ಮಂಡ್ಯ ಜಿಲ್ಲೆಯಲ್ಲಿ ಅಷ್ಟೇನೂ ಭದ್ರ ನೆಲೆ ಇಲ್ಲದ ಬಿಜೆಪಿ ಪಕ್ಷಕ್ಕೆ ನನ್ನ ಬೆಂಬಲ ಎಂದು ಸಂಸದೆ ಸುಮಲತಾ ಅಂಬರೀಶ್ ಘೋಷಣೆ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷ ಸೇರಲು ನಾಲ್ಕು ವರ್ಷಗಳವರೆಗೂ ಹಂಬಲಿಸಿ ಕಾಂಗ್ರೆಸ್ ವರಿಷ್ಠರ ಮನೆ ಕದ ತಟ್ಟಿದರೂ ತೆರೆಯದ ಕಾರಣ ಅಂತಿಮವಾಗಿ ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವಕ್ಕೆ ಜೈ ಅಂದು ಅವರು ಮಂಡ್ಯಕ್ಕೆ ಭೇಟಿ ನೀಡುವ ಎರಡು ದಿನ ಮುಂಚೆ ಬಿಜೆಪಿ ಮನೆ ಸೇರಿದ್ದಾರೆ.
ಗೆಲ್ಲಿಸಿದ್ದು ಕಾಂಗ್ರೆಸ್
2019ರ ಲೋಕಸಭಾ ಚುನಾವಣೆಯಲ್ಲಿ ಸ್ವಾಭಿಮಾನಿ ಎಂದೆಲ್ಲ ಭಾವನಾತ್ಮಕವಾಗಿ ಮಾತನಾಡಿ ಕಣ್ಣೀರು ಸುರಿಸಿದರೂ, ಸೆರಗೊಡ್ಡಿ ಮತ ಭಿಕ್ಷೆ ಬೇಡಿದರೂ, ದರ್ಶನ್- ಯಶ್ ಜೋಡೆತ್ತುಗಳಾಗಿ ಸುಮಲತ ಪರ ಪ್ರಚಾರ ಮಾಡಿದರೂ, ಅಂತಿಮವಾಗಿ ದೊಡ್ಡ ಬೆಂಬಲವನ್ನು ಒಳಗೊಳಗೆ ನೀಡಿ ಪಕ್ಷೇತರ ಅಭ್ಯರ್ಥಿಯಾಗಿದ್ದ ಸುಮಲತಾ ಅಂಬರೀಶ್ ಅವರನ್ನು ಗೆಲ್ಲಿಸಿದ್ದು ಜಿಲ್ಲಾ ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರು ಎಂಬುದು ನೂರಕ್ಕೆ ನೂರರಷ್ಟು ಸತ್ಯ.
ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಆಗಿನ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಅವರ ಮಗ ನಿಖಿಲ್ ಕುಮಾರಸ್ವಾಮಿ ಎದುರು ಸುಮಲತಾ ಗೆಲ್ಲುವುದಕ್ಕೆ ಜಿಲ್ಲಾ ಕಾಂಗ್ರೆಸ್ ನಾಯಕರು ಮತ್ತು ಎಚ್.ಡಿ.ಕುಮಾರಸ್ವಾಮಿ ಮಧ್ಯೆ ಇದ್ದ ನಿಗಿ ನಿಗಿ ದ್ವೇಷವೇ ಕಾರಣ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಜಿಲ್ಲೆಯ ಎಲ್ಲಾ ಏಳು ಕ್ಷೇತ್ರಗಳಲ್ಲಿ ಮಕಾಡೆ ಮಲಗಿಸಿ ಜೆಡಿಎಸ್ ಅಭ್ಯರ್ಥಿಗಳು ಗೆದ್ದಿದ್ದರು.
ಅದರಲ್ಲೂ ಜಿಲ್ಲೆಯ ಪ್ರಭಾವಿ ನಾಯಕರಾದ ಎನ್.ಚಲುವರಾಯಸ್ವಾಮಿ, ಪಿ.ಎಂ. ನರೇಂದ್ರಸ್ವಾಮಿ, ರಮೇಶ್ ಬಾಬು ಬಂಡಿಸಿದ್ದೇಗೌಡ, ಕೆ.ಬಿ.ಚಂದ್ರಶೇಖರ್ ಮೊದಲಾದ ನಾಯಕರಿಗೆ ಎಚ್.ಡಿ.ಕುಮಾರಸ್ವಾಮಿಯವರ ಬಗ್ಗೆ ಇದ್ದ ದ್ವೇಷವೇ ಅವರ ಮಗ ನಿಖಿಲ್ ಕುಮಾರಸ್ವಾಮಿ ಸೋಲಲು ನೇರ ಕಾರಣ. ಬಿಜೆಪಿ ಮತ್ತು ರೈತಸಂಘ ಸುಮಲತಾ ಅಂಬರೀಶ್ ಪರ ಇದ್ದರೂ ಸಹ, ಕಾಂಗ್ರೆಸ್ ಪಕ್ಷದ ನಾಯಕರಿಂದಲೇ ನನ್ನ ಗೆಲುವು ಸಾಧ್ಯವಾಯಿತು ಎಂಬುದು ಸುಮಲತಾರಿಗೆ ಸ್ಪಷ್ಟವಾಗಿಯೇ ತಿಳಿದಿತ್ತು.
ಕಾಂಗ್ರೆಸ್ ಪಕ್ಷದ ಪರ ನಿಲ್ಲಲೇ ಇಲ್ಲ
ಆದರೂ ಸುಮಲತಾ ಅಂಬರೀಶ್ ಕಳೆದ ನಾಲ್ಕು ವರ್ಷಗಳಲ್ಲಿ ಕಾಂಗ್ರೆಸ್ ಪಕ್ಷದ ಪರ ನಿಲ್ಲಲೇ ಇಲ್ಲ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಸರ್ಕಾರದಲ್ಲಿ ರೈತ ವಿರೋಧಿ ಕಾಯ್ದೆಗಳು ಜಾರಿಯಾದರೂ ಕಾಂಗ್ರೆಸ್ ಪಕ್ಷದ ಪರ ನಿಂತು ವಿರೋಧಿಸಲೇ ಇಲ್ಲ. ಬಿಜೆಪಿ ನಾಯಕರ ಜೊತೆ ವಿಶ್ವಾಸದಿಂದ ಇದ್ದ ಕಾರಣ, ಜಿಲ್ಲಾ ಕಾಂಗ್ರೆಸ್ ನಾಯಕರಿಗೆ ಸುಮಲತಾ ಅಂಬರೀಶ್ ಅಪಥ್ಯವಾಗಿ, ಅವರೊಬ್ಬ ಅವಕಾಶವಾದಿ ರಾಜಕಾರಣಿ ಎಂದು ತಿಳಿದಿತ್ತು. ಅದಕ್ಕಾಗಿ ಅವರು ಸುಮಲತಾ ಅಂಬರೀಶ್ ಅವರಿಂದ ಅಂತರ ಕಾಯ್ದುಕೊಂಡು, ಕೊನೆಗೆ ಅವರಿಂದ ಕಾಂಗ್ರೆಸ್ ಪಕ್ಷಕ್ಕೆ ಯಾವುದೇ ಪ್ರಯೋಜನ ಇಲ್ಲ ಎಂಬುದನ್ನು ಅರಿತುಕೊಂಡು ದೊಡ್ಡ ಮಟ್ಟದಲ್ಲಿಯೇ ಕಾಂಗ್ರೆಸ್ ಸೇರ್ಪಡೆಗೆ ವಿರೋಧ ವ್ಯಕ್ತಪಡಿಸಿದರು.
ಸುಮಲತಾ ಅಂಬರೀಶ್ ಅವರು ಹಲವು ಬಾರಿ ರಾಜ್ಯ ಕಾಂಗ್ರೆಸ್ ನಾಯಕರ ಮನೆಯ ಕದ ಕಟ್ಟಿದರೂ ಕೂಡಾ ಅವರು ತೆರೆಯಲೇ ಇಲ್ಲ. ಇದಕ್ಕೆ ಅತ್ತ ಜಿಲ್ಲೆಯಲ್ಲಿ ಪ್ರಬಲರಾಗಿರುವ ಕಾಂಗ್ರೆಸ್ ನಾಯಕರೇ ಸುಮಲತಾ ಅಂಬರೀಶ್ ಸೇರ್ಪಡೆ ಬಗ್ಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಲ್ಲದೆ, ಅವರಿಂದ ಪಕ್ಷಕ್ಕೆ ಅಂತಹ ಪ್ರಯೋಜನವೂ ಆಗುವುದಿಲ್ಲ ಎಂಬುದನ್ನು ಕೇಂದ್ರ ಮತ್ತು ರಾಜ್ಯ ಕಾಂಗ್ರೆಸ್ ವರಿಷ್ಠರಿಗೆ ಮನವರಿಕೆ ಮಾಡಿಕೊಟ್ಟ ಕಾರಣ ಅವರು ಕೂಡ ಸುಮಲತಾ ಅವರನ್ನು ಸೇರ್ಪಡೆ ಬಗ್ಗೆ ಉತ್ಸಾಹ ತೋರಲಿಲ್ಲ. ಹಾಗಾಗಿ ಅಂತಿಮವಾಗಿ ಬೇರೆ ಯಾವುದೇ ಆಯ್ಕೆ ಇಲ್ಲದೆ ಬಿಜೆಪಿ ಪರ ನಿಲ್ಲುವುದಾಗಿ ಸುಮಲತಾ ಘೋಷಣೆ ಮಾಡಿದ್ದಾರೆ.
ಕಾಂಗ್ರೆಸ್ ನಾಯಕರ ಮೌನ
ಸುಮಲತಾ ಅಂಬರೀಶ್ ಬಿಜೆಪಿ ಪಕ್ಷಕ್ಕೆ ಸಂಪೂರ್ಣ ಬೆಂಬಲ ಎಂದರೂ ಜಿಲ್ಲಾ ಕಾಂಗ್ರೆಸ್ ನಾಯಕರು ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡದೆ ಮೌನವಾಗಿದ್ದಾರೆ. ಸುಮಲತಾರವರು ಇಂತಹ ಅವಕಾಶವಾದಿ ಎಂಬುದು ಗೊತ್ತಿದ್ದರಿಂದಲೇ ಕಾಂಗ್ರೆಸ್ ನಾಯಕರು ಯಾವುದೇ ಮಾತುಗಳನ್ನು ಆಡುತ್ತಿಲ್ಲ. ಬಿಜೆಪಿಗೆ ಬೆಂಬಲ ನೀಡುವ ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ನಾಯಕರಿಂದ ಗೆಲುವು ಸಾಧಿಸಿದ ನೀವು ಈಗ ಅವರಿಗೆ ಕೈ ಕೊಟ್ಟು ಅನ್ಯಾಯ ಮಾಡಿದ್ದೀರಾ ಎಂಬ ಪ್ರಶ್ನೆಗೆ ಉತ್ತರಿಸಿದ್ದ ಸುಮಲತಾ ಅವರು, ನನ್ನ ಪತಿ ಅಂಬರೀಶ್ ಅವರನ್ನು ಹೇಳದೆ ಕೇಳದೆ ಸಚಿವ ಸಂಪುಟದಿಂದ ಕೈ ಬಿಟ್ಟಾಗ ಕಾಂಗ್ರೆಸ್ ನಾಯಕರಿಗೆ ಅನ್ಯಾಯವಾಗಿ ಕಾಣಲಿಲ್ಲವೇ ಎಂದು ಕೇಳಿದ್ದಲ್ಲದೆ ಕಾಂಗ್ರೆಸ್ ಪಕ್ಷವೇ ಅಂಬರೀಶ್ ಅವರಿಗೆ ಅನ್ಯಾಯ ಮಾಡಿದೆ ಎಂದು ಹೇಳಿದ್ದರು.
ಹೀಗೆ ಕಾಂಗ್ರೆಸ್ ಅಂಬರೀಶ್ ಅವರಿಗೆ ಅನ್ಯಾಯ ಮಾಡಿದ್ದರೂ, ತಾವು ಗೆಲ್ಲಲು ಅದೇ ಜಿಲ್ಲಾ ಕಾಂಗ್ರೆಸ್ ನಾಯಕರ ಸಹಾಯವನ್ನೇಕೆ ಬಳಸಿಕೊಂಡರು. ಕಳೆದ ಲೋಕಸಭಾ ಚುನಾವಣೆಯಲ್ಲಿಯೇ ನನ್ನ ಪತಿ ಅಂಬರೀಶ್ ಅವರಿಗೆ ಕಾಂಗ್ರೆಸ್ ಅನ್ಯಾಯ ಮಾಡಿದೆ. ಹಾಗಾಗಿ ನನಗೆ ಕಾಂಗ್ರೆಸ್ ನಾಯಕರ ಸಹಕಾರ, ಸಹಾಯ ಬೇಕಾಗಿಲ್ಲ ಎಂದು ನಿರಾಕರಿಸ ಬೇಕಾಗಿತ್ತಲ್ಲವೇ? ಈ ಪ್ರಶ್ನೆಗೆ ಸುಮಲತಾ ಅಂಬರೀಶ್ ಅವರೇ ಉತ್ತರಿಸಬೇಕು. ಇಂತಹ ಇಬ್ಬಗೆಯ ಮಾತುಗಳಿಂದಲೇ ಸುಮಲತಾ ಅಂಬರೀಶ್ ತಾವೆಂತಹ ಅವಕಾಶವಾದಿ ರಾಜಕಾರಣಿ ಎಂಬುದನ್ನು ಕಳೆದ ನಾಲ್ಕು ವರ್ಷಗಳಲ್ಲಿ ಕಾಂಗ್ರೆಸ್ ನಾಯಕರಿಗೆ ತೋರಿಸಿ ಕೊಟ್ಟಿದ್ದರು. ಹಾಗಾಗಿ ಅವರು ಯಾರೂ ಕೂಡ ಸುಮಲತಾ ಅವರನ್ನು ಸೇರಿಸಿಕೊಳ್ಳಲು ಒಪ್ಪಲಿಲ್ಲ.ಆ ಕಾರಣ ಅಂತಿಮವಾಗಿ ಅವರು ಬಿಜೆಪಿ ಪಕ್ಷವನ್ನು ಅಪ್ಪಿಕೊಳ್ಳಬೇಕಾಯಿತು.




