ನೀನು ದೇವರ
ಪರ ವಕಾಲತ್ತು
ವಹಿಸಿದರೆ,
ನಾನು
ದೇವರ ಮುಂದೆ
ಕುಳಿತ ಭಿಕ್ಷುಕನ
ಪರ ವಹಿಸುತ್ತೇನೆ
ನೀನು ದೇವರ
ಬಳಿ ನ್ಯಾಯ, ನೀತಿ, ಧರ್ಮಗಳ
ರಕ್ಷಣೆಗಾಗಿ ಮೋರೆ ಇಟ್ಟರೆ
ನಾನು ಅನ್ಯಾಯ, ಅನೀತಿ, ಧರ್ಮಗಳ
ಆಪಾದನೆಗೊಳಗಾದವರಿಗಾಗಿ
ಮೋರೆ ಇಡುತ್ತೇನೆ
ನೀನು ದೇವರ
ಗುಡಿ ಗುಂಡಾರಗಳ ಕಟ್ಟಲು
ಯೋಜನೆ ರೂಪಿಸುತ್ತಿದ್ದೆ.
ನಾನು ದೇವರನ್ನು ಗುಡಿಯಿಂದ
ತಪ್ಪಿಸಿಕೊಳ್ಳಲು ಸಂಚು
ರೂಪಿಸುತ್ತೇನೆ.
ನೀನು ದೇವರನ್ನು
ನ್ಯಾಯಲಯದ ಕಟಕಟೆಯಲ್ಲಿ
ತಂದು ನಿಲ್ಲಿಸಿದರೆ
ನಾನು ದೇವರನ್ನೇ ನ್ಯಾಯಧೀಶನನ್ನಾಗಿ
ಮಾಡಿ ಅವನಲ್ಲಿ ನ್ಯಾಯಕ್ಕಾಗಿ
ಅಂಗಲಾಚುತ್ತೇನೆ.
ಇದರ ಮೇಲೂ
ನೀನು ನನ್ನ ದೇವ ವಿರೋಧಿ
ಎಂದು ಭಾವಿಸಿದರೆ
ನಾನು ಆ ನಿನ್ನ ದೇವರಿಗೆ
ವಿರೋಧಿಯಾಗಿಯೇ
ಇರಲು ಬಯಸುತ್ತೇನೆ.