯವನ್ನು ಜೂನ್ ಅಂತ್ಯದೊಳಗೆ ಪ್ರಾರಂಭಿಸಲು ಅನುಮತಿ ನೀಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಮೈ ಶುಗರ್ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಸಿಡಿ ಗಂಗಾಧರ್ ಅವರು ತಿಳಿಸಿದರು.
ಸಭೆಯಲ್ಲಿ ಆಹಾರ ಮತ್ತುನಾಗರೀಕ ಸರಬರಾಜು ಇಲಾಖೆ ಜಂಟಿ ನಿರ್ದೇಶಕ ಕೃಷ್ಣ ಕುಮಾರ್, ಕೃಷಿ ಇಲಾಖೆ ಜಂಟಿ ನಿರ್ದೇಶಕ ಅಶೋಕ್ ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.




