ಉತ್ತರ ಕರ್ನಾಟಕದ ಅಭಿವೃದ್ಧಿ ಸೇರಿದಂತೆ ಕನ್ನಡಿಗರ ಸಮಗ್ರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕನ್ನಡ ಚಳವಳಿ ವಾಟಾಳ್ ಪಕ್ಷ ರಾಜ್ಯಾದ್ಯಂತ ಹಮ್ಮಿಕೊಂಡಿರುವ ಈಡುಗಾಯಿ ಒಡೆಯುವ ಚಳವಳಿಗೆ ಮಂಡ್ಯ ನಗರದ ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಪಕ್ಷದ ರಾಜ್ಯಾಧ್ಯಕ್ಷ ವಾಟಾಳ್ ನಾಗರಾಜು ಅವರು ಈಡುಗಾಯಿ ಒಡೆಯುವ ಮೂಲಕ ಚಾಲನೆ ನೀಡಿದರು.
ಈ ಸಂದರ್ಭ ವಾಟಾಳ್ ನಾಗರಾಜು ಅವರು ಮಾತನಾಡಿ, ಈ ಬಗ್ಗೆ ನಿರಂತರ ಒತ್ತಾಯ ಮಾಡುತ್ತಿದ್ದರೂ, ಬೆಳಗಾವಿಯಲ್ಲಿ ಅಧಿವೇಶನ ನಡೆದರೂ ಪ್ರಯೋಜನವಾಗಿಲ್ಲ. ೧೯೫೬ರಲ್ಲಿ ಕರ್ನಾಟಕ ಏಕೀಕರಣ ಸಂದರ್ಭದಿಂದಲೂ ಹೋರಾಟ ಮಾಡಲಾಗಿದೆ. ಆದರೂ ಅಂದಿನಿಂದ ಎಲ್ಲ ಬೇಡಿಕೆಗಳು ಬೇಡಿಕೆಗಳಾಗಿಯೇ ಉಳಿದಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಎಂಇಎಸ್ ರಾಜ್ಯದ ಗಡಿ ನಾಡಿಗೆ ಮಾರಕ. ಎಂಇಎಸ್ ನಿಷೇಧಕ್ಕೆ ಹಲವು ವರ್ಷಗಳಿಂದ ಕನ್ನಡಿಗರು, ಕನ್ನಡ ಪರ ಸಂಘಟನೆಗಳು ಹೋರಾಟ ಮಾಡುತ್ತಿವೆ. ಇಂದಿಗೂ ಅದನ್ನು ಯಾವುದೇ ಸರ್ಕಾರಗಳು ಈಡೇರಿಸಿಲ್ಲ. ಕಳಸಬಂಡೂರಿ, ಮೇಕೆದಾಟು ಜಾರಿಯಾಗಿಲ್ಲ, ರಾಜ್ಯದಲ್ಲಿ ಪರಭಾಷಿಗರ ಹಾವಳಿ ಎಲ್ಲೆಡೆ ಹೆಚ್ಚಾಗಿದೆ. ಪರಭಾಷಿಗರಿಂದ ಅಪರಾಧ ಕೃತ್ಯಗಳೂ ಹೆಚ್ಚಾಗಿವೆ. ಈ ಬಗ್ಗೆ ಸರ್ಕಾರ ಗಂಭೀರ ಚಿಂತನೆ ಮಾಡಬೇಕು ಎಂದು ಆಗ್ರಹಿಸಿದರು.
ಕರ್ನಾಟಕವು ತಮಿಳರು, ಗುಜರಾತಿಗಳು, ಮಾರ್ವಾಡಿಗಳ ಕೈಯ್ಯಲ್ಲಿದೆಯಾ? ಈ ನಾಡು ಸಂಸ್ಕೃತಿ ಜೊತೆಯಲ್ಲಿಯೇ ಹೋಗಬೇಕು. ಇಲ್ಲದಿದ್ದರೆ ಹೊರ ರಾಜ್ಯದಿಂದ ಬಂದಿರುವ ಪರಭಾಷಿಗರು ನಮ್ಮನ್ನು ಹೊರಹಾಕುತ್ತಾರೆ. ಬೆಳಗಾವಿಯಿಂದ ಚಾಮರಾಜನಗರ, ಮಂಗಳೂರಿನಿAದ ಕೋಲಾರದ ವರೆಗೆ ನಿರಂತರವಾಗಿ ಹೋರಾಡಬೇಕು.
ಮರಾಠಿಗರ ದಾಂಧಲೆ ಅತಿಯಾಗಿದೆ. ಮಂಗಳೂರು, ಉಡುಪಿ, ಕರಾವಳಿ ಪ್ರದೇಶವನ್ನು ಕಡೆಗಣಿಸಿದ್ದು, ಬಹಳ ಗಂಭೀರವಾಗಿ ಚಿಂತನೆ ಮಾಡಬೇಕು. ಕಾಸರಗೋಡು ಕರ್ನಾಟಕಕ್ಕೇ ಬರಬೇಕು. ಇದಕ್ಕಾಗಿ ಕನ್ನಡ ಚಳವಳಿ ವಾಟಾಳ್ ಪಕ್ಷ ನಿರಂತರ ಹೋರಾಟ ಮಾಡಲಿದೆ. ತಮಿಳುನಾಡಿಗೆ ಸೇರಿರುವ ಹೊಸೂರು ಹಾಗೂ ತಾಳವಾಡಿ ಕರ್ನಾಟಕಕ್ಕೆ ಸೇರಬೇಕು ಎಂದು ಗಡಿನಾಡು ಚಾಮರಾಜನಗರದ ಗಡಿಯಂಚಿನಲ್ಲಿ ಹೋರಾಟ ಮಾಡಲು ನಿರ್ಧರಿಸಿದ್ದೇವೆ ಎಂದರು.
ಈ ವಿಚಾರವಾಗಿ ೫೦ ವರ್ಷದ ಹಿಂದೆ ಹೋರಾಟ ಮಾಡಿದಾಗ ನನ್ನನ್ನು ಬಂಧನ ಮಾಡಿದ್ದರು. ಸಮಗ್ರ ಕರ್ನಾಟಕದಲ್ಲಿ ಹಿಂದಿಯನ್ನು ತೀವ್ರವಾಗಿ ವಿರೋಧಿಸುತ್ತೇವೆ. ಎಲ್ಲೂ ಹಿಂದಿ ಇರಬಾರದು, ಹಿಂದಿ ಹೇರಲೇಬಾರದು. ರಾಜ್ಯಪಾಲರು ಜಂಟಿ ಅಧಿವೇಶನದ ಭಾಷಣದಲ್ಲಿ ಮೂರು ಬಾರಿಯೂ ಹಿಂದಿಯಲ್ಲಿ ಮಾತನಾಡಿದ್ದಾರೆ. ಇದನ್ನು ಯಾವೊಬ್ಬ ಶಾಸಕರೂ ಖಂಡಿಸಿಲ್ಲ. ನಾನಿದ್ದಿದ್ದರೆ ಖಂಡಿತ ಅವಕಾಶ ಕೊಡುತ್ತಿರಲಿಲ್ಲ. ರಾಜ್ಯಪಾಲರನ್ನು ಕಳಕಳಿಯಿಂದ ಕೇಳುತ್ತೇನೆ ಮುಂದಿನ ಅಧಿವೇಶನದಲ್ಲಿ ಹಿಂದಿಯಲ್ಲಿ ಮಾತನಾಡಬಾರದು. ಯಾರದರೂ ಶಾಸಕರು, ವಿಧಾನ ಪರಿಷತ್ ಸದಸ್ಯರು, ಮಂತ್ರಿಗಳು ಹಿಂದಿ ಭಾಷಣವನ್ನು ವಿರೋಧಿಸಬೇಕು ಎಂದರು.
ವಾಟಾಳ್ ಪಕ್ಷ ಬೆಳಗಾವಿ ಉಳಿಸಬೇಕು, ಎಂಇಎಸ್ ನಿಷೇಧ ಮಾಡಬೇಕು, ಗಡಿನಾಡು ಬೆಳಗಾವಿ ಆಗಬೇಕು, ಕನ್ನಡಿಗರಿಗೆ ಉದ್ಯೋಗ ನೀಡಬೇಕು, ಗ್ರೇಟರ್ ಬೆಂಗಳೂರು ಬೇಡ, ಉತ್ತರ ಕರ್ನಾಟಕ, ಚಾಮರಾಜನಗರ, ಕೋಲಾರ ಅಭಿವೃದ್ಧಿಯಾಗಬೇಕು, ಮಹದಾಯಿ, ಕಳಸಾ ಬಂಡೂರು ಯೋಜನೆ, ಮೇಕೆದಾಟು ಯೋಜನೆಗಾಗಿ ನಿರಂತರ ಹೋರಾಟ ನಡೆಸಲಿದೆ ಎಂದು ಹೇಳಿದರು.
ಈ ಸಂದರ್ಭ ವಾಟಳ್ ಪಕ್ಷದ ಕಾರ್ಯಕರ್ತರಾದ ಪಾರ್ಥಸಾರಥಿ, ನಾರಾಯಣಸ್ವಾಮಿ, ಅಂಬುಜಮ್ಮ, ಅಂಜುಜಾಕ್ಷಿ, ಸ್ಪರ್ಶ, ಮುನಾವರ್, ಜಾಫರ್, ಮುಬಾರಕ್ ಪಾಷ ಸೇರಿದಂತೆ ಹಲವರು ಭಾಗವಹಿಸಿದ್ದರು




