ಕರ್ನಾಟಕ ಸ್ಟೇಟ್ ಟೈಲರ್ಸ್ ಅಸೋಸಿಯೇಷನ್ ರಜತ ಮಹೋತ್ಸವ ಸಂಭ್ರಮ ಹಾಗೂ ರಾಜ್ಯ ಮಟ್ಟದ ಟೈಲರ್ಸ್ ವೃತ್ತಿಬಾಂಧವರ ಬೃಹತ್ ಸಮಾವೇಶ ಜನವರಿ 30 ನೇ ಮಂಗಳವಾರದಂದು ಬೆಂಗಳೂರಿನ ಜಯನಗರದ 5 ನೇ ಬ್ಲಾಕ್ ಶಾಲಿನಿ ಮೈದಾನದಲ್ಲಿ ನಡೆಯಲಿದೆ ಎಂದು ಅಸೋಸಿಯೇಷನ್ ಅಧ್ಯಕ್ಷ ಹರ್ಷ ಪೇಟ್ಕರು ತಿಳಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರುಮ ಈ ಬೃಹತ್ ಸಮಾವೇಶದಲ್ಲಿ ವಿಧಾನಸಭಾ ಅಧ್ಯಕ್ಷ ಯು.ಟಿ. ಖಾದರ್ ಉಪಸ್ಥಿತರಿರಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರ್ಯಕ್ರಮ ಉದ್ಘಾಟಿಸುವರು. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಕಾರ್ಮಿಕ ಸಚಿವ ಸಂತೋಷ್ ಲಾಡ್ ಮುಂತಾದ ಗಣ್ಯರ ಉಪಸ್ಥಿತಿ ಇರಲಿದ್ದಾರೆ, ಆದ್ದರಿಂದ ಮಂಡ್ಯ ಜಿಲ್ಲೆಯ ಟೈಲರ್ಸ್ ಗಳು, ವೃತ್ತಿಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಮನವಿ ಮಾಡಿದರು.
ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಜವಳಿ ಉದ್ಯಮಕ್ಕೆ ವಿಶೇಷ ಅನುದಾನ ನೀಡುತ್ತಿರುವುದು ಸ್ವಾಗತ . ಸಾರ್ವಜನಿಕ ವಲಯದಲ್ಲಿ ಅತಿ ಅಗತ್ಯ ಸೇವೆ ನೀಡುತ್ತಿರುವ ಟೈಲರ್ಸ್ ವೃತ್ತಿಬಾಂಧವರನ್ನು ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯಿಂದ ತೆಗೆದು ಜವಳಿ ನಿಗಮದ ವ್ಯಾಪ್ತಿಗೆ ಒಳಪಡಿಸಬೇಕು, ಟೈಲರ್ಸ್ ಗಳು ದಿನನಿತ್ಯ ಬಳಸುವ ಕಚ್ಚಾ ಸಾಮಗ್ರಿಗಳ ಕಂಪನಿಗಳಿಂದ ಸೆಸ್ಸ್ ಅನ್ನು ಬಳಸಿ ಟೈಲರ್ಸ್ ಕ್ಷೇಮ ನಿಧಿ ಮಂಡಳಿ ರಚಿಸಿ ಸಾಮಾಜಿಕ ನ್ಯಾಯ ಹಾಗೂ ಭದ್ರತೆ ಒದಗಿಸಿ ಕೊಡಬೇಕೆಂದು ಸಮಾವೇಶದಲ್ಲಿ ಒತ್ತಾಯಿಸಲಾಗುವುದು ಎಂದರು.
ಗೋಷ್ಠಿಯಲ್ಲಿ ಸಂಘದ ಜಿಲ್ಲಾ ಖಜಾಂಚಿ ರಫೀಕ್ ಅಹಮದ್, ಪದಾಧಿಕಾರಿಗಳಾದ ಪರಮೇಶ್ ಎಸ್,
ಮಾದೇಗೌಡ, ಅನ್ನದಾನಿ ಗೌಡ, ಸುಶೀಲ್ ಕುಮಾರ್, ಪುಟ್ಟಸ್ವಾಮಿ ಹಾಗೂ ರಂಗಸ್ವಾಮಿ ಉಪಸ್ಥಿತರಿದ್ದರು




