ಮಂಡ್ಯ ಜಿಲ್ಲಾ ರೈತ ಹಿತ ರಕ್ಷಣಾ ಸಮಿತಿ ವತಿಯಿಂದ ಮಂಡ್ಯದಲ್ಲಿ ನಡೆಸುತ್ತಿರುವ ಕಾವೇರಿ ಹೋರಾಟಕ್ಕೆ ಶುಕ್ರವಾರ ತಮಟೆ ಸದ್ದಿನೊಂದಿಗೆ ಪೂಜಾ ಕುಣಿತ, ತಮಟೆ ಹಾಗೂಕಹಳೆ ಕಲಾವಿದರು ಬೆಂಬಲ ಸೂಚಿಸಿದರು.
ತಳಗವಾದಿ ಗ್ರಾಮಸ್ಥರು ಹೋರಾಟ ಬೆಂಬಲಿಸಿ ಸಂಜಯ ವೃತ್ತದಿಂದ ಮೆರವಣಿಗೆ ನಡೆಸಿದರು. ಉಮಾ ಮಹೇಶ್ವರಿ ಜಾನಪದ ಕಲಾವಿದರು ಕಹಳೆ ಮೊಳಗಿಸಿ, ತಮಟೆ ಸದ್ದಿಗೆ ಪೂಜೆ ಹೊತ್ತು ಕುಣಿತ ಕುಣಿದರು.
ಗ್ರಾಮೀಣ ಜನರ ಬದುಕಿನ ಜೊತೆ ಚೆಲ್ಲಾಟವಾಡಬಾರದು, ಜೀವನದಿ ಕಾವೇರಿ ಆಶ್ರಯಿಸಿ ಲಕ್ಷಾಂತರ ಕುಟುಂಬಗಳು ಬದುಕು ಕಟ್ಟಿಕೊಂಡಿವೆ, ಜಲಾಶಯಗಳನ್ನು ಬರಿದು ಮಾಡಿದರೆ ಬೆಳೆ ಇಲ್ಲದೆ, ಬದುಕು ಅತಂತ್ರವಾಗಿ ರೈತರ ಸಾಲದ ಸುಳಿಗೆ ಸಿಲುಕಲಿದ್ದಾರೆ, ಆದ್ದರಿಂದ ರೈತರ ಹಿತಕಾಯಬೇಕೆಂದು ಆಗ್ರಹಿಸಿದರು.
ರಾಷ್ಟ್ರಮಟ್ಟದ ಪೂಜಾ ಕುಣಿತ ಕಲಾವಿದೆ ಸವಿತಾ ಚಿರುಕುನ್ನಯ್ಯ, ಕುಮಾರ್, ಸಿದ್ದರಾಜು, ರವಿ, ಕಾಳಯ್ಯ, ಶೇಖರ್ ಮತ್ತಿತರರು ಭಾಗವಹಿಸಿದ್ದರು. ರೈತ ಹಿತ ರಕ್ಷಣಾ ಸಮಿತಿಯ ಸುನಂದ ಜಯರಾಮ್, ಕೆ ಬೋರಯ್ಯ, ರೈತಸಂಘದ ಇಂಡು ವಾಳು ಚಂದ್ರಶೇಖರ್, ಮುದ್ದೇಗೌಡ, ಕನ್ನಡ ಸೇನೆ ಮಂಜುನಾಥ್, ದಸಂಸ ಎಂ.ವಿ ಕೃಷ್ಣ,ನಾರಾಯಣ, ಅಂಬುಜಮ್ಮ ಮತ್ತಿತರರಿದ್ದರು.




