ಬೆಟ್ಟಿಂಗ್ ದಂಧೆಯ ಸಹವಾಸದಿಂದ ಒಂದೂವರೆ ಕೋಟಿಗೂ ಹೆಚ್ಚು ಸಾಲ ಮಾಡಿಕೊಂಡಿದ್ದ ಯುವಕನೊಬ್ಬ ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಶರಣಾದ ಘಟನೆ ಮಂಡ್ಯ ನಗರದ ಹೊರವಲಯದ ಹಳೇ ಬೂದನೂರು ಗ್ರಾಮದ ಬಳಿ ಕಳೆದ ರಾತ್ರಿ ನಡೆದಿದೆ.
ಮಂಡ್ಯ ತಾಲ್ಲೂಕಿನ ಹಳೇ ಬೂದನೂರು ಗ್ರಾಮದ ಮಾದಪ್ಪ ಎಂಬುವವರ ಪುತ್ರ ಬಿ.ಎಂ.ತ್ಯಾಗರಾಜು(30) ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡ ಯುವಕ.
ಈತ ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್, ಸ್ಪೀಟು ಜೂಜಿಗೆ ಬಲಿಯಾಗಿ ಸುಮಾರು ಒಂದೂವರೆ ಕೋಟಿಗೂ ಹೆಚ್ಚಿನ ವ ಸಾಲ ಮಾಡಿಕೊಂಡಿದ್ದ ಎನ್ನಲಾಗಿದೆ. ಬೆಟ್ಟಿಂಗ್ ದಂಧೆಕೋರರು, ಇಸ್ಪೀಟು ಅಡ್ಡಗಳ ಮಾಫಿಯಾದವರು ಮತ್ತು ಸಾಲಗಾರರ ಕಿರುಕುಳ ತಾಳಲಾರದೆ ನಿನ್ನೆ ಸಂಜೆ ಬೂದನೂರು ಬಳಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಶರಣಾಗಿದ್ದಾನೆ ಎನ್ನಲಾಗಿದೆ. ರೈಲ್ವೆ ಪೋಲಿಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
ನಿಲ್ಲದ ಬೆಟ್ಟಿಂಗ್ ದಂಧೆ
ಮಂಡ್ಯ ತಾಲೂಕಿನಲ್ಲಿ ಕ್ರಿಕೆಟ್ ಬೆಟ್ಟಿಂಗ್ ವ್ಯಾಪಕವಾಗಿ ನಡೆಯುತ್ತಿರುವುದು ಗುಟ್ಟಾಗಿ ಉಳಿದಿಲ್ಲ, ಗ್ರಾಮೀಣ ಪ್ರದೇಶದ ಗದ್ದೆ ಬಯಲುಗಳಲ್ಲಿ ವ್ಯಾಪಕ ಜೂಜು ಅಡ್ಡೆಗಳನ್ನು ನಡೆಸಲಾಗುತ್ತಿದೆ. ಈ ದಂಧೆಗಳನ್ನು ನಿರ್ವಹಿಸಲು ಪ್ರತ್ಯೇಕ ಗುಂಪುಗಳು ಸೃಷ್ಟಿ ಮಾಡಿಕೊಳ್ಳಲಾಗಿದೆ. ಇದಕ್ಕೆ ರಾಜಕೀಯ ನಾಯಕರ ಪರೋಕ್ಷ ಬೆಂಬಲವಿರುವುದರಿಂದ ನೂರಾರು ಯುವಕರು ಬಲಿಯಾಗುತ್ತಿದ್ದಾರೆ ಎನ್ನಲಾಗಿದೆ.
ಈ ಹಿಂದೆ ಬೆಟ್ಟಿಂಗ್ ದಂಧೆಯ ಬಗ್ಗೆ ಮಂಡ್ಯ ಶಾಸಕ ರವಿಕುಮಾರ್ ವಿಧಾನಸಭಾ ಅಧಿವೇಶನದಲ್ಲಿ ಮಾತನಾಡಿ ಇಡೀ ರಾಜ್ಯದ ಗಮನ ಸೆಳೆದಿದ್ದರು. ಅಲ್ಲದೇ ಮಂಡ್ಯದಲ್ಲಿ ಮಾತನಾಡಿದ್ದ ಅವರು, ನನ್ನ ಕ್ಷೇತ್ರದಲ್ಲಿ ಬೆಟ್ಟಿಂಗ್ ದಂಧೆಗೆ ಅವಕಾಶ ನೀಡುವುದಿಲ್ಲ ಎಂದು ಗುಡುಗಿದ್ದರು. ಆದರೆ ಇದೇ ಬೆಟ್ಟಿಂಗ್ ದಂಧೆ ಯುವಕ ಬಲಿಯಾಗಿರುವುದು, ದಂಧೆ ಜೀವಂತವಾಗಿದೆ ಎಂಬುದನ್ನು ಎತ್ತಿ ತೋರಿಸುತ್ತದೆ. ಇದರ ಬಗ್ಗೆ ಜನಪ್ರತಿನಿಧಿಗಳು, ಪೊಲೀಸ್ ಇಲಾಖೆಯ ಅಧಿಕಾರಿಗಳು ಗಮನ ಹರಿಸಬೇಕೆಂದು ಪ್ರಜ್ಞಾವಂತರು ಆಗ್ರಹಿಸಿದ್ದಾರೆ.
ನ.4ರಂದು ಪ್ರತಿಭಟನೆ
ಮಂಡ್ಯದಲ್ಲಿ ನಡೆಯುತ್ತಿರುವ ಬೆಟ್ಟಿಂಗ್ ದಂಧೆಯನ್ನು ನಿಯಂತ್ರಿಸಬೇಕೆಂದು ಆಗ್ರಹಿಸಿ ಕರುನಾಡು ಸೇವಕರು ಸಂಘಟನೆ ನೇತೃತ್ವದಲ್ಲಿ ನ.4ರಂದು ಸೋಮವಾರ ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.





