Friday, November 20, 2026

ಪ್ರಾಯೋಗಿಕ ಆವೃತ್ತಿ

ವಿದ್ಯಾರ್ಥಿಗಳಿಗೆ ಟೆಲಿಸ್ಕೋಪ್ ತಯಾರಿಸುವ ಕಾರ್ಯಾಗಾರ : ಪುಷ್ಪಲತಾ

ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ವತಿಯಿಂದ ಜುಲೈ ತಿಂಗಳಿನಲ್ಲಿ `ನಾನು ವಿಜ್ಞಾನಿ-2025′ ಅಡಿಯಲ್ಲಿ ವಿದ್ಯಾರ್ಥಿಗಳಿಗೆ ಟೆಲಿಸ್ಕೋಪ್ ತಯಾರಿಸುವ ಹಾಗೂ ಭಾಗವಹಿಸುವ ವಿದ್ಯಾರ್ಥಿಗಳ ಮೂಲಕ `ಶಾಲೆಗೊಂದು ಟೆಲಿಸ್ಕೋಪ್’ ವಿತರಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಪರಿಷತ್ತಿನ ನಿರ್ದೇಶಕಿ ಪುಷ್ಪಲತಾ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳೇ ಟೆಲಿಸ್ಕೋಪ್ ತಯಾರಿಸುವ ಐತಿಹಾಸಿಕ ಕಾರ್ಯಕ್ರಮಕ್ಕೆ ರಾಜ್ಯದ 250 ಶಾಲೆಗಳಿಂದ 250 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ, ನುರಿತ ತಜ್ಞರಿಂದ ಅವರಿಗೆ ಟೆಲಿಸ್ಕೋಪ್ ತಯಾರಿಸುವ 8 ದಿನಗಳ ತರಬೇತಿಯನ್ನು ದೊಡ್ಡಬಳ್ಳಾಪುರದ ಬಳಿಯ ಬ್ಯಾಸೆಂಟ್ ಉದ್ಯಾನವನದ ಸ್ಕೌಟ್ಸ್‌ ಕ್ಯಾಂಪ್‌ನಲ್ಲಿ ನೀಡಲಾಗುವುದು ಎಂದರು.

ಪರಿಷತ್ತಿನ ಸಂಸ್ಥಾಪಕ ಅಧ್ಯಕ್ಷ ಡಾ.ಹುಲಿಕಲ್ ನಟರಾಜ್ ಅವರು ಮಂಡ್ಯ ಜಿಲ್ಲೆಯ 10 ವಿದ್ಯಾರ್ಥಿಗಳಿಗೆ ಟೆಲಿಸ್ಕೋಪ್ ತಯಾರಿಸುವ ಅವಕಾಶ ಕಲ್ಪಿಸಿಕೊಟ್ಟಿದ್ದು, ಅಪೇಕ್ಷಿತ 10 ಶಾಲೆಗಳಿಂದ 10 ವಿದ್ಯಾರ್ಥಿಗಳನ್ನು (ಶಾಲೆಗೆ ತಲಾ ಒಂದು ವಿದ್ಯಾರ್ಥಿ)ಆಯ್ಕೆ ಮಾಡಿ. ಸದರಿ ತರಬೇತಿಗೆ ಕಳುಹಿಸಿ ಕೊಡಲಾಗುವುದು. ವಿದ್ಯಾರ್ಥಿಯೊಂದಿಗೆ ಶಾಲೆಯ ಓರ್ವ ವಿಜ್ಞಾನ ಶಿಕ್ಷಕರು, ಒಬ್ಬ ಪೋಷಕರು ಇರಬಹುದಾದ ಅವಕಾಶವಿದ್ದು, ಅವರಿಗೆ ಉಚಿತ ಊಟ ಮತ್ತು ವಾಸ್ತವ್ಯದ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಹೇಳಿದರು.

ಪರಿಷತ್ ವತಿಯಿಂದ 15 ನುರಿತ ಮತ್ತು ಭೌಗೋಳಿಕ ವಿಷಯದ ತಜ್ಞ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ನೀಡಲಾಗುತ್ತಿದ್ದು, ಸದರಿ ತರಬೇತಿಗೆ ಆಯ್ಕೆಯಾಗುವ ವಿದ್ಯಾರ್ಥಿಗಳಿಂದ ಟೆಲಿಸ್ಕೋಪ್ ತಯಾರಿಸುವ ಸಾಮಗ್ರಿಗಳಿಗಾಗಿ 15 ಸಾವಿರ ಪಾವತಿಸಿಕೊಳ್ಳಲಾಗುವುದು. ಇದನ್ನು ಪೋಷಕರು ಅಥವಾ ಶಾಲೆಯ ವತಿಯಿಂದಲಾದರೂ ಪಾವತಿ ಮಾಡಬಹುದಾಗಿದೆ ಎಂದು ತಿಳಿಸಿದರು.

ಸದರಿ ತರಬೇತಿ ಕಾರ್ಯಕ್ರಮವನ್ನು ದಾಖಲು ಮಾಡಲು ಲಿಮ್ಕಾ, ಗಿನ್ನೀಸ್, ಇಂಡಿಯನ್ ಬುಕ್ ಆಫ್ ರೆಕಾರ್ಡ್ ಸಂಸ್ಥೆಗಳು ಆಗಮಿಸಲು ಕ್ರಮವಹಿಸಿ, ವಿದ್ಯಾರ್ಥಿಗಳು ಶಿಕ್ಷಕರಿಗೆ ಪ್ರಶಸ್ತಿ ವಿತರಣೆ ಮಾಡಲಾಗುವುದು ಎಂದು ಇದೇ ವೇಳೆ ಹೇಳಿದರು.

ಗೋಷ್ಠಿಯಲ್ಲಿ ಪರಿಷತ್ತಿನ ಜಿಲ್ಲಾ ಸಂಚಾಲಕಿ ಬಿ.ಎಸ್.ಅನುಪಮಾ, ತಾ.ಅಧ್ಯಕ್ಷ ಮಹೇಂದ್ರ, ವಸಂತ, ಶೃತಿ ಇದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ