ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರಗಳು ಅಗತ್ಯ, ಉತ್ತಮ ಫಲಿತಾಂಶ ಪಡೆಯಲು ವರ್ಷಪೂರ್ತಿ ಶ್ರಮಿಸಿದವರಿಗೆ ಪುರಸ್ಕಾರ ನೀಡಿದರೆ, ಅವರು ಮುಂದೆ ಉತ್ತಮ ಸಾಧನೆ ಮಾಡಲು ಪ್ರೋತ್ಸಾಹ ನೀಡಿದಂತಾಗುತ್ತದೆ ಎಂದು ಶಾಸಕ ರವಿಕುಮಾರ್ ತಿಳಿಸಿದರು.
ಮಂಡ್ಯ ನಗರದ ಸುಭಾಷ್ ನಗರ ಬಡಾವಣೆಯಲ್ಲಿರುವ ಡಾ. ನಾ ಸು ಹರ್ಡಿಕರ್ ಭವನದಲ್ಲಿ ಭಾರತ ಸೇವಾದಳ ಹಾಗೂ ಸೆಂಟ್ ಜಾನ್ಸ್ ಆಂಬುಲೆನ್ಸ್, ಮಂಡ್ಯ ಇವರ ಸಂಯುಕ್ತ ಆಶ್ರಯದಲ್ಲಿ 2024-25 ನೇ ಸಾಲಿನಲ್ಲಿ ಅತಿ ಹೆಚ್ಚು ಅಂಕವನ್ನು ಪಡೆದ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗಾಗಿ ನಡೆದ ಪ್ರತಿಭಾ ಪುರಸ್ಕಾರ ಮತ್ತು ಅಭಿನಂದನ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಅಭಿನಂದಿಸಿದಾಗ ಅವರಲ್ಲಿ ನಾನೇನೂ ಸಾಧನೆ ಮಾಡಿದ್ದೇನೆ ಎಂಬ ಭಾವ ಮೂಡುತ್ತದೆ, ಇದರಿಂದ ಅವರಿಗೆ ಇನ್ನಷ್ಟು ಸಾಧನೆ ಮಾಡಲು ಪ್ರೇರಣೆ ನೀಡಿದಂತಾಗುತ್ತದೆ. ಹಾಗಾಗಿ ಇಂತಹ ಕಾರ್ಯಕ್ರಮಗಳು ಇನ್ನೂ ಹೆಚ್ಚಾಗಿ ನಡೆಯಬೇಕೆಂದರು.
ಭಾರತ ಸೇವಾದಳದ ಅಧ್ಯಕ್ಷರಾದ ಬಿ.ಸಿ ಶಿವಾನಂದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಕರ್ನಾಟಕ ರಾಜ್ಯದ ಬ್ರಾಹ್ಮಣ ಸಭಾದ ರಾಜ್ಯಾಧ್ಯಕ್ಷ ರಘುನಾಥ್ ಅಭಿನಂದಿಸಿದರು.
ವೇದಿಕೆಯಲ್ಲಿ ಜಿ.ವಿ ನಾಗರಾಜು, ಎಂ.ಎಸ್ ಆತ್ಮಾನಂದ, ಲಕ್ಷ್ಮಿಕಾಂತ್, ಹೆಚ್.ಕೆ ರುದ್ರಪ್ಪ, ಬೇಲೂರು ಸೋಮಶೇಖರ್, ಕೆ.ಮೋಹನ್, ಜಿ.ವಿ ಕುಮಾರ್ ಡಾ. ಸುಮರಾಣಿ ಶುಭ, ಪ್ರೊ.ಹೆಚ್.ಎಸ್ ನರಸಿಂಹಮೂರ್ತಿ, ಸಜ್ಬನ್ ಕೋತಾರಿ, ಶಿವಪ್ರಕಾಶ್ ಬಾಬು, ಶ್ರೀಧರ್, ಸಂದೇಶ್ ಹಾಜರಿದ್ದರು.




