Friday, November 20, 2026

ಪ್ರಾಯೋಗಿಕ ಆವೃತ್ತಿ

ಸಕ್ಕರೆ ಜಿಲ್ಲೆ ‘ಮಂಡ್ಯ’ಕ್ಕೆ ದೊರೆತ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಆತಿಥ್ಯ


  • ಒಂಬತ್ತು ಜಿಲ್ಲೆಗಳ ಪೈಕಿ ಮಂಡ್ಯಕ್ಕೆ ಒಲಿದ ಸಮ್ಮೇಳಾನಾತಿಥ್ಯ 

  • ಕಸಾಪ ಅಧ್ಯಕ್ಷ ಮಹೇಶ ಜೋಶಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನಿರ್ಧಾರ

     

86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಇಂದು ಹಾವೇರಿಯಲ್ಲಿ ಸಮಾರೋಪಗೊಂಡಿದೆ. ಮುಂದಿನ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಕ್ಕರೆ ಜಿಲ್ಲೆ ಮಂಡ್ಯವು ಆತಿಥ್ಯವಹಿಸಲಿದೆ.

ಕನ್ನಡ ಸಾಹಿತ್ಯ ಪರಿಷತ್‌ (ಕಸಾಪ) ಅಧ್ಯಕ್ಷ ಮಹೇಶ ಜೋಶಿ ಅಧ್ಯಕ್ಷತೆಯಲ್ಲಿ ಭಾನುವಾರ ಬೆಳಗ್ಗೆ ನಡೆದ  ಕಾರ್ಯಕಾರಿಣಿ ಸಭೆಯಲ್ಲಿ ಒಟ್ಟು ಒಂಭತ್ತು ಜಿಲ್ಲೆಯವರು ತಮ್ಮ ಜಿಲ್ಲೆಯಲ್ಲಿ ಮುಂದಿನ ಸಮ್ಮೇಳನ ನಡೆಸುವಂತೆ ಒತ್ತಡ ಹಾಕಿದ್ದರು.

ಹೀಗಾಗಿ, ಮುಂದಿನ ಸಮ್ಮೇಳನವನ್ನು ಎಲ್ಲಿ ನಡೆಸಬೇಕೆಂಬುದನ್ನು ನಿರ್ಧರಿಸಲು ಮತ ಚಲಾವಣೆ ನಡೆಸಲಾಯಿತು. ಈ ಪೈಕಿ ಅತೀ ಹೆಚ್ಚು ಮತಗಳು, ಅಂದರೆ 17 ಮತಗಳನ್ನು ಪಡೆಯುವ ಮೂಲಕ 87ನೇ ಸಾಹಿತ್ಯ ಸಮ್ಮೇಳನಾಥಿತ್ಯಕ್ಕೆ ಮಂಡ್ಯ ಆಯ್ಕೆಯಾಗಿದೆ.

ಸಭೆಯ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಮಹೇಶ ಜೋಶಿ, “ಸಭೆಯಲ್ಲಿ ಒಟ್ಟು 46 ಮತದಾರರು ತಮ್ಮ ಮತ ಚಲಾವಣೆ ಮಾಡಿದ್ದರು. ಈ ಪೈಕಿ 17 ಮತಗಳು ಮಂಡ್ಯ ಜಿಲ್ಲೆಗೆ ಬಂದಿದ್ದು, ಬಳ್ಳಾರಿ ಜಿಲ್ಲೆಗೆ 16 ಮತಗಳು ಬಂದವು. ಅತಿ ಹೆಚ್ಚು ಮತ ಪಡೆದ ಮಂಡ್ಯ ಜಿಲ್ಲೆಯಲ್ಲಿ ಮುಂದಿನ ಸಮ್ಮೇಳನ ನಡೆಸಲು ನಿರ್ಧರಿಸಲಾಗಿದೆ” ಎಂದು ಘೋಷಿಸಿದರು.

29 ವರ್ಷಗಳ ನಂತರ ಆತಿಥ್ಯಕ್ಕೆ ಆಯ್ಕೆಯಾದ ಮಂಡ್ಯ 

ಮಂಡ್ಯದಲ್ಲಿ ಕಳೆದ ಬಾರಿ, ಅಂದರೆ, 1994ರಲ್ಲಿ 63ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ಸಾಹಿತಿ ಚದುರಂಗ ಅವರ ಅಧ್ಯಕ್ಷತೆಯಲ್ಲಿ ನಡೆದಿತ್ತು. ಅದಕ್ಕೆ ಹಿಂದೆ 1974ರಲ್ಲಿ ಜಯದೇವಿ ತಾಯಿ ಲಿಗಾಡೆ ಅವರ ಅಧ್ಯಕ್ಷತೆಯಲ್ಲಿ ಮಂಡ್ಯದಲ್ಲಿ 48ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನವು ಜರುಗಿತ್ತು. ಅಂದರೆ ಈಗ ಬರೋಬರಿ 29 ವರ್ಷಗಳ ನಂತರ ಮಂಡ್ಯಕ್ಕೆ ಅಖಿಲ ಭಾರತ ಸಮ್ಮೇಳನವನ್ನು ಸಂಘಟಿಸುವ ಅವಕಾಶ ದೊರೆತಿರುವುದು ಜಿಲ್ಲೆಯ ಸಾಹಿತಿಗಳು ಹಾಗೂ ಸಾಹಿತ್ಯಾಭಿಮಾನಿಗಳಿಗೆ ಸಂಭ್ರಮವನ್ನು ತಂದು ಕೊಟ್ಟಿದೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ