Friday, June 21, 2024

ಪ್ರಾಯೋಗಿಕ ಆವೃತ್ತಿ

ಪ್ರವಾಸಿ ಸ್ಥಳಗಳ ಅಭಿವೃದ್ಧಿ, ನೀರಾವರಿ ಯೋಜನೆಗೆ ಒತ್ತು: ಸ್ಟಾರ್ ಚಂದ್ರು

ಬೆಲೆ ಏರಿಕೆ ಮತ್ತು ನಿರುದ್ಯೋಗ ದೇಶದ ಜನತೆಯನ್ನು ತೀವ್ರವಾಗಿ ಕಾಡುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕೆಂದರೆ ಕೃಷಿ ಆಧಾರಿತ ಕೈಗಾರಿಕೆಗಳು, ಗುಡಿ ಕೈಗಾರಿಕೆಗಳ ಸ್ಥಾಪನೆಗೆ ಆದ್ಯತೆ ನೀಡಬೇಕು. ಸ್ಥಳೀಯವಾಗಿ ಉದ್ಯೋಗ ಸೃಷ್ಟಿಸಿ ಗ್ರಾಮೀಣ ಜನರ ಆರ್ಥಿಕ ಪರಿಸ್ಥಿತಿ ಸುಧಾರಿಸಬೇಕೆಂಬ ಕನಸು ಕಟ್ಟಿಕೊಂಡು ರಾಜಕೀಯಕ್ಕೆ ಬಂದಿದ್ದೇನೆ ಎಂದು ಮಂಡ್ಯ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡ (ಸ್ಟಾರ್ ಚಂದ್ರು) ಹೇಳಿದರು.

ಕೆ.ಆರ್.ನಗರ ವಿಧಾನಸಭಾ ಕ್ಷೇತ್ರದ ಗ್ರಾಮ ಪಂಚಾಯತಿಗಳಲ್ಲಿ ಚುನಾವಣಾ ಪ್ರಚಾರ ನಡೆಸುವ ಸಂದರ್ಭದಲ್ಲಿ ಮಾತನಾಡಿ, ನಾನು ಕಡಿಮೆ ಮಾತನಾಡುತ್ತೇನೆ. ಮಣ ಮಾತಿಗಿಂತ ಕಣ ಕೃತಿ ಲೇಸು ಎಂಬ ಮಾತನ್ನು ನಂಬಿದವನು. ನನ್ನ ಜಿಲ್ಲೆಯನ್ನು ಅಭಿವೃದ್ಧಿಪಡಿಸಬೇಕೆಂದು ಬಂದಿದ್ದೇನೆ ಎಂದರು.

ಜಿಲ್ಲೆಯಲ್ಲಿ ಅನೇಕ ಪ್ರವಾಸಿತಾಣಗಳು, ಪುಣ್ಯಕ್ಷೇತ್ರಗಳಿವೆ. ಪ್ರವಾಸೋದ್ಯಮ ಉತ್ತೇಜಿಸಲು ಟೂರಿಸ್ಡ್ ಸರ್ಕ್ಯೂಟ್ ರೂಪಿಸಬೇಕಿದೆ. ಕೇಂದ್ರದಿಂದ ವಿಶೇಷ ಅನುದಾನ ತಂದು ಪ್ರವಾಸಿ ಸ್ಥಳಗಳನ್ನು ಅಭಿವೃದ್ಧಿ ಪಡಿಸುತ್ತೇನೆ. ನೀರಾವರಿ ಯೋಜನೆಗಳಿಗೆ ಒತ್ತು ನೀಡುತ್ತೇನೆ ಎಂದು ಹೇಳಿದರು.

ಎಲ್ಲಾ ವರ್ಗದ ಹಿತ ಕಾಯುವ ಪಕ್ಷ ಕಾಂಗ್ರೆಸ್. ಗ್ಯಾರಂಟಿ ಯೋಜನೆಗಳು ಎಲ್ಲಾ ವರ್ಗದರನ್ನು ತಲುಪುತ್ತಿವೆ. ಕಾಂಗ್ರೆಸ್ ನ ಜನಪರ ಕಾರ್ಯಕ್ರಮಗಳಿಗೆ  ಜನಮನ್ನಣೆ ಸಿಗಲಿದ್ದು ಈ ಬಾರಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ ಎಂದರು.

ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿದ್ದಂತೆ ಬೆಳೆ ವಿಮೆ, ಕನಿಷ್ಠ ಬೆಂಬಲ ಬೆಲೆ ಜಾರಿಗೆ ತಂದು ರೈತಪರ ಆಡಳಿತ ನೀಡಲಾಗುತ್ತದೆ. ಬಡ ಮಹಿಳೆಯರಿಗೆ ವರ್ಷಕ್ಕೆ 1 ಲಕ್ಷ ನೀಡಲಾಗುವುದು. ಗೃಹಲಕ್ಷ್ಮಿ ಜೊತೆಗೆ ಮಹಾಲಕ್ಷ್ಮಿ ಕೂಡ ಮಹಿಳೆಯರ ಮನೆಬಾಗಿಲಿಗೆ ತಲುಪಲಿದೆ. ಇದರಿಂದ ರಾಜ್ಯದ  ಮಹಿಳೆಯರಿಗೆ ಪ್ರತಿ ವರ್ಷಕ್ಕೆ 1.24 ಲಕ್ಷ ರೂ. ಮನೆಯ ಯಜಮಾನಿಗೆ ಸಿಗಲಿದೆ ಎಂದು ಹೇಳಿದರು.

ನುಡಿದಂತೆ ನಡೆದ ಪಕ್ಷ ಅಂದರೆ ಅದು ಕಾಂಗ್ರೆಸ್. ಸರ್ವರ ಹಿತ ಕಾಯುವುದರ ಜೊತೆಗೆ ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ನನಗೆ ಆಶೀರ್ವದಿಸಿ ಕಾಂಗ್ರೆಸ್ ಬೆಂಬಲಿಸಿ ಎಂದು ಕರೆಕೊಟ್ಟರು.

ಬರದಲ್ಲೂ ನೆಮ್ಮದಿ ಬದುಕು: ರವಿಶಂಕರ್

ರಾಜ್ಯದಲ್ಲಿ ತೀವ್ರವಾಗಿ ಬರ ಆವರಿಸಿದೆ. ಆದರೂ ಜನ ನೆಮ್ಮದಿಯಿಂದ ಜೀವನ ಸಾಗಿಸುತ್ತಿದ್ದಾರೆ ಎಂದರೆ ಅದಕ್ಕೆ ಕಾಂಗ್ರೆಸ್ ನ ಗ್ಯಾರಂಟಿ ಯೋಜನೆಗಳು ಕಾರಣ. ರಾಜ್ಯದಲ್ಲಿ ಗ್ಯಾರಂಟಿ ಕೊಟ್ಟಂತೆ ಇಡೀ ದೇಶದ ಜನರಿಗೆ ಗ್ಯಾರಂಟಿ ಕೊಡಲು ಕಾಂಗ್ರೆಸ್ ನಿರ್ಧರಿಸಿದೆ. ಜನರು ಕಾಂಗ್ರೆಸ್ ಗೆ ಆಶೀರ್ವದಿಸಿ ಗ್ಯಾರಂಟಿ ಜಾರಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.

ತಾಲೂಕಿನ ರಸ್ತೆಗಳ ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ಕ್ಷೇತ್ರದ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡಿದೆ. ತಾಲೂಕಿನ ಅಭಿವೃದ್ಧಿ ಕಾರ್ಯಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಎಲ್ಲಾ ರೀತಿಯ ಸಹಕಾರ ನೀಡುತ್ತಿದ್ದಾರೆ. ಈಗ ಅವರ ಕೈ ಬಲಪಡಿಸಲು ಜನರು ಕಾಂಗ್ರೆಸ್ ಬೆಂಬಲಿಸಬೇಕು ಎಂದರು.

ಸ್ವಾಭಿಮಾನವನ್ನು ಮತ್ತೆ ಗೆಲ್ಲಿಸಿ: ಮರಿತಿಬ್ಬೇಗೌಡ

ಎಲ್ಲರ ಹಿತ ಕಾಯುವ ಪಕ್ಷ ಕಾಂಗ್ರೆಸ್. ರೈತ ವಿರೋಧಿ ಪಕ್ಷ ಬಿಜೆಪಿ. ಸಂವಿಧಾನ, ಪ್ರಜಾಪ್ರಭುತ್ವ ಉಳಿವಿಗಾಗಿ ಕಾಂಗ್ರೆಸ್ ಅನ್ನು ಬೆಂಬಲಿಸಬೇಕು. ಸ್ವಾಭಿಮಾನದ ಚುನಾವಣೆ ಇದಾಗಿದ್ದು, ಜಿಲ್ಲೆಯ ಜನರ ಸ್ವಾಭಿಮಾನ ಮತ್ತೆ ಗೆಲ್ಲಬೇಕು ಎಂದು ವಿಧಾನಪರಿಷತ್ ಮಾಜಿ ಸದಸ್ಯ ಮರಿತಿಬ್ಬೇಗೌಡ ಹೇಳಿದರು.

ಕೆ.ಆರ್.ನಗರದಲ್ಲಿ ಪ್ರಚಾರ

ಮಂಡ್ಯ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡ (ಸ್ಟಾರ್ ಚಂದ್ರು) ಅವರು ಕೆ.ಆರ್.ನಗರದ ತಾಲೂಕಿನ ಹಲವೆಡೆಗಳಲ್ಲಿ ಚುನಾವಣಾ ಪ್ರಚಾರ ನಡೆಸಿ ಮತಯಾಚಿಸಿದರು. ಮುಂಜನಹಳ್ಳಿಯ ಅರಕೆರೆ ಬಸವೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಪ್ರಚಾರ ಆರಂಭಿಸಿದರು. ಭೇರ್ಯ, ಮೇಲೂರು, ತಂದ್ರೆ, ಕರ್ಪೂರವಳ್ಳಿ, ಶೀಗವಾಳು, ಹರದನಹಳ್ಳಿ, ಹೊನ್ನೇನಹಳ್ಳಿ, ಲಕ್ಷ್ಮೀಪುರ, ಸಾಲಿಗ್ರಾಮ, ಅಂಕನಹಳ್ಳಿ, ನರಚನಹಳ್ಳಿ, ಮಿರ್ಲೆ, ಹೊಸೂರು, ಕುಪ್ಪೆ, ಹೊಸಕೋಟೆ, ಮಾಯಿಗೌಡನಹಳ್ಳಿ ಸೇರಿದಂತೆ ಹಲವೆಡೆ ಮತಯಾಚಿಸಿದರು.

ಈ ವೇಳೆ ಶಾಸಕ ಡಿ.ರವಿಶಂಕರ್, ವಿಧಾನಪರಿಷತ್ ಮಾಜಿ ಸದಸ್ಯ ಮರಿತಿಬ್ಬೇಗೌಡ, ಜಿಪಂ ಮಾಜಿ ಸದಸ್ಯರಾದ ಸಿ.ಪಿ.ರಮೇಶ್‌ ಸೇರಿದಂತೆ ನೂರಾರು ಕಾರ್ಯಕರ್ತರು ಇದ್ದರು.

ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ   

ಮಂಡ್ಯ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡ (ಸ್ಟಾರ್ ಚಂದ್ರು) ಅವರು ಕೆ.ಆರ್.ನಗರ ವಿಧಾನಸಭಾ ಕ್ಷೇತ್ರದ ಹೊನ್ನೇನಹಳ್ಳಿಯಲ್ಲಿ ಬಾಬಾಸಾಹೇಬ್ ಡಾ ಬಿ.ಆರ್.ಅಂಬೇಡ್ಕರ್ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!