ಶ್ರೀಕೃಷ್ಣ ಮತ್ತು ಅರ್ಜುನರ ನಡುವೆ ಇದ್ದ ಸ್ನೇಹ ಹಾಗೂ ಸೌಹಾರ್ದತೆಯ ಬಾಂಧವ್ಯ ಅಮೋಘ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೇಖ್ ತನ್ವೀರ್ ಆಸಿಫ್ ರವರು ತಿಳಿಸಿದರು.
ಮಂಡ್ಯ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಆಯೋಜಿಸಿದ್ದ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಶ್ರೀಕೃಷ್ಣ ಭಗವದ್ಗೀತೆಯಲ್ಲಿ ಕೆಲಸವನ್ನು ನಿಷ್ಠೆ, ನಿಷ್ಪಕ್ಷಪಾತ, ಶ್ರದ್ಧೆಯಿಂದ ಮಾಡಿದರೆ ಗುರಿ ಮುಟ್ಟಲು ಸಾಧ್ಯ. ಶ್ರೀ ಕೃಷ್ಣನನ್ನು ಪರಮಾತ್ಮ ಎಂದು ಪೂಜಿಸುತ್ತಾರೆ. ಅವರು ನೀಡಿದ ಉಪದೇಶವನ್ನು ಭಗವದ್ಗೀತೆ ಎಂಬ ಮಹಾನ್ ಪುಸ್ತಕದಲ್ಲಿ ನಾವು ತಿಳಿಯಬಹುದಾಗಿದೆ ಎಂದರು.
ಧರ್ಮವನ್ನು ರಕ್ಷಣೆ ಮಾಡುವ ಸಂದರ್ಭದಲ್ಲಿ ಶ್ರೀ ಕೃಷ್ಣನು ಅರ್ಜುನನ ಸಾರಥಿಯಾಗಿ ಯುದ್ಧ ಭೂಮಿಯಲ್ಲಿ ನ್ಯಾಯಕ್ಕೆ ಜಯ ಕಾಣಲು ಯಾವುದೇ ರಕ್ತ ಸಂಬಂಧಕ್ಕೆ ಒಳಗಾಗದೆ ಧರ್ಮದ ಪಾಲನೆಯನ್ನು ಮಾಡಬೇಕು ಎಂದು ಅರ್ಜುನನಿಗೆ ಉಪದೇಶ ಮಾಡಿದರು.
ಧರ್ಮೋ ರಕ್ಷಿತಾ ರಕ್ಷತಃ ಎಂಬ ಉಪದೇಶದಂತೆ ಧರ್ಮವನ್ನು ರಕ್ಷಣೆ ಮಾಡಿದರೆ ಧರ್ಮವು ಅವರನ್ನು ರಕ್ಷಿಸುತ್ತದೆ ಎಂಬ ದಿವ್ಯ ಸಂದೇಶವನ್ನು ನೀಡಿದ್ದಾರೆ ಎಂದು ಅಪರ ಜಿಲ್ಲಾಧಿಕಾರಿ ಡಾ. ಹೆಚ್.ಎಲ್ ನಾಗರಾಜು ರವರು ಶ್ರೀ ಕೃಷ್ಣ ಜನ್ಮಾಷ್ಟಮಿ ಉದ್ದೇಶಿಸಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಡಾ. ಸಿದ್ದಲಿಂಗೇಶ್ ಹಾಗೂ ಜಿಲ್ಲಾಧಿಕಾರಿಗಳ ಕಚೇರಿಯ ಎಲ್ಲಾ ಸಿಬ್ಬಂದಿಗಳು ಹಾಜರಿದ್ದರು.




