ಕಳೆದ ವಾರ ಸುರಿದ ಭಾರೀ ಮಳೆಯಿಂದ ಹಾನಿಯಾಗಿರುವ ಇತಿಹಾಸ ಪ್ರಸಿದ್ಧ ಕೆರೆತೊಣ್ಣೂರು ಕೆರೆ ಪರಿಶೀಲಿಸಿ ವರದಿ ಸಲ್ಲಿಸುವಂತೆ ಹಾಗೂ ತುರ್ತು ದುರಸ್ತಿಗೆ ಆದ್ಯತೆ ನೀಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಸೂಚಿಸಿದರು.
ಮಂಡ್ಯ ನಗರದ ಜಿ.ಪಂ. ಕಾವೇರಿ ಸಭಾಂಗಣದಲ್ಲಿ ಆಯೋಜನೆಗೊಂಡಿದ್ದ ನಾಡಪ್ರಭು ಕೆಂಪೇಗೌಡ ಪ್ರತಿಮೆ ಅನಾವರಣ ಸಂಬಂಧ ಪವಿತ್ರ ಮಣ್ಣು ಸಂಗ್ರಹ ಪೂರ್ವಭಾವಿ ಸಭೆಯಲ್ಲಿ ಶಾಸಕ ಸಿ.ಎಸ್.ಪುಟ್ಟರಾಜು ಅವರು ತೊಣ್ಣೂರು ಕೆರೆ ಹಾನಿಯ ಬಗ್ಗೆ ಸಚಿವ ಕೆ.ಗೋಪಾಲಯ್ಯ ಅವರಿಗೆ ವಿವರಿಸಿದರು.
ಕೆರೆಯಲ್ಲಿ ಸಾಮರ್ಥ್ಯಕ್ಕಿಂತ ಅಧಿಕ ಪ್ರಮಾಣದ ನೀರು ಶೇಖರಣೆಯಾಗಿ ಅಪಾಯದ ಮಟ್ಟ ಮೀರಿದ ಸಂದರ್ಭದಲ್ಲಿ ನಿವೃತ್ತ ತಾಂತ್ರಿಕ ಅಧಿಕಾರಿಯ ಸಲಹೆಯಂತೆ ಕೆರೆ ಏರಿ ಒಡೆಯಲು ಕಾರಣರಾದ ಅಧಿಕಾರಿಗಳ ಮೇಲೆ ಕ್ರಮ ವಹಿಸಬೇಕು. ಕೆರೆ ಹಾನಿಯನ್ನು ತುರ್ತು ಆದ್ಯತೆ ಮೇಲೆ ದುರಸ್ತಿಪಡಿಸಬೇಕು. ಈ ಸಂಬಂಧ ತಮ್ಮ ಅಧ್ಯಕ್ಷತೆಯಲ್ಲಿ ಕೂಡಲೇ ಕಾವೇರಿ ನೀರಾವರಿ ಇಲಾಖೆ ಅಧಿಕಾರಿಗಳ ಸಭೆ ಕರೆಯಬೇಕು. ಕೆರೆ ಏರಿ ಒಡೆದು ರೈತರು ಹಾಗೂ ಸಾರ್ವಜನಿಕರಲ್ಲಿ ಆತಂಕ ಮೂಡಿಸಲು ಕಾರಣರಾದವರ ಮೇಲೆ ಕ್ರಮ ವಹಿಸಬೇಕೆಂದು ಶಾಸಕ ಸಿ.ಎಸ್.ಪುಟ್ಟರಾಜು ಒತ್ತಾಯಿಸಿದರು.
ಶಾಸಕರ ಒತ್ತಾಯಕ್ಕೆ ಸ್ಪಂದಿಸಿದ ಉಸ್ತುವಾರಿ ಸಚಿವ ಗೋಪಾಲಯ್ಯ, ನಾಳೆ ಮಧ್ಯಾಹ್ನ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಕೆರೆ ಪರಿಶೀಲನೆಗೆ ತೆರಳುವಂತೆ ಡಿಸಿಗೆ ಸೂಚಿಸಿದರು.




