ಬೆಳಗಾವಿಯಲ್ಲಿ ಮುಂದಿನ ಸೋಮವಾರದಿಂದ ಆರಂಭವಾಗಲಿರುವ ಚಳಿಗಾಲದ ಅಧಿವೇಶನದಲ್ಲಿ ಶಿಕ್ಷಕರ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತುವ ಮೂಲಕ ಸದನದ ಗಮನ ಸೆಳೆಯುತ್ತೇನೆ ಎಂದು ವಿಧಾನ ಪರಿಷತ್ ಸದಸ್ಯ ಕೆ.ವಿವೇಕಾನಂದ ಹೇಳಿದರು.
ಪಾಂಡವಪುರ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಮತ ನೀಡಿದ ಹಿನ್ನೆಲೆಯಲ್ಲಿ ಮತದಾರರಿಗೆ ಕೃತಜ್ಞತೆ ಸಲ್ಲಿಸಿ ಅವರು ಮಾತನಾಡಿದರು.
ಶಿಕ್ಷಕರ ಕ್ಷೇತ್ರದಿಂದ ಆಯ್ಕೆಯಾಗಿರುವ ನನಗೆ ಶಿಕ್ಷಕರ ಹಲವಾರು ಸಮಸ್ಯೆಗಳ ಬಗ್ಗೆ ಅರಿವಿದೆ. ಈ ಎಲ್ಲಾ ಸಮಸ್ಯೆಗಳನ್ನು ಪ್ರಶ್ನೋತ್ತರ ವೇಳೆ ಸದನದಲ್ಲಿ ಪ್ರಸ್ತಾಪಿಸುವೆ. ಮತೋರ್ವ ವಿಧಾನ ಪರಿಷತ್ ಸದಸ್ಯ ಬೋಜೇಗೌಡ ಹಾಗೂ ನಾನು ಜಂಟಿಯಾಗಿ ಪ್ರಶ್ನೋತ್ತರ ವೇಳೆಯಲ್ಲಿ ಮಾತನಾಡಲು ಕೇಳಿಕೊಂಡಿದ್ದೇವೆ. ಶಿಕ್ಷಕರ
ಸಮಸ್ಯೆಗಳನ್ನು ಸದನದ ಮುಂದಿಡುತ್ತೇವೆ. ಶಿಕ್ಷಕರ ಆಶೀರ್ವಾದದಿಂದ ಆಯ್ಕೆಯಾಗಿರುವ ನಾನು ಅವರ ಸಮಸ್ಯೆಗಳನ್ನು ಬಗೆಹರಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ. ನನ್ನ ಮೇಲೆ ನಂಬಿಕೆ ಇಟ್ಟುಕೊಳ್ಳಿ ಎಂದರು.
ನಮ್ಮ ಸರ್ಕಾರ ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದರೆ ಶಿಕ್ಷಕರ ಎಲ್ಲಾ ಸಮಸ್ಯೆ ಬಗೆಹರಿಸಲಾಗುವುದು. ನಮ್ಮ ನಾಯಕರಾದ ಎಚ್.ಡಿ.ಕುಮಾರಸ್ವಾಮಿ ಶಿಕ್ಷಕರ ಸಮಸ್ಯೆಗೆ ಸ್ಪಂದಿಸುವ ಕೆಲಸ ಮಾಡಲಿದ್ದಾರೆ ಎಂದರು.
ಎಸ್ ಎಸ್ ಎಲ್ ಸಿ ಫಲಿತಾಂಶ ಸುಧಾರಣೆ ತನ್ನಿ
ಕಳೆದ ಸಾಲಿನ ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ರಾಜ್ಯದಲ್ಲೇ 2 ನೇ ಸ್ಥಾನದಲ್ಲಿದ್ದ ಮಂಡ್ಯ ಜಿಲ್ಲೆ 19ನೇ ಸ್ಥಾನಕ್ಕೆ ಕುಸಿದದ್ದು ಬೇಸರ ಮೂಡಿಸಿದೆ. ಪರೀಕ್ಷೆ ಕೇಂದ್ರಗಳಲ್ಲಿ ಸಿಸಿಟಿವಿ ಅಳವಡಿಸಿದ್ದರಿಂದ ಫಲಿತಾಂಶದಲ್ಲಿ ಕುಸಿತ ಕಾಣುವಂತಾಯಿತು ಎಂದು ಹೇಳುವುದಾದರೂ ಬೇರೆ ಜಿಲ್ಲೆಗಳಲ್ಲಿ ಫಲಿತಾಂಶ ಏರಿಕೆ ಕಾಣಲಿಲ್ಲವೇ ಎಂಬ ಕಾರಣವೂ ಇದೆ. ಮಕ್ಕಳನ್ನು ಉತ್ತೇಜಿಸುವ ಮೂಲಕ ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಸುಧಾರಣೆ ತರಬೇಕು ಎಂದರು.
ಈ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಮಂಡ್ಯ ಜಿಲ್ಲೆ 2ನೇ ಸ್ಥಾನಕ್ಕೆ ಬರುವುದು ಬೇಡ; 10ರೊಳಗಾದರೂ ಬರಬೇಕಿದೆ. ಕೊನೆ ಪಕ್ಷ 8 ಅಥವಾ 9ನೇ ಸ್ಥಾನಕ್ಕೆ ಬರಲು ಪ್ರಯತ್ನಿಸಬೇಕಿದೆ. ಆ ನಿಟ್ಟಿನಲ್ಲಿ ಶಿಕ್ಷಕರು ಕಾರ್ಯ ಪ್ರವೃತ್ತರಾಗಬೇಕು ಎಂದರು.
ಇದೇ ವೇಳೆ ಶಿಕ್ಷಕರ ಹತ್ತು-ಹಲವಾರು ಸಮಸ್ಯೆಗಳನ್ನು ಆಲಿಸಿದ ಶಾಸಕರು, ಈಗಾಗಲೇ
ಭಾನುವಾರ ಶಾಲೆ ನಡೆಸಬಾರದು ಎಂಬುದಾಗಿ ಜಿಲ್ಲಾಧಿಕಾರಿಗಳಿಗೆ ಸ್ಪಷ್ಟವಾಗಿ ಆದೇಶಿಸಿದ್ದು, ಶಿಕ್ಷಕರ ಬಗ್ಗೆ ಕಡೆಗಣನೆ ಸಲ್ಲದು; ಶಿಕ್ಷಕರನ್ನು ಗೌರವದಿಂದ ಕಾಣುವಂತೆ ತಿಳಿಹೇಳಲಾಗಿದೆ ಎಂದು ಹೇಳಿದರು.
ಮತದಾರರಿಗೆ ಕೃತಜ್ಞತೆ ಸಲ್ಲಿಸುವೆ
ಕಳೆದ ಜೂನ್ 6ರಂದು ವಿಧಾನ ಪರಿಷತ್ ಗೆ ಆಯ್ಕೆಯಾದೆ. ದಕ್ಷಿಣ ಶಿಕ್ಷಕರ ಕ್ಷೇತ್ರ ಚುನಾವಣೆಯಲ್ಲಿ ಎನ್ ಡಿಎ ಅಭ್ಯರ್ಥಿಯಾಗಿದ್ದ ನನಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹಾಗೂ ಮಾಜಿ ಸಿಎಂ ಎಚ್.ಡಿ.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜೇಂದ್ರ ಅವರ ಆಶೀರ್ವಾದ ಹಾಗೂ ಕ್ಷೇತ್ರದ ಮತದಾರರ ಸಹಕಾರದಿಂದಾಗಿ ನನ್ನ ಗೆಲುವಿಗೆ ನಾಂದಿ ಹಾಡಲಾಯಿತು. ತಾಲೂಕುವಾರು ಮತದಾರರನ್ನು ಭೇಟಿ ಮಾಡಿ ಕೃತಜ್ಞತೆ ಅರ್ಪಿಸುತ್ತಿದ್ದು, ಈ ವರೆಗೂ 17ತಾಲೂಕುಗಳಿಗೆ ಭೇಟಿ ಮಾಡಿದ್ದೇನೆ. ಮುಂಬರುವ ದಿನಗಳಲ್ಲಿ ಸಮಸ್ಯೆಗಳನ್ನು ಬಗೆಹರಿಸುವ ಮೂಲಕ ಎಲ್ಲಾ ಮತದಾರರ ಋಣ ತೀರಿಸುತ್ತೇನೆ ಎಂದರು.
ಈ ವೇಳೆ ಪದವಿ ಪೂರ್ವ ಕಾಲೇಜು ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷ ಚನ್ನಕೃಷ್ಣ, ತಾಲೂಕು ಅಧ್ಯಕ್ಷ ಎಚ್.ಎನ್.ರಾಮಕೃಷ್ಣೇಗೌಡ, ಉಪನ್ಯಾಸಕ ಎನ್.ಚಲುವೇಗೌಡ, ಪ್ರಭಾರಿ ಪ್ರಾಂಶುಪಾಲ ಮಂಜುನಾಥ್, ತಾಲೂಕು ಪ್ರೌಢಶಾಲೆ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಎಲ್.ಎಸ್.ಕೇಶವಮೂರ್ತಿ, ತಾಲೂಕು ಸರ್ಕಾರಿ ನೌಕರರ ಸಂಘದ ನಿರ್ದೇಶಕ ಮಾಣಿಕ್ಯನಹಳ್ಳಿ ಜಯರಾಂ, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಚಿಕ್ಕಾಡೆ ಶ್ರೀನಿವಾಸ್ ಸೇರಿದಂತೆ ತಾಲೂಕಿನ ಎಲ್ಲಾ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರುಗಳು ಉಪಸ್ಥಿತರಿದ್ದರು.




