ಪ್ರತಿಯೊಬ್ಬ ಕ್ರೀಡಾ ಸ್ಪರ್ಧಾರ್ಥಿಗಳು ಕ್ರೀಡಾ ಮನೋಭಾವದಿಂದ ಸೋಲು-ಗೆಲುವನ್ನು ಸ್ವೀಕರಿಸಬೇಕು ಎಂದು ಜಿಲ್ಲಾ ಟೆನ್ನಿಸ್ ಅಸೋಷಿಯೇಷನ್ ಅಧ್ಯಕ್ಷ ಕೆ.ಆರ್.ದಯಾನಂದ್ ಹೇಳಿದರು.
ಮಂಡ್ಯ ನಗರದ ಪಿಇಟಿ ಟೆನ್ನಿಸ್ ಕ್ರೀಡಾಂಗಣದ ಆವರಣದಲ್ಲಿ ಟಾಪ್ ಸರ್ವ್ ಟೆನ್ನಿಸ್ ಅಕಾಡೆಮಿ, ಪಿ ಇ ಟಿ ಟೆನ್ನಿಸ್ ಸ್ಟೇಡಿಯಂ ಮಂಡ್ಯ ಇವರ ವತಿಯಿಂದ ಆಯೋಜಿಸಿದ್ದ ಆಲ್ ಇಂಡಿಯಾ ಟೆನ್ನಿಸ್ ಕಪ್ ಟೂರ್ನಮೆಂಟ್ ಉದ್ಘಾಟನಾ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕ್ರೀಡಾಪಟುವಾಗಲು ಕ್ರೀಡಾಸಕ್ತಿ, ಸಮತೋಲನ ಮನೋಭಾವ ಅವಶ್ಯಕ, ಇಂದಿನಿಂದ ಜೂ.16ರ ವರಗೆ ಪಿಇಟಿ ಟೆನ್ನಿಸ್ ಕಪ್ ಪಂದ್ಯಾವಳಿಗಳು ನಡೆಯಲಿವೆ, 2 ದಿನ ಅರ್ಹತಾ ಸುತ್ತು ನಡೆಯುತ್ತದೆ, 16ರಂದು ಪೈನಲ್ ಪಂದ್ಯಗಳು ಆರಂಭಗೊಳ್ಳುತ್ತವೆ, ಭಾರತದ ವಿವಿಧೆಡೆಗಳಿಂದ ಸುಮಾರು 160 ಮಂದಿ ಸ್ಪರ್ಧಾರ್ಥಿಗಳು ಪಾಲ್ಗೊಳ್ಳಲಿದ್ದಾರೆ. ಎಲ್ಲಾ ಸ್ಪರ್ಧಾರ್ಥಿಗಳು ಉತ್ತಮವಾಗಿ ಟೆನ್ನಿಸ್ ಕ್ರೀಡೆಗಳಲ್ಲಿ ಪಾಲ್ಗೊಂಡು ರಾಜ್ಯ, ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಲಿ, ಭವಿಷ್ಯ ಉತ್ತಮವಾಗಿರಲಿ ಎಂದು ಆಶಿಸಿದರು.

ಟೆನ್ನಿಸ್ ಮುಖ್ಯ ತರಬೇತಿದಾರ ಎಂ.ಎಸ್.ಮಂಜುನಾಥ್ ಮಾತನಾಡಿ, ಆಲ್ ಇಂಡಿಯಾ ಟೆನ್ನಿಸ್ ಟೂರ್ನಮೆಂಟ್ ಆರಂಭವಾಗಿದೆ. 6 ದಿನಗಳ ಕಾಲ ನಡೆಯಲಿದೆ, ದೇಶದ ವಿವಿಧ ರಾಜ್ಯಗಳಿಂದ 16ರ ವಯೋಮಾನದ ಬಾಲಕರು, ಬಾಲಕಿಯರು ಸ್ಪರ್ಧೆಗಗಳಲ್ಲಿ ಉತ್ತಮ ಪ್ರದರ್ಶನ ನೀಡಿ, ಮುಂದಿನ ಹಂತಕ್ಕೆ ಆಯ್ಕೆಯಾಗಲಿದ್ದಾರೆ ಎಂದರು.
ಟೆನ್ನಿಸ್ ಸ್ಪರ್ಧಾರ್ಥಿಗಳು ಆಲ್ ಇಂಡಿಯಾ ಟೆನ್ನಿಸ್ ರ‍್ಯಾಂಕಿಂಗ್‌ಗೆ ಪಂದ್ಯಗಳಿಗೆ ಸೆಣಸಾಟ ನಡೆಸಲಿದ್ದು, ಗೆಲುವು ಸಾಧಿಸಿದವರು ರ‍್ಯಾಂಕಿಂಗ್ ಪಡೆದುಕೊಳ್ಳುತ್ತಾರೆ. ಮಹಾರಾಷ್ಟ್ರ, ಬಿಹಾರ್, ಆಂಧ್ರ ಪ್ರದೇಶ, ತಮಿಳುನಾಡು ರಾಜ್ಯಗಳಿಂದ ಆಗಮಿಸಿದ್ದು, ಕರ್ನಾಟಕ ರಾಜ್ಯದ ಸ್ಪರ್ಧಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದಾರೆ ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಪಿಇಟಿ ಉಪಾಧ್ಯಕ್ಷ ಶ್ರೀಧರ್, ಬ್ಯಾಡ್ಮಿಂಟನ್ ಆಕಾಡೆಮಿಯ ಅಧ್ಯಕ್ಷ ಅನಿಲ್ ಕುಮಾರ್, ಟೆನ್ನಿಸ್ ಅಕಾಡೆಮಿ ಖಜಾಂಚಿ ಗಗನ್ ರಮೇಶ್, ಉಪಾಧ್ಯಕ್ಷ ಡಾ.ಗೋಪಾಲಕೃಷ್ಣಗುಪ್ತ, ಕಾರ್ಯದರ್ಶಿ ಅಭಿಷೇಕ್, ಬಲ್ಲೇನಹಳ್ಳಿ ಮಂಜುನಾಥ್ ಮತ್ತಿತರರಿದ್ದರು.




