ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಬೇಡಿಕೆಗಳನ್ನು ಈಡೇರಿಸುವಂತೆ ಮುಖ್ಯಮಂತ್ರಿ, ಶಿಕ್ಷಣ ಸಚಿವ ಹಾಗೂ ಶಾಲಾ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ಮನವಿ ಮಾಡಿ ಆಗಸ್ಟ್ 25ರೊಳಗೆ ಬೇಡಿಕೆ ಈಡೇರಿಸದಿದ್ದರೆ ಆಗಸ್ಟ್ 27ರಿಂದ ಹಂತ ಹಂತವಾಗಿ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮಂಡ್ಯ ಜಿಲ್ಲಾಧ್ಯಕ್ಷ ಜೆ.ವೈ.ಮಂಜುನಾಥ ತಿಳಿಸಿದರು.
ಮಂಡ್ಯ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2024ರ ಆಗಸ್ಟ್ 12ರ ಶಿಕ್ಷಕರ ಹೋರಾಟವನ್ನು ಸರ್ಕಾರಕ್ಕೆ ನೆನಪಿಸಿದ ಅವರು 2024ರ ಸೆಪ್ಟೆಂಬರ್ 04 ರಂದು ಸಮಿತಿ ರಚಿಸಿ ಸಮಸ್ಯೆ ಸರಿಪಡಿಸುವುದಾಗಿ ಭರವಸೆ ನೀಡಿ, ಇಲ್ಲಿವರೆಗೂ ಈಡೇರಿಸದೇ ಇರುವುದು ನೋವುಂಟು ಮಾಡಿದೆ ಎಂದರು.
ಈ ಹಿನ್ನಲೆ ಇದೇ ಆಗಸ್ಟ್ 08ರಂದು ರಾಜ್ಯ ಕಾರ್ಯಕಾರಿ ಸಮಿತಿ ಸಭೆ ನಡೆಸಿ ಹಂತ ಹಂತವಾಗಿ ಹೋರಾಟ ರೂಪಿಸಿದ್ದು, ನಿರಂತರ ಹೋರಾಟ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ. ಮೊದಲ ಹಂತವಾಗಿ ಆ.12ರಂದು ಎಲ್ಲಾ ಜಿಲ್ಲಾ ಕೇಂದ್ರದಲ್ಲಿ ಜಿಲ್ಲಾಡಳಿತ ಮೂಲಕ ಮುಖ್ಯಮಂತ್ರಿ, ಶಿಕ್ಷಣ ಸಚಿವ ಹಾಗೂ ಶಾಲಾ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ಬೇಡಿಕೆ ಈಡೇರಿಸುವಂತೆ ಮನವಿ ಸಲ್ಲಿಸಲಾಗುವುದು, ಹೋರಾಟದ ಕುರಿತು ಎಚ್ಚರಿಕೆ ಪತ್ರ ನೀಡಲಾಗುವುದು ಎಂದು ಹೇಳಿದರು.
ಆಗಸ್ಟ್ 25ರಿಂದ 27ರೊಳಗೆ ಬೇಡಿಕೆ ಈಡೇರಿಸದೇ ಇದ್ದಲ್ಲಿ ಎರಡನೇ ಹಂತವಾಗಿ ಸೆಪ್ಟೆಂಬರ್ 03ರಂದು ಎಲ್ಲಾ ಜಿಲ್ಲಾ, ತಾಲ್ಲೂಕು, ರಾಜ್ಯ ಮಟ್ಟದ ಪದಾಧಿಕಾರಿಗಳನ್ನೊಳಗೂಡಿ ಸಾಂದರ್ಭಿಕ ರಜೆ ಹಾಕಿ ಫ್ರೀಡಂ ಪಾರ್ಕ್ ಚಲೋ ರಾಜ್ಯ ಮಟ್ಟದ ಬೃಹತ್ ಹೋರಾಟ ಮಾಡಲಾಗುವುದು. ಅದೇ ದಿನ 06ರಿಂದ 08ನೇ ತರಗಳ ಪಾಠ ಬೋಧನೆ ಬಹಿಷ್ಕಾರ ಮಾಡಲಾಗುವುದೆಂದರು.
ಮೂರನೇ ಹಂತವಾಗಿ ಸರ್ಕಾರದಿಂದ ಯಾವುದೇ ನಿರ್ಣಯ ಹೊರಬರದೇ ಹೋದಲ್ಲಿ ಸೆ.04ರಿಂದ 05ರವರೆಗೆ ಅಹೋರಾತ್ರಿ ಧರಣಿ, ನಾಲ್ಕನೇ ಹಂತವಾಗಿ ಸೆ.05ರಂದು ಫ್ರೀಡಂ ಪಾರ್ಕಿನಲ್ಲಿಯೇ ಶಿಕ್ಷಕರ ದಿನಾಚರಣೆ ಮಾಡಲಾಗುವುದು. ಅಂತೆಯೂ ಬೇಡಿಕೆಗಳ ಈಡೇರಿಕೆಗೆ ಸರ್ಕಾರ ಮುಂದಾಗದಿದ್ದಲ್ಲಿ ಬೇಡಿಕೆ ಈಡೇರಿಸುವವರೆಗೂ ಹೋರಾಟ ಮುಂದುವರೆಸಲಾಗುವುದು ಎಂದು ತಿಳಿಸಿದರು.
ಗೋಷ್ಠಿಯಲ್ಲಿ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ.ಚಿಕ್ಕೇಗೌಡ, ಕೆ.ಆರ್.ಪೇಟೆ ತಾ.ಅಧ್ಯಕ್ಷ ಪೂರ್ಣಚಂದ್ರ ತೇಜಸ್ವಿ, ಮದ್ದೂರು ತಾ.ಅಧ್ಯಕ್ಷ ದೇವರಾಜು, ಶ್ರೀರಂಗಪಟ್ಟಣ ತಾ.ಅಧ್ಯಕ್ಷ ಲೋಕೇಶ್, ನಾಗಮಂಗಲ ತಾ.ಅಧ್ಯಕ್ಷ ಜಿ.ಕೆ.ರುದ್ರೇಶ್, ಪಾಂಡವಪುರ ತಾ.ಅಧ್ಯಕ್ಷ ಎಂ.ಡಿ.ಕುಮಾರ್ ಇದ್ದರು.




