Friday, November 20, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯ | ಸ್ವಾಭಿಮಾನಿ ಬಣದಿಂದ ವಿಜಯ್ ಆನಂದ್, ಯೋಗೇಶ್, ಮಹಾಲಿಂಗೇಗೌಡ ನಾಮಪತ್ರ ಸಲ್ಲಿಕೆ

ಜೆಡಿಎಸ್ ಟಿಕೆಟ್ ಸಿಗದ ಹಿನ್ನಲೆಯಲ್ಲಿ ಸ್ವಾಭಿಮಾನಿ ಬಣದಿಂದ ಕೆ.ಎಸ್. ವಿಜಯ್ ಆನಂದ್, ಎಚ್. ಎನ್. ಯೋಗೇಶ್, ಮುದ್ದನಘಟ್ಟ ಮಹಾಲಿಂಗೇಗೌಡ ಶಾಸಕ ಎಂ. ಶ್ರೀನಿವಾಸ್ ನೇತೃತ್ವದಲ್ಲಿ ಇಂದು ನಾಮಪತ್ರ
ಸಲ್ಲಿಸಿದರು.

ಮಂಡ್ಯ ವಿಧಾನಸಭಾ ಕ್ಷೇತ್ರದಿಂದ ಶಾಸಕ ಎಂ. ಶ್ರೀನಿವಾಸ್ ಅವರಿಗೆ ಟಿಕೆಟ್ ಎಂದು ಘೋಷಣೆ ಮಾಡಿ, ಅಂತಿಮವಾಗಿ ಮನ್ಮುಲ್ ಅಧ್ಯಕ್ಷ ಬಿ.ಆರ್. ರಾಮಚಂದ್ರು ಅವರಿಗೆ ಜೆಡಿಎಸ್ ವರಿಷ್ಠರು ಬಿ. ಫಾರಂ ನೀಡಿ ಅಭ್ಯರ್ಥಿ ಮಾಡಿದ್ದರು.ಇದರಿಂದ ಬೇಸತ್ತ ಜೆಡಿಎಸ್ ಟಿಕೆಟ್ ಆಕಾಂಕ್ಷಿಗಳಾದ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಎಚ್.ಎನ್. ಯೋಗೇಶ್,ಕೆ.ಎಸ್. ವಿಜಯ್ ಆನಂದ ಹಾಗೂ ಮುದ್ದನಘಟ್ಟ ಮಹಾಲಿಂಗೇಗೌಡ ಶಾಸಕ ಎಂ. ಶ್ರೀನಿವಾಸ್ ರವರ ನೇತೃತ್ವದಲ್ಲಿ ಸ್ವಾಭಿಮಾನಿ ಬಣ ರಚಿಸಿಕೊಂಡು ಇಂದು ಬಂಡಾಯ ಜೆಡಿಎಸ್ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಿದ್ದಾರೆ.

ಇಂದು ಬೆಳಿಗ್ಗೆ ನಗರದ ಬಂದೀಗೌಡ ಬಡಾವಣೆಯಲ್ಲಿ ಸೇರಿದ ಶಾಸಕ ಎಂ. ಶ್ರೀನಿವಾಸ್, ವಿಜಯ್ ಆನಂದ್, ಯೋಗೇಶ್ ಹಾಗೂ ಮುದ್ದನಘಟ್ಟ ಮಹಾಲಿಂಗೇಗೌಡರ ಸಾವಿರಾರು ಬೆಂಬಲಿಗರು ಹಾಗೂ ಜೆಡಿಎಸ್ ಮುಖಂಡರು ಜೆಡಿಎಸ್ ವರಿಷ್ಠರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಎಂ. ಶ್ರೀನಿವಾಸ್, ಮಂಡ್ಯ ವಿಧಾನಸಭಾ ಕ್ಷೇತ್ರದ ಹೊರಗಿನ ವ್ಯಕ್ತಿಗೆ ಜೆಡಿಎಸ್ ವರಿಷ್ಠರು ಟಿಕೆಟ್ ನೀಡಿರುವುದು ಸರಿಯಲ್ಲ. ನಮ್ಮ ಕ್ಷೇತ್ರದ ಹಲವರು ಟಿಕೆಟ್ ಆಕಾಂಕ್ಷಿಗಳಾಗಿದ್ದರು. ಅವರಲ್ಲಿ ಒಬ್ಬರಿಗಾದರೂ ಟಿಕೆಟ್ ನೀಡಬೇಕಿತ್ತು, ಆದರೆ ವರಿಷ್ಠರು ಟಿಕೆಟ್ ನೀಡದೆ ಅನ್ಯಾಯ ಮಾಡಿರುವುದು ನನ್ನ ಬೆಂಬಲಿಗರಿಗೆ ಹಾಗೂ ಕಾರ್ಯಕರ್ತರಿಗೆ ನೋವು ತಂದಿದೆ.ಈ ಹಿನ್ನೆಲೆಯಲ್ಲಿ ಜೆಡಿಎಸ್ ಬಂಡಾಯ ಅಭ್ಯರ್ಥಿಗಳಾಗಿ ಮೂವರಿಂದ ನಾಮಪತ್ರ ಸಲ್ಲಿಸುತ್ತಿದ್ದೇವೆ ಎಂದರು.

ಜೆಡಿಎಸ್ ಟಿಕೆಟ್ ವಂಚಿತ ಕೆ.ಎಸ್. ವಿಜಯಾನಂದ ಮಾತನಾಡಿ, ಕ್ಷೇತ್ರದಲ್ಲಿರುವ ನಮಗೆ ಅನ್ಯಾಯ ಮಾಡಿ ಹೊರಗಿನವರಿಗೆ ಬಿ.ಫಾರಂ ನೀಡಿರುವುದು ಬೇಸರ ಮೂಡಿಸಿದೆ. ಕಳೆದ 12 ವರ್ಷಗಳಿಂದ ನನ್ನ ರಾಜಕೀಯ ಗುರು ಎಂ. ಶ್ರೀನಿವಾಸ್ ರವರ ನೇತೃತ್ವದಲ್ಲಿ ಪಕ್ಷ ಸಂಘಟನೆ ಮಾಡಿದ್ದೇನೆ. ಯೋಗೇಶ್ ಹಾಗೂ ಮುದ್ದನಘಟ್ಟ ಮಹಾಲಿಂಗೇಗೌಡರು ಅವರು ಕೂಡ ಪಕ್ಷಕ್ಕಾಗಿ ದುಡಿದಿದ್ದಾರೆ. ಸಕ್ರಿಯ ರಾಜಕಾರಣದಲ್ಲಿರುವ ನಮಗೆ ಟಿಕೆಟ್ ನೀಡುವುದನ್ನು ಬಿಟ್ಟು ಕ್ಷೇತ್ರದ ಹೊರಗಿನವರಿಗೆ ನೀಡಿರುವುದು ಸರಿಯಲ್ಲ. ನಮ್ಮ ತಾತ ಕೆ.ವಿ. ಶಂಕರಗೌಡ, ನಮ್ಮ ತಂದೆ ಸಚ್ಚಿದಾನಂದ ಮರವರು ಮಂಡ್ಯ ಜಿಲ್ಲೆಗೆ ಸಾಕಷ್ಟು ಸೇವೆ ಸಲ್ಲಿಸಿದ್ದಾರೆ. ಇಂದಿಗೂ ನಾವು ಬಾಡಿಗೆ ಮನೆಯಲ್ಲಿದ್ದೇವೆ. ಯಾರ ಬಳಿಯೂ ಕೈ ಚಾಚಿಲ್ಲ, ದೀನ ದಲಿತರ ಸೇವೆ ಮಾಡಿಕೊಂಡು ಬರುತ್ತಿದ್ದೇವೆ ಎಂದು ನೋವಿನಿಂದ ನುಡಿದರು.

ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಯೋಗೇಶ್ ಮಾತನಾಡಿ, ಜೆಡಿಎಸ್ ವರಿಷ್ಠರ ನಡೆಯಿಂದ ನಮಗೆ ತುಂಬಾ ನೋವಾಗಿದೆ ಶಾಸಕ ಎಂ. ಶ್ರೀನಿವಾಸ್ ರವರು ನೇತೃತ್ವದಲ್ಲಿ ನಾವು ಸ್ವಾಭಿಮಾನ ಬಣ ರಚಿಸಿಕೊಂಡು ಮೂವರು ಇಂದು ನಾಮಪತ್ರ ಸಲ್ಲಿಸುತ್ತಿದ್ದೇವೆ ಎಂದರು.

ಮುದ್ದನಘಟ್ಟ ಮಹಾಲಿಂಗೇಗೌಡ ಮಾತನಾಡಿ,ನಮಗೆ ಸಾಕಷ್ಟು ನೋವಿದೆ. ನಮ್ಮ ಕ್ಷೇತ್ರದ ಅಭ್ಯರ್ಥಿ ಬದಲಾವಣೆ ಆಗಬೇಕು.ಶಾಸಕ.ಎಂ.ಶ್ರೀನಿವಾಸ್ ಅವರ ನೇತೃತ್ವದಲ್ಲಿ ಸ್ವಾಭಿಮಾನಿ ಬಣ ರಚಿಸಿಕೊಂಡು ಕಣಕ್ಕೆ ಇಳಿಯುತ್ತಿದ್ದೇವೆ.ಜನರು ಆಶೀರ್ವಾದ ಮಾಡಬೇಕು ಎಂದು ಮನವಿ ಮಾಡಿದರು.

ಶಾಸಕ ಎಂ. ಶ್ರೀನಿವಾಸ್, ಮಂಡ್ಯ ತಾಲೂಕು ಜೆಡಿಎಸ್ ಅಧ್ಯಕ್ಷ ತಿಮ್ಮೇಗೌಡರ ನೇತೃತ್ವದಲ್ಲಿ ಸ್ವಾಭಿಮಾನಿ ಬಣದ ಅಭ್ಯರ್ಥಿಗಳಾಗಿ ಎಚ್.ಎನ್. ಯೋಗೇಶ್, ಕೆ. ಎಸ್. ವಿಜಯ್ ಆನಂದ್, ಮುದ್ದನಘಟ್ಟ ಮಹಾಲಿಂಗೇಗೌಡ ನಾಮಪತ್ರ ಸಲ್ಲಿಸಿದರು.

ಈ ಸಂದರ್ಭದಲ್ಲಿ ನಗರಸಭೆ ಸದಸ್ಯರು, ಜೆಡಿಎಸ್ ಕಾರ್ಯಕರ್ತರು ಹಾಗೂ ಶಾಸಕ ಎಂ. ಶ್ರೀನಿವಾಸ್ ರವರ ಸಾವಿರಾರು ಬೆಂಬಲಿಗರು ಉಪಸ್ಥಿತರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ