Monday, November 23, 2026

ಪ್ರಾಯೋಗಿಕ ಆವೃತ್ತಿ

ಕೆ.ಬಿ.ಗಣಪತಿ ಅಗಲಿಕೆ ಪತ್ರಿಕೋದ್ಯಮಕ್ಕೆ ಅಪಾರ ನಷ್ಟ : ಕೆ.ಟಿ.ಹನುಮಂತು

ಮೈಸೂರು ಮಿತ್ರ ಹಾಗೂ ಸ್ಟಾರ್ ಆಫ್ ಮೈಸೂರು ದಿನಪತ್ರಿಕೆಗಳ ಸಂಸ್ಥಾಪಕ ಸಂಪಾದಕರಾದ ಕೆ.ಬಿ.ಗಣಪತಿ ಅವರ ಅಗಲಿಕೆ ಪತ್ರಿಕಾ ಕ್ಷೇತ್ರಕ್ಕೆ ಅಪಾರ ನಷ್ಟವಾಗಿದೆ ಎಂದು ಅಸೋಸಿಯೇಷನ್ ಆಫ್ ಅಲಯನ್ಸ್ ಇಂಟರ್‌ನ್ಯಾಷನಲ್ ಕ್ಲಬ್‌ನ ಸೌತ್ ಮಲ್ಟಿಪಲ್ ಕೌನ್ಸಿಲ್‌ನ ಅಧ್ಯಕ್ಷ ಕೆ.ಟಿ.ಹನುಮಂತು ವಿಷಾದಿಸಿದರು.

ಮಂಡ್ಯ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಜಿಲ್ಲಾ ಕೃಷಿಕ ಅಲಯನ್ಸ್ ಸಂಸ್ಥೆ ಹಾಗೂ ಪ್ರತಿಭಾಂಜಲಿ ಸುಗಮ ಸಂಗೀತ ಅಕಾಡೆಮಿ ಇವರ ಸಂಯುಕ್ತಾಶ್ರಯದಲ್ಲಿ ಸೋಮವಾರ ಮಂಡ್ಯ ನಗರದ ಕಾರ್ಯನಿರತ ಪತ್ರಕರ್ತರ ಸಂಘದ ಸಭಾಂಗಣದಲ್ಲಿ ಆಯೋಜಿಸಿದ್ದ ಇತ್ತೀಚೆಗೆ ಅಗಲಿದ ಮೈಸೂರು ಮಿತ್ರ ಹಾಗೂ ಸ್ಟಾರ್ ಆಫ್ ಮೈಸೂರು ದಿನಪತ್ರಿಕೆಗಳ ಸಂಸ್ಥಾಪಕ ಸಂಪಾದಕರಾದ ಕೆ.ಬಿ.ಗಣಪತಿ ಅವರ ನುಡಿನಮನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಕೊಡಗು ಜಿಲ್ಲೆಯಲ್ಲಿ ಗಣಪತಿ ಅವರು ಹುಟ್ಟಿದ್ದರೂ ಅವರ ಕಾರ್ಯ ಕ್ಷೇತ್ರ ಮೈಸೂರು ಆಗಿತ್ತು. ಬಾಲ್ಯದಿಂದಲೇ ಸಂಸ್ಕಾರವಂತರಾಗಿದ್ದ ಕೆಬಿಜಿ ರವರು, ವಕೀಲಿಕೆ ಮೂಲಕ ವೃತ್ತಿ ಜೀವನ ಆರಂಭಿಸಿದರೂ ಸಹ ಅವರನ್ನು ಪತ್ರಿಕೋದ್ಯಮ ಕೈ ಬೀಸಿ ಕರೆಯಿತು. ಹಾಗಾಗಿ ಮುಂಬೈನಲ್ಲಿ ಪತ್ರಿಕೋದ್ಯಮದ ಡಿಪ್ಲೊಮೋ ಮುಗಿಸಿ, ಆ ಕಾಲದಲ್ಲೇ ಇಂಡಿಯನ್ ಎಕ್ಸ್ಪ್ರೆಸ್ ಪತ್ರಿಕೆಯಲ್ಲಿ ಸಹ ಸಂಪಾದಕರಾಗಿ ಕಾರ್ಯನಿರ್ವಹಿಸುವ ಮೂಲಕ ಹೆಸರು ಮಾಡಿದರು. ನಂತರ ಹಲವು ಪತ್ರಿಕೆಗಳಲ್ಲಿ ಕೆಲಸ ಮಾಡಿದ ತರುವಾಯ ಮೈಸೂರಿಗೆ ಬಂದು ೧೯೭೮ರಲ್ಲಿ ಸ್ಟಾರ್ ಆಫ್ ಮೈಸೂರು ಪತ್ರಿಕೆಯನ್ನು ಆಂಗ್ಲ ಭಾಷೆಯಲ್ಲಿ ಸ್ಥಾಪಿಸಿ, ೧೯೮೦ರಲ್ಲಿ ಮೈಸೂರು ಮಿತ್ರ ಕನ್ನಡ ಪತ್ರಿಕೆಯನ್ನು ಸ್ಥಾಪಿಸಿ, ಐದು ಜಿಲ್ಲೆಗೆ ವಿಸ್ತರಣೆ ಮಾಡಿ, ಎರಡು ಪತ್ರಿಕೆಗಳನ್ನು ಓದುಗರ ಸದಭಿರುಚಿಗೆ ತಕ್ಕಂತೆ ನಡೆಸಿಕೊಂಡು ಬಂದ ಹೆಗ್ಗಳಿಗೆ ಅವರಿಗೆ ಸಲ್ಲುತ್ತದೆ ಎಂದು ಸ್ಮರಿಸಿದರು.

ಹಿರಿಯ ಪತ್ರಕರ್ತ ಕೆ.ಎನ್.ರವಿ ಮಾತನಾಡಿ, ಕೆ.ಬಿ.ಗಣಪತಿ ಅವರನ್ನು ಹತ್ತಿರದಿಂದ ಬಲ್ಲವನು ನಾನು. ಮೈಸೂರು ಮಿತ್ರ ದಿನಪತ್ರಿಕೆಯಲ್ಲಿ ಹಲವು ವರ್ಷ ಹಾಗೂ ಆಂದೋಲನ ದಿನಪತ್ರಿಕೆಯಲ್ಲಿ ಹಲವು ವರ್ಷ ಕಾರ್ಯನಿರ್ವಹಿಸಿದ್ದೆ. ಆಂದೋಲನ ಪತ್ರಿಕೆಯ ರಾಜಶೇಖರ ಕೋಟಿ ಅವರಿಂದ ಸಾಮಾಜಿಕ ಕಳಕಳಿ ಬಗ್ಗೆ ಕಲಿತರೆ ಗಣಪತಿ ಅವರಿಂದ ಶಿಸ್ತು, ಪ್ರಾಮಾಣಿಕತೆ ಹಾಗೂ ಸಮಾಜಿಕ ಬದ್ಧತೆಯನ್ನು ನಾನು ಸೇರಿದಂತೆ ಹಲವು ಪತ್ರಕರ್ತರು ಕಲಿತಿದ್ದೇವೆ ಎಂದು ಹೇಳಿದರು.

ಮಂಡ್ಯ ಜಿಲ್ಲಾ ಕಾರ್ಯನಿರತ ಪತ್ರತಕರ್ತರ ಸಂಘದ ಅಧ್ಯಕ್ಷ ಕೆ.ಎನ್.ನವೀನ್‌ಕುಮಾರ್ ಮಾತನಾಡಿ, ಗಣಪತಿ ಅವರದ್ದು ಪ್ರತಿ ಪತ್ರಕರ್ತರನ್ನು ಆಕರ್ಷಿಸುವ ವ್ಯಕ್ತಿತ್ವವಾಗಿತ್ತು. ಇಂದು ಒಂದು ಪತ್ರಿಕೆ ನಡೆಸುವುದು ಬಹಳ ಕಷ್ಟ. ಆದರೆ ೧೯೭೫ರಿಂದ ನಿರಂತರವಾಗಿ ಎರಡು ಪತ್ರಿಕೆಗಳನ್ನು ಯಶಸ್ವಿಯಾಗಿ ನಡೆಸುತ್ತಾ ಬಂದಿರುವುದು ಸಾಮಾನ್ಯ ವಿಷಯವಲ್ಲ ಎಂದರು.

ಇದೇ ಸಂದರ್ಭದಲ್ಲಿ ಗಾಯಕಿ ಐಶ್ವರ್ಯ ಎಚ್.ಎಸ್.ವೆಂಕಟೇಶಮೂರ್ತಿ ರಚನೆಯ ತೂಗು ಮಂಚದಲ್ಲಿ ಕೂತು’ ಗೀತೆಯನ್ನು ಹಾಡಿ ಗೀತನಮನ ಸಲ್ಲಿಸಿದರು.

ವೇದಿಕೆಯಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ನವೀನ್ ಚಿಕ್ಕಮಂಡ್ಯ, ಖಜಾಂಚಿ ಆರ್.ಎನ್.ನಂಜುಂಡಸ್ವಾಮಿ, ಹಿರಿಯ ಪತ್ರಕರ್ತ ಕಬ್ಬನಹಳ್ಳಿ ಶಂಭು, ಪ್ರತಿಭಾಂಜಲಿ ಡೇವಿಡ್, ಅಸೋಸಿಯೇಷನ್ ಆಫ್ ಅಲಯನ್ಸ್ ಉಪರಾಜ್ಯಪಾಲ ಚಂದ್ರಶೇಖರ್, ಮೈಸೂರುಮಿತ್ರ ಜಿಲ್ಲಾ ವರದಿಗಾರ ಎಂ.ಕೆ.ಮೋಹನ್‌ರಾಜ್ ಸೇರಿದಂತೆ ಹಲವು ಮಂದಿ ಪತ್ರಕರ್ತರು, ವಿವಿಧ ಸಂಘಟನೆಯ ಮುಖಂಡರು ಉಪಸ್ಥಿತರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ