ಮೂರು ಪಾರ್ಟಿಗಳ ದೊಡ್ಡ ದೊಡ್ಡ ನಾಯಕರೇ ಭಾಗಿಯಾಗಿರುವ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಹಗರಣದಲ್ಲಿ ಎಲ್ಲಾ ಪಕ್ಷಗಳು ಫಲಾನುಭವಿಗಳೇ, ಸಾರ್ವಜನಿಕರು ಮಾತನಾಡಿಕೊಳ್ಳುತ್ತಿರುವ ಪ್ರಕಾರ ಇತ್ತೀಚಿಗೆ ನಡೆದ ಎಂ.ಎಲ್.ಸಿ ಚುನಾವಣೆ ಸೋತ ಕಾಂಗ್ರೆಸ್ ನಾಯಕನ ಹೆಂಡತಿ ಹೆಸರಿನಲ್ಲಿ 65 ಸೈಟುಗಳಿವೆಯಂತೆ, ಮತ್ತೊಬ್ಬ ಪ್ರಭಾವಿ ಜೆಡಿಎಸ್ ನಾಯಕರ ಹೆಂಡತಿ ಹೆಸರಿನಲ್ಲಿ 110 ಸೈಟುಗಳಿವೆಯಂತೆ ಇನ್ನೊಬ್ಬ ಪಕ್ಷದಿಂದ ಪಕ್ಷಕ್ಕೆ ಹಾರುವ ಬಿಜೆಪಿ ನಾಯಕರ ಹೆಂಡತಿ ಹೆಸರಿನಲ್ಲಿ 15 ಸೈಟುಗಳಿವೆಯಂತೆ.
ನುಡಿಕರ್ನಾಟಕ.ಕಾಂ ತಂಡ ಹಗರಣದ ಮೂಲ ಹುಡುಕಿ ಹೊರಟಾಗ ತಿಳಿದುಬಂದ ವಿಷಯವೆಂದರೆ ಪ್ರಭಾವಿ ರಾಜಕೀಯ ನಾಯಕರು ಎರಡು ವಿಧಗಳಲ್ಲಿ ಮೂಡಾದಲ್ಲಿ ಹಗರಣ ಮಾಡಿರುವುದು ಕಂಡು ಬರುತ್ತಿದೆ.
ಮೊದಲನೇಯದಾಗಿ ಲ್ಯಾಂಡ್ ಆಕ್ವಿಜಿಷನ್ ಕಾಯ್ದೆಯಲ್ಲಿ ಒಂದು ಕಲಂ ಇದ್ದು ಅದರ ಪ್ರಕಾರ ರೈಲ್ವೆ, ಕಾರ್ಖಾನೆ, ಲೇಔಟ್, ಪ್ರಾಜೆಕ್ಟ್, ರಸ್ತೆಗೆ ಭೂಮಿಯನ್ನು ವಶಪಡಿಸಿಕೊಂಡಾಗ ಭೂಮಿ ಕಳೆದುಕೊಂಡ ಆರ್.ಟಿ.ಸಿ ವ್ಯಕ್ತಿಗೆ ಅವನು ಸರ್ಕಾರ ಕೊಟ್ಟ ಪರಿಹಾರ ಹಣದಲ್ಲಿ ಬೇರೆ ಕಡೆ ಜಮೀನು ಕೊಂಡುಕೊಂಡರೆ ಆತನಿಗೆ ಆಸ್ತಿ ನೋಂದಣಿ ಮಾಡಲು ಆಸ್ತಿ ತೆರಿಗೆ ಫ್ರಿ ಇದೆ ಮತ್ತು ಅದೇ ತರಹ ಭೂಮಿ ಕಳೆದುಕೊಂಡವರಿಗೆ ಸರ್ಕಾರ ಅಭಿವೃದ್ಧಿಪಡಿಸಿದ ಬಡಾವಣೆಗಳಲ್ಲಿ ಅದ್ಯತೆಯಲ್ಲಿ ಸೈಟು ಕೊಡಲು ಅವಕಾಶವಿದೆ. ಇದನ್ನು ದುರುಪಯೋಗ ಮಾಡಿಕೊಳ್ಳುವ ರಾಜಕಾರಣಿಗಳು ತಮ್ಮ ಭೂಮಿ ಯಾವ ಯಾವುದೋ ಯೋಜನೆಗೆ ಸರ್ಕಾರ ಭೂಮಿ ಸ್ವಾಧೀನಕ್ಕೆ ಪಡೆದಿದೆ ಎನ್ನುವಂತೆ ಕಾಗದ ಪತ್ರ ಸೃಷ್ಟಿ ಮಾಡಿ ಸೈಟು ಪಡೆಯುತ್ತಾರೆ.
ಅದೇ ರೀತಿ ಎಂ.ಎಲ್.ಎ, ಎಂ.ಎಲ್.ಸಿಗಳು ಪ್ರಾಧಿಕಾರದಲ್ಲಿ ಸದಸ್ಯರಾಗಿರುವುದರಿಂದ ಖಾಸಗಿ ಡೆವಲಪರ್ ಬಡಾವಣೆ ಅಭಿವೃದ್ಧಿ ಮಾಡಲು ಮುಂದಾದಾಗ ಅದಕ್ಕೆ ಅನುಮತಿ ನೀಡಲು ಈ ಪ್ರಭಾವಿಗಳು ತಮ್ಮ ಹೆಂಡತಿ ಮಕ್ಕಳು ಸ್ನೇಹಿತರ ಹೆಸರಿಗೆ ಒಂದು ಎರಡು ಸೈಟುಗಳನ್ನು ಉಚಿತವಾಗಿ ಬರೆಸಿಕೊಂಡು ಅನುಮತಿ ನೀಡುತ್ತಾರೆ.
ಹಾಗಾಗಿ ಹೆಸರು ಹೇಳಲು ಇಚ್ಚಿಸದ ಪ್ರಾಧಿಕಾರದ ಅಧಿಕಾರಿ ಒಬ್ಬರ ಪ್ರಕಾರ ಇದರಲ್ಲಿ ಎಲ್ಲಾ ಪಕ್ಷದವರು ಇರುವುದರಿಂದ, ಇದನ್ನು ಎಲ್ಲರೂ ಸೇರಿ ಬಹಳ ಬೇಗ ಮುಚ್ಚಿ ಹಾಕಿ ಬಿಡುತ್ತಾರೆ ಎಂದು ಅಭಿಪ್ರಾಯ ಪಡುತ್ತಾರೆ.




