Friday, October 25, 2024

ಪ್ರಾಯೋಗಿಕ ಆವೃತ್ತಿ

ಬಹುಮತಕ್ಕೆ ತಿಣುಕಾಡಿದ ಬಿಜೆಪಿ| ಇಂಡಿಯಾ ಮೈತ್ರಿಕೂಟಕ್ಕೆ ಟಿಡಿಪಿ, ಜೆಡಿಯು ಬೆಂಬಲ?

ಪ್ರಸ್ತುತ ಮತ ಎಣಿಕೆ ಸ್ಥಿತಿಗತಿಗಳನ್ನು ಗಮನಿಸಿದರೆ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಅನಿರೀಕ್ಷಿತ ತಿರುವುಗಳು ನಡೆಯುವ ಸಾಧ್ಯತೆಗಳಿವೆ. 400 ಸಂಖ್ಯೆ ಗೆಲ್ಲುತ್ತೇವೆ ಎಂದು ಹೇಳುತ್ತಿದ್ದ ಬಿಜೆಪಿ ಸದ್ಯ 230 ಕ್ಕೂ ಹೆಚ್ಚು ಸ್ಥಾನಗಳಲ್ಲಿ ಮಾತ್ರ ಮುನ್ನಡೆ ಸಾಧಿಸಿದೆ. ಕಾಂಗ್ರೆಸ್ 97 ಸ್ಥಾನಗಳಲ್ಲಿ ಮುಂದಿದೆ.

ಎನ್‌ಡಿಎ ಮೈತ್ರಿಕೂಟದ ಪಕ್ಷಗಳಾಗಿರುವ ಬಿಹಾರದ ಜೆಡಿಯು ಹಾಗೂ ಆಂಧ್ರ ಪ್ರದೇಶದ ಟಿಡಿಪಿ ಉತ್ತಮ ಮುನ್ನಡೆ ಸಾಧಿಸಿವೆ. 40 ಕ್ಷೇತ್ರಗಳ ಬಿಹಾರದಲ್ಲಿ ಜೆಡಿಯು 15 ಕ್ಷೇತ್ರಗಳಲ್ಲಿ ಮುಂದಿದ್ದರೆ, 25 ಕ್ಷೇತ್ರವಿರುವ ಆಂಧ್ರ ಪ್ರದೇಶದಲ್ಲಿ ಟಿಡಿಪಿ 16 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ.

ಬಿಜೆಪಿ ನೇತೃತ್ವದಲ್ಲಿ ಎನ್‌ಡಿಎ ಬಹುಮತ ಪಡೆಯಲು ಇವೆರೆಡು ಪಕ್ಷಗಳು ಗಣನೀಯ ಪಾತ್ರವಹಿಸಲಿವೆ. ಸದ್ಯ 230ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಇಂಡಿಯಾ ಒಕ್ಕೂಟದ ಪಕ್ಷಗಳು ಮುನ್ನಡೆ ಕಾಯ್ದುಕೊಂಡಿವೆ.  ಮೂಲಗಳ ಪ್ರಕಾರ ಇವೆರೆಡು ಪಕ್ಷಗಳು ಇಂಡಿಯಾ ಮೈತ್ರಿಕೂಟಕ್ಕೆ ಬೆಂಬಲ ನೀಡುವ ಸಾಧ್ಯತೆಯಿದೆ ಎನ್ನಲಾಗಿದೆ.

ಬೆಂಬಲ ಪಡೆಯಲು ಇಂಡಿಯಾ ಒಕ್ಕೂಟದ ನಾಯಕರು ಟಿಡಿಪಿ ಹಾಗೂ ಜೆಡಿಯು ನಾಯಕರೊಂದಿಗೆ ಮಾತುಕತೆ ನಡೆಸುತ್ತಿದ್ದು, ಎರಡೂ ಕಡೆಗಳಿಂದಲೂ ಸಕಾರಾತ್ಮಕ ಪ್ರತಿಕ್ರಿಯೆ ಬಂದಿದೆ ಎಂದು ಹೇಳಲಾಗಿದೆ. ಒಂದು ವೇಳೆ ಎರಡೂ ಪಕ್ಷಗಳು ಇಂಡಿಯಾ ಒಕ್ಕೂಟವನ್ನು ಬೆಂಬಲಿಸಿದರೆ ಮೈತ್ರಿಕೂಟದ ಸರ್ಕಾರದಲ್ಲಿ ಮಹತ್ವದ ಸ್ಥಾನಮಾನಗಳನ್ನು ನೀಡುವ ಭರವಸೆಯನ್ನು ಇಂಡಿಯಾ ಒಕ್ಕೂಟದ ನಾಯಕರು ನೀಡಿದ್ದಾರೆ ಎನ್ನಲಾಗಿದೆ.

ಒಂದು ವೇಳೆ ಎನ್‌ಡಿಎ ಮೈತ್ರಿಕೂಟದಲ್ಲಿ ಇವೆರೆಡು ಪಕ್ಷಗಳು ಉಳಿದುಕೊಂಡು ಬಿಜೆಪಿ ನೇತೃತ್ವದ ಸರ್ಕಾರ ರಚನೆಯಾದರೆ ಮಹತ್ವದ ಹುದ್ದೆಗಳನ್ನು ನೀಡಬೇಕಾಗುತ್ತದೆ. ಕಮಲ ಪಕ್ಷದ ನಾಯಕರು ಮೈತ್ರಿಕೂಟದ ಪಕ್ಷಗಳಿಗೆ ಹೆಚ್ಚು ಮಣೆ ನೀಡುವ ಸಾಧ್ಯತೆ ಕಡಿಮೆ. ಈ ಹಿನ್ನೆಲೆಯಲ್ಲಿ ಚಂದ್ರ ಬಾಬು ನಾಯ್ಡು ನೇತೃತ್ವದ ತೆಲುಗು ದೇಶಂ ಹಾಗೂ ಬಿಹಾರದ ಜೆಡಿಯು ಇಂಡಿಯಾ ಒಕ್ಕೂಟಕ್ಕೆ ಸೇರ್ಪಡೆಯಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ನಿತೀಶ್ ಕುಮಾರ್ ಈ ಮೊದಲು ಇಂಡಿಯಾ ಒಕ್ಕೂಟದಲ್ಲಿ ಇದ್ದವರು. ಕೆಲವು ಭಿನ್ನಾಭಿಪ್ರಾಯಗಳಿಂದ ಎನ್‌ಡಿಎಗೆ ಸೇರ್ಪಡೆಗೊಂಡಿದ್ದಾರೆ. ಪುನಃ ಹಳೆಯ ಸ್ನೇಹಿತನತ್ತ ವಾಲಿದರೆ ಆಶ್ಚರ್ಯವೇನಿಲ್ಲ.

ಈ ನಡುವೆ ತೆಲುಗು ದೇಶಂ ಪಕ್ಷ ಆಂಧ್ರ ಪ್ರದೇಶದ ರಾಜ್ಯ ವಿಧಾನ ಸಭೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸುತ್ತಿದೆ. ಇತ್ತೀಚಿನ ವರದಿಗಳಂತೆ 175 ವಿಧಾನಸಭಾ ಕ್ಷೇತ್ರಗಳಲ್ಲಿ ಟಿಡಿಪಿ 125 ಸ್ಥಾನಗಳಲ್ಲಿ ಮುನ್ನಡೆ ಪಡೆದು ದೊಡ್ಡ ಗೆಲುವಿನ ನಿರೀಕ್ಷೆಯಲ್ಲಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!