Saturday, October 19, 2024

ಪ್ರಾಯೋಗಿಕ ಆವೃತ್ತಿ

ತಿಳಿದಿರಲಿ… ‘ಟಾರ್ಗೆಟ್ ಸಿದ್ರಾಮಯ್ಯ’ ಅನ್ನೋದು ಕೇವಲ ಮೋದಿ-ಶಾ ಷಡ್ಯಂತ್ರವಲ್ಲ!

ಮಾಚಯ್ಯ ಎಂ ಹಿಪ್ಪರಗಿ

ಮುಡಾ ಪ್ರಕರಣದಲ್ಲಿ ಸಿಎಂ ಸಿದ್ರಾಮಯ್ಯನವರನ್ನ ಬೇಕುಬೇಕಂತಲೇ ಟಾರ್ಗೆಟ್ ಮಾಡಿಕೊಳ್ಳಲಾಗಿದೆ ಅನ್ನೋದರಲ್ಲಿ ಎರಡು ಮಾತಿಲ್ಲ. ರಾಜ್ಯಪಾಲರು ಪ್ರಾಸಿಕ್ಯೂಷನ್ನಿಗೆ ತೋರಿದ ಅತ್ಯುತ್ಸಾಹವಿರಬಹುದು, ಬಿಜೆಪಿ-ಜೆಡಿಎಸ್‌ ಜಂಟಿಯಾಗಿ ನಡೆಸಿದ ಪಾದಯಾತ್ರೆ ಇರಬಹುದು, ರಾಜೀನಾಮೆಗೆ ಒತ್ತಾಯಿಸಿ ನಡೆಯುತ್ತಿರುವ ಪ್ರತಿಭಟನೆ ಇರಬಹುದು ಎಲ್ಲವೂ ಇದನ್ನು ಸಾಕ್ಷಿಸಮೇತ ಸಾಬೀತು ಮಾಡುತ್ತವೆ. ಈಗ ಇಡಿ ಮಧ್ಯಪ್ರವೇಶಿಸಿರೋದು ಇದಕ್ಕೊಂದು ತಾಜಾ ಉದಾಹರಣೆ. ಮನಿ ಲಾಂಡರಿಂಗ್, ಅಂತರರಾಜ್ಯ ಹಣ ವರ್ಗಾವಣೆಯಂತಹ ಪ್ರಕರಣಗಳಲ್ಲಷ್ಟೇ ತನಿಖೆ ನಡೆಸಲು ಅವಕಾಶವಿರುವ ಇ.ಡಿ.ಗೆ ಮುಡಾ ಸೈಟು ಹಂಚಿಕೆಯ ಸಿವಿಲ್‌/ಕ್ರಿಮಿನಲ್ ಡಿಸ್‌ಪ್ಯೂಟ್‌ನಲ್ಲಿ ತನಿಖೆ ನಡೆಸುವ ಅವಕಾಶವೇ ಇಲ್ಲ. ಮೋದಿ ಸರ್ಕಾರ ಸಿಬಿಐ ಅನ್ನು ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆಯನ್ನು ಮನಗಂಡು, ಸಿಬಿಐ ತನಿಖೆಗಳಿಗೆ ನೀಡಿದ್ದ ಪೂರ್ವಾನುಮತಿಯನ್ನು ಯಾವಾಗ ರಾಜ್ಯ ಸರ್ಕಾರ ರದ್ದು ಮಾಡಿತೋ, ಆಗ ಮೋದಿ ಸರ್ಕಾರ ಅವಕಾಶವಿಲ್ಲದಿದ್ದರೂ ಇ ಡಿ ಯನ್ನು ಛೂ ಬಿಟ್ಟಿದೆ. ಇದಕ್ಕೆ ಪ್ರತಿರೋಧ ಒಡ್ಡಲು ಸಿದ್ರಾಮಯ್ಯ ಮತ್ತು ಕಾಂಗ್ರೆಸಿನ ಮುಂದೆ ಕಾನೂನಿನ ಅವಕಾಶಗಳಿವೆ, ಅದನ್ನವರು ಬಳಸಿಕೊಳ್ಳಲಿದ್ದಾರೆ. ಆದರೆ ಸಿದ್ರಾಮಯ್ಯನವರನ್ನ ಹಣಿಯಲೇಬೇಕೆಂದು ಹೊರಟಿರುವ ಜಿದ್ದು ಮಾತ್ರ ಇಲ್ಲಿ ದಿನದಿಂದ ದಿನಕ್ಕೆ ಸ್ಪಷ್ಟವಾಗುತ್ತಲೇ ಬರುತ್ತಿದೆ.

ಸಿದ್ರಾಮಯ್ಯನವರನ್ನ ಯಾಕೆ ಟಾರ್ಗೆಟ್ ಮಾಡಿಕೊಳ್ಳಲಾಗಿದೆ?

ಸಿದ್ರಾಮಯ್ಯನವರ ವರ್ಚಸ್ಸನ್ನ ಕುಂದಿಸಿದ್ರೆ, ಕರ್ನಾಟಕದಲ್ಲಿ ಕಾಂಗ್ರೆಸ್ ಶಿಥಿಲಗೊಳ್ಳುತ್ತೆ. ನಂತರ ನಾವು ಅಧಿಕಾರಕ್ಕೇರಲು ಹಾದಿ ಸುಲಭವಾಗುತ್ತೆ ಎಂಬ ಕಾರಣಕ್ಕಾ? ದ್ವೇಷ ರಾಜಕಾರಣದ ಮೂಲಕ ಜನರ ನಡುವೆ ಕೋಮುಗಲಭೆ ಹುಟ್ಟುಹಾಕಿ ಬಿಜೆಪಿ ಕಂಡುಕೊಂಡಿದ್ದ ಸುಲಭ ರಾಜಕಾರಣದ ಮಾರ್ಗಕ್ಕೆ, ಗ್ಯಾರಂಟಿ ಯೋಜನೆಗಳೆಂಬ ಜನಪರ ರಾಜಕಾರಣವನ್ನು ಅಡ್ಡತಂದು, ಅವುಗಳ ಯಶಸ್ವಿ ಅನುಷ್ಠಾನದ ಮೂಲಕ ಇಡೀ ದೇಶದ ಜನ ಭಾವನಾತ್ಮಕ ರಾಜಕಾರಣದಿಂದ ಬದುಕಿನ ವಾಸ್ತವ ರಾಜಕಾರಣಕ್ಕೆ ಹೊರಳುವಂತೆ ಮಾಡಿದ್ದಕ್ಕಾ? ಬಿಜೆಪಿ ಪಾಲಿಗೆ ದಕ್ಷಿಣ ಭಾರತದ ಹೆಬ್ಬಾಗಿಲು ಎನಿಸಿದ್ದ ಕರ್ನಾಟಕದಲ್ಲಿ ಹೀನಾಯ ಹಿನ್ನಡೆ ಉಂಟು ಮಾಡಿದ್ದಕ್ಕಾ? ಯಾವ ಅಳುಕೂ, ಹಿಂಜರಿಕೆ ಇಲ್ಲದೆ ಮೋದಿಯ ದುರಾಡಳಿತವನ್ನು ನೇರ ಮಾತುಗಳಲ್ಲಿ ತರಾಟೆಗೆ ತೆಗೆದುಕೊಳ್ಳುತ್ತಾ ಬಂದಿದ್ದಕ್ಕಾ?……

ಇನ್‌ಫ್ಯಾಕ್ಟ್‌ ಮೇಲಿನ ಪ್ರಶ್ನೆಗೆ, ಇವೆಲ್ಲವೂ ಉತ್ತರಗಳು ಹೌದು. ಆದರೆ ಇವಿಷ್ಟೇ ಅಂತಿಮ ಉತ್ತರಗಳಲ್ಲ. ಸಿದ್ರಾಮಯ್ಯನವರನ್ನ ಟಾರ್ಗೆಟ್ ಮಾಡಿಕೊಂಡಿರೋದಕ್ಕೆ ಇವೆಲ್ಲವುಗಳಿಗಿಂತ ಮುಖ್ಯವಾದ ಮತ್ತೊಂದು ಕಾರಣವಿದೆ. ಅದು ಆರೆಸ್ಸೆಸ್‌!

ಮೇಲಿನ ಅಷ್ಟೂ ಕಾರಣಗಳು ಬಿಜೆಪಿ ಮತ್ತು ಮೋದಿಯ ರಾಜಕೀಯ ಹಗೆತನಕ್ಕಷ್ಟೇ ಸೀಮಿತಗೊಳ್ಳುತ್ತವೆ. ಆದರೆ ಸಿದ್ರಾಮಯ್ಯನವರನ್ನ ಟಾರ್ಗೆಟ್ ಮಾಡಿಕೊಂಡಿರುವುದರ ಹಿಂದೆ ರಾಜಕೀಯವನ್ನು ಮೀರಿದ ಸೈದ್ದಾಂತಿಕ ಇಶ್ಯೂಗಳಿವೆ. ಫ್ಯೂಡಲ್‌ ಹಿನ್ನೆಲೆಯ ಆರೆಸ್ಸೆಸ್‌ನ ಜನವಿರೋಧಿ ಐಡಿಯಾಲಜಿಗಳೇ ಅಲ್ಲಾಡುವಂತೆ ಯಾವಾಗ ಸಿದ್ದರಾಮಯ್ಯನವರು ಶೋಷಿತರ ರಾಜಕೀಯ ಮತ್ತು ಆರ್ಥಿಕ ಜಾಗೃತಿಯ ಪ್ರಶ್ನೆಗಳನ್ನು ಮುನ್ನೆಲೆಗೆ ತಂದರೋ, ಮಹಿಳೆಯ ಬಲವರ್ಧನೆಯ ಬಗ್ಗೆ ಯೋಜನೆಗಳನ್ನು ರೂಪಿಸಿದರೋ, ಬಲಾಢ್ಯ ಜಾತಿಗಳ ರಾಜಕಾರಣಕ್ಕೆ ಎದುರಾಗಿ ಅಹಿಂದ ಸಮುದಾಯಗಳ ಏಕೀಭವನವನ್ನು ಸಾಧಿಸಿ ತೋರಿದರೋ, ಮೌಢ್ಯ ಮತ್ತು ಬ್ರಾಹ್ಮಣ್ಯಶಾಹಿ ಹುನ್ನಾರಗಳನ್ನು ಸಾಮಾನ್ಯ ಜನರ ಭಾಷೆಯಲ್ಲಿ ಮಾತಾಡಲು ಶುರು ಮಾಡಿದರೋ, ವಿಭಜಕ ರಾಜಕಾರಣದ ಅನಾಹುತಗಳನ್ನು ತಪ್ಪಿಸಿ ಜನರಲ್ಲಿ ಸಾಮರಸ್ಯದ ಮಹತ್ವವನ್ನು ಸಾರಲು ಮುಂದಾದರೋ ಆಗ ಆರೆಸ್ಸೆಸ್ ನಿಜಕ್ಕೂ ಸಿದ್ರಾಮಯ್ಯನವರನ್ನು ಗಂಭೀರವಾಗಿ ಗಮನಿಸಲು ಶುರು ಮಾಡಿತು.

ಸಿದ್ರಾಮಯ್ಯ ತಮ್ಮ ಇಷ್ಟೂ ಕಾಳಜಿಗಳನ್ನು ಕೇವಲ ಚುನಾವಣೆಯಲ್ಲಿ ಓಟ್‌ ಪಡೆಯುವ ಗಿಮಿಕ್‌ ಆಗಿ ಬಳಸಿದ್ದಿದ್ದರೆ ಆರೆಸ್ಸೆಸ್‌ಗೆ ಯಾವ ಸಮಸ್ಯೆಯೂ ಇರುತ್ತಿರಲಿಲ್ಲ. ಬೇರೆಬೇರೆ ರಾಜ್ಯಗಳಲ್ಲಿ ಹೀಗೆ ಆರೆಸ್ಸೆಸ್‌ನ ವಿರುದ್ಧ ಮಾತಾಡಿ ರಾಜಕಾರಣ ಮಾಡಿದವರನ್ನ ಒಳಗಿಂದೊಳಗೆ ಪಳಗಿಸಿಕೊಂಡು ಅದಕ್ಕೆ ಅಭ್ಯಾಸವಾಗಿ ಹೋಗಿದೆ. ಬೇರೆ ರಾಜ್ಯದ ಮಾತೇಕೆ? ಕರ್ನಾಟಕದಲ್ಲೆ `ಜಾತ್ಯತೀತ’ ಹೆಸರಿನಲ್ಲಿ ಅಲ್ಪಸಂಖ್ಯಾತ ಮತಗಳನ್ನು ಛಿದ್ರಗೊಳಿಸುತ್ತಿದ್ದ ಕುಮಾರಸ್ವಾಮಿ ಆರೆಸ್ಸೆಸ್‌ನ ವಿರುದ್ಧ ಎಂತೆಂತಲ್ಲ ಮಾತಾಡಿಲ್ಲ. ಏನೇನಲ್ಲಾ ಆರೋಪ ಮಾಡಿಲ್ಲ. ಉದ್ದುದ್ದ ಲೇಖನಗಳನ್ನೇ ಬರೆದರು. ಆದರೆ ಬಿಜೆಪಿ ಯಾವತ್ತೂ ಕುಮಾರಸ್ವಾಮಿಯನ್ನು ಟಾರ್ಗೆಟ್ ಮಾಡಿಕೊಳ್ಳಲೇ ಇಲ್ಲ. ಯಾಕೆಂದರೆ ಕುಮಾರಸ್ವಾಮಿಯೊಟ್ಟಿಗೆ ಆರೆಸ್ಸೆಸ್‌ಗಿದ್ದ ಅಂಡರ್ ಸ್ಟ್ಯಾಂಡಿಂಗ್‌ ಅಂತದ್ದು. ಆದ್ರೆ ಸಿದ್ರಾಮಯ್ಯ ಅಷ್ಟೂ ಕಾಳಜಿಗಳನ್ನು ತನ್ನ ರಾಜಕಾರಣದ ಪ್ರಾಮಾಣಿಕ ಐಡಿಯಾಲಜಿಯಾಗಿ ಸ್ವೀಕರಿಸಿ, ಆರೆಸ್ಸೆಸ್‌ ವಿರುದ್ಧ ಹೋರಾಟಕ್ಕಿಳಿದದ್ದು ಅದರಿಂದ ಅರಗಿಸಿಕೊಳ್ಳಲಾಗಲಿಲ್ಲ.

ವೈದಿಕಶಾಹಿಯ ಬುಡವನ್ನೇ ಅಲ್ಲಾಡಿಸುವಂತಹ ಪ್ರಯತ್ನಕ್ಕೆ ಯಾರೇ ಇಳಿದರೂ ಅವರನ್ನು ವ್ಯವಸ್ಥಿತವಾಗಿ ಮಟ್ಟಹಾಕುತ್ತಾ ಬಂದಿರುವುದು ಬುದ್ದನ ಕಾಲದಲ್ಲೂ ನಡೆದಿದೆ, ಬಸವಣ್ಣನ ಕಾಲದಲ್ಲೂ ಪುನರಾವರ್ತಿಸಿದೆ. ಸಿದ್ರಾಮಯ್ಯನವರನ್ನ ಟಾರ್ಗೆಟ್ ಮಾಡಿಕೊಂಡಿರೋದು ಕೂಡಾ ಇಂತಹ ಮುಂಚಲನೆ ಹಾಗೂ ಹಿಂಚಲನೆಗಳ ನಡುವಿನ ಸೈದ್ಧಾಂತಿಕ ಸಂಘರ್ಷವೇ ಹೊರತು ಕೇವಲ ಬಿಜೆಪಿ ವರ್ಸಸ್ ಕಾಂಗ್ರೆಸ್‌ ಅಥವಾ ಮೋದಿ ವರ್ಸಸ್ ಸಿದ್ರಾಮಯ್ಯ ಎಂಬ ಸೀಮಿತ ವಿದ್ಯಮಾನವಲ್ಲ. ಸಂವಿಧಾನವಾದಿ, ಜಾತ್ಯತೀತವಾದಿ, ಸಮಾಜವಾದಿ, ಜನಪರವಾದಿ ಹೀಗೆ ನೂಲಿನಷ್ಟು ವ್ಯತ್ಯಾಸದೊಂದಿಗೆ ಮುಂಚಲನೆಯ ದಿಕ್ಕಿನಲ್ಲಿ ಹೆಜ್ಜೆಹಾಕುತ್ತಿರುವ ನಾವೆಲ್ಲ ಈಗ ಹಿಂಚಲನವಾದಿಗಳ ಷಡ್ಯಂತ್ರವನ್ನು ಸ್ಪಷ್ಟವಾಗಿ ಅರ್ಥ ಮಾಡಿಕೊಳ್ಳಬೇಕಿದೆ. ಅಲ್ಪಸಂಖ್ಯೆಯ ಸಂಘ ಪರಿವಾರಿಗಳಿಗೂ ಬಹುಸಂಖ್ಯೆಯ ಪ್ರಗತಿಪರರಿಗೂ ಇರುವ ದೊಡ್ಡ ಅಂತರವೆಂದರೆ ಒಗ್ಗಟ್ಟಿನ ಕೊರತೆ. ಅವರಲ್ಲೂ ಭಿನ್ನಾಭಿಪ್ರಾಯಗಳಿರುತ್ತವೆ, ವ್ಯಕ್ತಿಗತ ಮಟ್ಟದ ಅಸಹನೆ-ಮನಸ್ತಾಪಗಳಿರುತ್ತವೆ, ಈಗೋಗಳ ತಾಕಲಾಟವಿರುತ್ತದೆ. ಆದರೆ ಒಗ್ಗೂಡಲೇಬೇಕಾದ ಸಂದರ್ಭ ಬಂದಾಗ ಮುಲಾಜಿಲ್ಲದೆ ಒಗ್ಗೂಡುತ್ತಾರೆ. ಗೆಲ್ಲುತ್ತಾರೆ.

ಆದರೆ ನಾವು!? ಒಗ್ಗೂಡಬೇಕಾದ ಸಂದರ್ಭ ಬಂದಾಗಲೂ ನಮ್ಮ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನೂ ಡೆಮಾಕ್ರಟಿಕ್‌ ರೈಟ್ಸ್‌, ಡೈವರ್ಸಿಟಿ ಆಫ್‌ ಎಕ್ಸ್‌ಫ್ರೆಷನ್‌ ಅಂತೆಲ್ಲ ಎಣಿಕೆ ಮಾಡುತ್ತಾ ಕೂರುತ್ತವೆ. ಕಾಲ ಕೈಚೆಲ್ಲಿದ ಮೇಲೆ, ನಮ್ಮ ಸೋಲಿನ ಪರಾಮರ್ಶೆಗೆ ಸೆಮಿನಾರುಗಳನ್ನು ಆಯೋಜಿಸಿಕೊಂಡು ಕೂರುತ್ತೇವೆ. ಯಾರು ನಮ್ಮವರು, ಯಾರು ಪ್ರತಿಸ್ಪರ್ಧಿಗಳು ಎಂದು ಸ್ಪಷ್ಟವಾಗಿ ಗುರುತಿಸಿಕೊಳ್ಳುವ ತುರ್ತು ಕಾಲ ಈಗ ಬಂದಿದೆ. ಇದು ಸಿದ್ರಾಮಯ್ಯನ ವೈಯಕ್ತಿಕ ವಿಚಾರ ಎಂಬ ಸಂಕುಚಿತದಲ್ಲೇ ನಮ್ಮನ್ನು ನಾವು ಸಂತೈಸಿಕೊಳ್ಳುವುದಾದರೆ ಇತಿಹಾಸದಿಂದ ನಾವು ಏನನ್ನೂ ಕಲಿತಿಲ್ಲ ಎಂಬುದು ಸಾಬೀತಾಗುತ್ತದೆ.

ಕಾಲ ಎಲ್ಲವನ್ನೂ ಬದಲಾಯಿಸುತ್ತದೆ; ಆದರೆ ಕಾಲ ಅವಕಾಶ ಕೊಟ್ಟಾಗ ಬದಲಾವಣೆಗೆ ನಮ್ಮ ಪ್ರಜ್ಞಾಪೂರ್ವ ಪ್ರಯತ್ನವೂ ಇರಬೇಕಷ್ಟೆ….

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!