ಮಂಡ್ಯ : ಅವಕಾಶವನ್ನು ಬಳಿಸಿಕೊಳ್ಳುವವರು ಅದೃಷ್ಟ ವಂತರು,ಆದರೆ ಅವಕಾಶವನ್ನು ಸೃಷ್ಟಿಸಿಕೊಳ್ಳುವವರು ಜ್ಞಾನಿಗಳು ಎಂದು ಕೆಂಗೇರಿ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ಶ್ರೀ ಶ್ರೀ ಡಾ.ನಿಶ್ಚಲಾನಂದನಾಥ ಸ್ವಾಮೀಜಿ ನುಡಿದರು.
ಮಂಡ್ಯ ನಗರದ ಕರ್ನಾಟಕ ಸಂಘದ ಕೆ.ವಿ. ಶಂಕರಗೌಡ ಶತಮಾನೋತ್ಸವ ಭವನದಲ್ಲಿ ವಿಶ್ವಮಾನವ ಸೇವಾ ಪ್ರತಿಷ್ಠಾನ,ಕಲ್ಲಹಳ್ಳಿ ಮತ್ತು ವಿಶ್ವೇಶ್ವರಯ್ಯ ಬಡಾವಣೆ ನಾಗರಿಕರ ಬಳಗ ಆಯೋಜಿಸಿದ್ದ ಭೂ ಸೇನಾ ಲೆಫ್ಟಿನೆಂಟ್ ವಿಶ್ವಾಸ್ ಬೋರೇಗೌಡ ಅವರ ಅಭಿನಂದನಾ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿ ಮಾತನಾಡಿದರು.
ನೂತನ ಭೂ ಸೇನಾ ಲೆಫ್ಟಿನೆಂಟ್ ಆಗಿರುವ ವಿಶ್ವಾಸ್ ಬೋರೇಗೌಡ ಅವರು, ರಾಷ್ಟ್ರವೇ ದೇವರು ಎಂಬ ತತ್ವವನ್ನು ಅಳವಡಿಸಿ ಕೊಂಡಿರುವುದು ಅನುಕರಣೀಯ. ವಿಶ್ವಾಸ್ ಬೋರೇ ಗೌಡ ಅವರು ಭಾರತೀಯ ಭೂ ಸೇನೆಯಲ್ಲಿ ಮುಂದುವರಿದು ಅತ್ಯುನ್ನತ ನಾಯಕತ್ವವನ್ನು ಅಲಂಕರಿಸಬೇಕು ಎಂದು ಹರಸಿದರು. ವಿಶ್ವಾಸ್ ಅವರಿಗೆ ಅಗ್ರ ಸಾಲಿನಲ್ಲಿ ನಿಲ್ಲುವ ಅವಕಾ ಶವು ದೈವ ಕರುಣೆಯ ಸೌಭಾಗ್ಯವಾಗಿದ್ದು, ತಂದೆ-ತಾಯಿಯ ಪೋಷಣೆ ಮತ್ತು ಹರಕೆಯೇ ಮೂಲ ಕಾರಣ ಎಂದು ತಿಳಿಸಿದರು.

ವಿಶ್ವಾಸ್ ಅವರು ಸೇವಾವಧಿಯ ನಂತರ ಆಡಳಿತ ಸೇವೆಗೆ ಮರಳುವ ಆಲೋಚನೆಯನ್ನು ಕೈಬಿಟ್ಟು ಸೇನೆಯಲ್ಲಿಯೇ ಮುಂದುವರಿಯುವಂತೆ ಮನವಿ ಮಾಡಿದರು.ಬುದ್ಧಿ ಸಾಮರ್ಥ್ಯವನ್ನು ಸೇನೆಯ ಕುಶಲತೆ ಹೆಚ್ಚಳಕ್ಕೆ, ಸಾವು- ನೋವುಗಳ ಇಳಿಕೆಗೆ ಮತ್ತು ಶಾಂತಿ ಸ್ಥಾಪನೆಗೆ ಬಳಸಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಜಿ.ಪಂ. ಸಿಇಒ ಕೆ. ಆರ್.ನಂದಿನಿ ಅವರು ಮಾತನಾಡಿ, ವಿಶ್ವಾಸ್ ಅವರು ತಂದೆ-ತಾಯಿಗೆ ಮಾತ್ರವಲ್ಲದೆ, ಇಡೀ ಮಂಡ್ಯ ಜಿಲ್ಲೆಯ ಜನರಲ್ಲಿ ಆತ್ಮವಿಶ್ವಾಸ ಮೂಡಿಸಿದ್ದಾರೆ.ಎಳೆಯ ವಯಸ್ಸಿನಲ್ಲಿಯೇ ಪ್ರಬುದ್ಧತೆಯನ್ನು ಮೈಗೂಡಿಸಿಕೊಂಡಿರುವುದು ಯುವಜನರಿಗೆ ಸ್ಫೂರ್ತಿದಾಯಕವಾಗಿದೆ ಎಂದು ಶ್ಲಾಘಿಸಿದರು. ವಯಸ್ಸು ವ್ಯಕ್ತಿಯ ಘನತೆ,ಗೌರವವನ್ನು ನಿರ್ಧರಿಸುವುದಿಲ್ಲ. ದೇಶ ಸೇವೆಗೆ ಸಮರ್ಪಣೆಗೆ ವಯಸ್ಸು ಅಡ್ಡಿಯಲ್ಲ ಎಂದು ಪ್ರತಿಪಾದಿಸಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ, ನಿವೃತ್ತ ಮೇಜರ್ ಅಶ್ವಥ್ ಕುಮಾರ್ ಮಾತನಾಡಿ,ಭಾರತೀಯ ಸೇನಾ ಪಡೆಯಲ್ಲಿ ಇಂಜಿನಿಯರ್,ವೈದ್ಯ ಸೇರಿದಂತೆ ಸೇರಿದಂತೆ ಸಾವಿರಾರು ಉದ್ಯೋಗ ಅವಕಾಶಗಳಿವೆ. ಹೆದ್ದಾರಿ ತಂತ್ರಜ್ಞಾನದಲ್ಲಿ ಪರಿಣಿತಿ ಪಡೆದು ಗಡಿ ರಸ್ತೆ ಸಂಘಟನೆಯಲ್ಲಿ ಸೇವೆ ಸಲ್ಲಿಸಿದ ತಮ್ಮ ಅನುಭವವನ್ನು ಹಂಚಿಕೊಂಡರು. ಸೇನಾ ಪಡೆಯಿಂದ ಹೊರಬರುವ ಯುವಕರು ಇನ್ನೂ ಇಪ್ಪತ್ತು ಇಪ್ಪತ್ತೈದು ವರ್ಷಗಳ ಕಾಲ ಸೇವೆ ಸಲ್ಲಿಸುವ ಶಕ್ತಿ, ಬದ್ಧತೆ, ಸಮಯಪಾಲನೆಯನ್ನು ಹೊಂದಿರುತ್ತಾರೆ. ಅವರನ್ನು ಸರಿಯಾಗಿ ಬಳಸಿಕೊಂಡರೆ ದೇಶಕ್ಕೆ ದೊಡ್ಡ ಕೊಡುಗೆ ನೀಡಬಲ್ಲರು ಎಂದು ಹೇಳಿದರು. ಸೈನಿಕರು ನಿವೇಶನಕ್ಕಾಗಿ, ನಿವೃತ್ತಿ ಭತ್ಯೆಯನ್ನು ಕೇಳುತ್ತಿಲ್ಲ. ಸಮಾಜ ನೀಡುವ ಗೌರವವೇ ದೊಡ್ಡ ತೃಪ್ತಿ ಎಂದು ಭಾವುಕರಾಗಿ ನುಡಿದರು.
ನಿರಂತರ ಕಲಿಕೆಯೇ ಇತರರಿಂದ ಭಿನ್ನವಾಗಿಸುತ್ತದೆಸನ್ಮಾನ ಸ್ವೀಕರಿಸಿ ಮಾತನಾಡಿದ ಭೂ ಸೇನಾ ಲೆಫ್ಟಿನೆಂಟ್ ವಿಶ್ವಾಸ್ ಬೋರೇಗೌಡ ಅಧಿಕಾರಿ ಮತ್ತು ಯೋಧರ ನಡುವಿನ ಮುಖ್ಯ ವ್ಯತ್ಯಾಸವು ತಿಳುವಳಿಕೆಯ ಮಟ್ಟದಲ್ಲಿದೆ. ಕಲಿಯುವವರು ಪಠ್ಯದ ಜ್ಞಾನದ ಜೊತೆಗೆ ಸಮಾಜ, ದೇಶ, ನೆಲದ ರಾಜಕೀಯ ಮತ್ತು ಆಡಳಿತದ ಕುರಿತು ವ್ಯಾಪಕ ಅರಿವು ಗಳಿಸಬೇಕು. ನಿರಂತರ ಕಲಿಕೆಯೇ ವ್ಯಕ್ತಿಯನ್ನು ಇತರರಿಂದ ಭಿನ್ನವಾಗಿಸುತ್ತದೆ ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಲೆಫ್ಟಿನೆಂಟ್ ವಿಶ್ವಾಸ್ ಅವರಿಗೆ ಗೌರವ ಸಮರ್ಪಣೆ ಮಾಡಲಾಯಿತು.ಶ್ವೇತ ಅವರು ಕಾರ್ಯಕ್ರಮ ನಿರೂಪಣೆ ಮಾಡಿದರು.
ಸಮಾರಂಭದಲ್ಲಿ ಜೀವಧಾರೆ ಟ್ರಸ್ಟ್ ಅಧ್ಯಕ್ಷ ನಟರಾಜು, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೆ. ಎನ್. ರಾಘವೇಂದ್ರ, ಪತ್ರಕರ್ತರಾದ ಕೆ.ಸಿ. ಮಂಜುನಾಥ್, ಎನ್.ನಾಗೇಶ್, ಶ್ರೀನಿವಾಸ್ ಬೆಳ್ಳೂರು, ಮೋಹನ್ ಕುಮಾರ್, ನಾಗಮಂಗಲ ಮಂಜುನಾಥ್, ಕೆ.ಸಿ. ರವೀಂದ್ರ, ಲೆಫ್ಟಿನೆಂಟ್ ವಿಶ್ವಾಸ್ ಬೋರೇಗೌಡ ಅವರ ತಂದೆ ಕೆ.ಆರ್. ಬೋರೇಗೌಡ, ತಾಯಿ ರಮ್ಯಾ ಸೇರಿದಂತೆ ಇತರರು ಹಾಜರಿದ್ದರು.




