ವಿವಾದಾತ್ಮಕ ದಿ ಕೇರಳ ಸ್ಟೋರಿ ಸಿನಿಮಾದಲ್ಲಿ ʻಕೇರಳದಲ್ಲಿ 32,000 ಮಹಿಳೆಯರನ್ನು ಮೋಸದಿಂದ ಇಸ್ಲಾಂಗೆ ಮತಾಂತರ ಮಾಡಲಾಗಿದೆ ಮತ್ತು ಐಸಿಸ್ಗೆ ನೇಮಕ ಮಾಡಲಾಗಿದೆʼ ಎಂದು ಹೇಳಿರುವುದನ್ನು ಸುಪ್ರೀಂಕೋರ್ಟ್ ಪ್ರಶ್ನಿಸಿದೆ.
ಪಶ್ಚಿಮ ಬಂಗಾಳದಲ್ಲಿ ಸಿನಿಮಾ ಪ್ರದರ್ಶನದ ಮೇಲಿನ ನಿಷೇಧ ಮತ್ತು ತಮಿಳುನಾಡಿನಲ್ಲಿ ಪರೋಕ್ಷ ನಿಷೇಧದ ವಿರುದ್ಧ ‘ದಿ ಕೇರಳ ಸ್ಟೋರಿ’ ಸಿನಿಮಾ ನಿರ್ಮಾಪಕರು ಸಲ್ಲಿಸಿದ್ದ ಅರ್ಜಿಯನ್ನು ಗುರುವಾರ ಸುಪ್ರೀಂಕೋರ್ಟ್ ವಿಚಾರಣೆಗೆ ಕೈಗೆತ್ತಿಕೊಂಡಿತ್ತು.
#SupremeCourtOfIndia #TheKeralaStoryMovie #Disclaimer
‘No authentic data to back up the suggestion that the figure of converted people is 32000 or any other figure’ pic.twitter.com/wLKBrHvN7L— Live Law (@LiveLawIndia) May 18, 2023
“>
ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಪಿಎಸ್ ನರಸಿಂಹ ಮತ್ತು ಜೆಬಿ ಪರ್ಡಿವಾಲಾ ಅವರನ್ನು ಒಳಗೊಂಡ ನ್ಯಾಯಪೀಠವು ʼಈ ಸಿನಿಮಾದ ಕಥೆಯು ಕಲ್ಪನೆಯ ಆವೃತ್ತಿಯನ್ನು ಪ್ರತಿನಿಧಿಸುತ್ತದೆ ಎಂಬುದನ್ನು ಡಿಸ್ಕ್ಲೈಮರ್ನಲ್ಲಿ ಸ್ಪಷ್ಟಪಡಿಸಿʼ ಎಂದು ಸೂಚನೆ ನೀಡಿದೆ.
ʻಮತಾಂತರ ಮಾಡಲಾದ ಮಹಿಳೆಯರ ಸಂಖ್ಯೆಯು 32 ಸಾವಿರ ಎಂದು ಹೇಳಲು ಯಾವುದೇ ಅಧಿಕೃತ ದಾಖಲೆಗಳು ಲಭ್ಯವಿಲ್ಲ ಅಥವಾ ಬೇರೆ ಯಾವುದೇ ನಿಖರ ಅಂಕಿ ಅಂಶಗಳಿಲ್ಲ ಎಂಬುದನ್ನು ಮೇ 20ರಂದು ಸಂಜೆ 5 ಗಂಟೆಯ ಒಳಗಾಗಿ ಚಿತ್ರದ ಡಿಸ್ಕ್ಲೈಮರ್ನಲ್ಲಿ ಸ್ಪಷ್ಟಪಡಿಸಿʼ ಎಂದು ನಿರ್ಮಾಪಕರಿಗೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ.
ನಿಷೇಧಕ್ಕೆ ತಡೆ
‘ದಿ ಕೇರಳ ಸ್ಟೋರಿ’ ಸಿನಿಮಾ ಪ್ರದರ್ಶನಕ್ಕೆ ಪಶ್ಚಿಮ ಬಂಗಾಳ ಸರ್ಕಾರ ವಿಧಿಸಿದ್ದ ನಿಷೇಧಕ್ಕೆ ಸುಪ್ರೀಂಕೋರ್ಟ್ ತಡೆ ನೀಡಿದೆ. ʻಸಾರ್ವಜನಿಕರ ಅಸಹಿಷ್ಣುತೆಗೆ ಶಾಸನಬದ್ಧ ನಿಬಂಧನೆಗಳನ್ನು ಬಳಸಲಾಗದುʼ ಎಂದು ಹೇಳಿದ ಸರ್ವೋಚ್ಚ ನ್ಯಾಯಾಲಯವು ಮುಂದಿನ ವಿಚಾರಣೆಯನ್ನು ಜುಲೈ ತಿಂಗಳಿಗೆ ಮುಂದೂಡಿದೆ.
ʻಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದು ರಾಜ್ಯ ಸರ್ಕಾರದ ಕರ್ತವ್ಯವಾಗಿದೆʼ ಎಂದು ನ್ಯಾಯಪೀಠ ಹೇಳಿದೆ. ʻಚಿತ್ರ ಪ್ರದರ್ಶನವಾಗುತ್ತಿರುವ ಚಿತ್ರಮಂದಿರಗಳಲ್ಲಿ ಸಾಕಷ್ಟು ಭದ್ರತೆ ಒದಗಿಸಬೇಕು ಮತ್ತು ಪ್ರೇಕ್ಷಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಅಗತ್ಯವಾದ ವ್ಯವಸ್ಥೆಗಳನ್ನು ಮಾಡಬೇಕುʼ ಎಂದು ಪೀಠ ನಿರ್ದೇಶಿಸಿದೆ.




