ಐಎಎಸ್ ಅಧಿಕಾರಿ, ಮಂಡ್ಯ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ನಿರ್ದೇಶಕಿ ಲತಾ ಕುಮಾರಿ ಅವರ ವರ್ಗಾವಣೆ ರದ್ದುಪಡಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ವಿಕಲಚೇತನರ ಹಾಗೂ ವಿವಿಧೋದ್ದೇಶ ಮತ್ತು ಗ್ರಾಮೀಣ, ನಗರ ಪುನರ್ವಸತಿ ಕಾರ್ಯಕರ್ತರು ಮಂಡ್ಯದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.
ಮಂಡ್ಯ ನಗರದ ಸರ್ ಎಂ ವಿಶ್ವೇಶ್ವರಯ್ಯ ಪ್ರತಿಮೆ ಬಳಿಯಿಂದ ಮೆರವಣಿಗೆ ಹೊರಟ ಒಕ್ಕೂಟದ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿ ಐಎಎಸ್ ಅಧಿಕಾರಿ ಲತಾ ಕುಮಾರಿ ರವರ ವರ್ಗಾವಣೆ ಆದೇಶ ರದ್ದುಪಡಿಸುವಂತೆ ಒತ್ತಾಯಿಸಿದರು.

ಇಲಾಖೆಯಲ್ಲಿ ವಿಕಲಚೇತನರ ಕಲ್ಯಾಣ ಯೋಜನೆಗಳು ಸ್ವಯಂಸೇವಾ ಸಂಸ್ಥೆ ಮೂಲಕ ಜಾರಿಯಾಗುತ್ತಿದ್ದವು, ಅದನ್ನ ತಡೆಗಟ್ಟಿದ ನಿರ್ದೇಶಕಿ ಲತಾ ಕುಮಾರಿ ಸ್ವಯಂ ಸೇವಾ ಸಂಸ್ಥೆಗಳ ಹಗಲು ದರೋಡೆಗೆ ಕಡಿವಾಣ ಹಾಕಿ ಯೋಜನೆಗಳನ್ನು ಆನ್ ಲೈನ್ ಮೂಲಕ ಜಾರಿಗೆ ಕ್ರಮ ವಹಿಸಿದ್ದಾರೆ, ಅಲ್ಲದೆ ಪಾರದರ್ಶಕ ಆಡಳಿತಕ್ಕೆ ಮುಂದಾಗಿದ್ದು ಇವರ ದಕ್ಷ ಆಡಳಿತ ಹಲವರ ಕಣ್ಣು ಕೆಂಪಾಗಿಸಿದ್ದು ಹಾಗಾಗಿ ಪಟ್ಟಭದ್ರರು ಲಾಭಿ ನಡೆಸಿ ಅಧಿಕಾರಿಯನ್ನು ವರ್ಗಾವಣೆ ಮಾಡಿಸಿದ್ದಾರೆ, ಕೂಡಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ವರ್ಗಾವಣೆ ಆದೇಶ ರದ್ದು ಮಾಡಿ ಸದರಿ ಇಲಾಖೆಯಲ್ಲಿ ಮುಂದುವರೆಸುವಂತೆ ಪ್ರತಿಭಟನಾಕಾರರು ಒತ್ತಾಯಿಸಿದರು.
ಕಳೆದ 15 ವರ್ಷದಿಂದ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಿಕಲಚೇತನರ ಹಾಗೂ ವಿವಿಧೋದ್ದೇಶ ಮತ್ತು ಗ್ರಾಮೀಣ ಪುನರ್ವಸತಿ,ನಗರ ಪುನರ್ವಸತಿ ಕಾರ್ಯಕರ್ತರ ಸೇವೆಯನ್ನುವಿಶೇಷ ನಿಯಮಾವಳಿ ರಚಿಸಿ ಖಾಯಂ ಮಾಡಬೇಕು, ನಿವೃತ್ತಿ ವೇಳೆ ಇಡಿ ಗಂಟು ನೀಡಬೇಕು, ಮಹಿಳಾ ಕಾರ್ಯಕರ್ತರಿಗೆ ವೇತನ ಸಹಿತ ಹೆರಿಗೆ ರಜೆ ನೀಡಬೇಕು, ಗ್ರಾಮೀಣ ಪುನರ್ವಸತಿ ಯೋಜನೆ ಮಾರ್ಗಸೂಚಿಯನ್ನು ತಿದ್ದುಪಡಿ ಮಾಡಬೇಕು ಎಂದು ಒತ್ತಾಯಿಸಿದರು.
ಒಕ್ಕೂಟದ ಜಿಲ್ಲಾಧ್ಯಕ್ಷ ಆರ್.ಎಸ್ ಮಹದೇವಪ್ಪ, ರಾಜ್ಯ ಸಂಚಾಲಕ ಜೆ. ದೇವರಾಜು, ಜಿಲ್ಲಾ ಗೌರವಾಧ್ಯಕ್ಷ ಎಂ. ಎಚ್ ಗಿರಿ ಗೌಡ, ಜಿಲ್ಲಾ ಕಾರ್ಯದರ್ಶಿ ಜೆ. ಎಸ್ ಕೃಷ್ಣ, ಬೋರೇಗೌಡ ಪ್ರತಿಭಟನೆಯ ನೇತೃತ್ವ ವಹಿಸಿದ್ದರು




