ಅತಿಯಾದ ಮಳೆಯಿಂದ ಮನೆಯ ಗೋಡೆ ಕುಸಿತಗೊಂಡು ಹಸುವನ್ನು ಕಳೆದುಕೊಂಡ ರೈತನ ನೆರವಿಗೆ ಧಾವಿಸಿ ಸರ್ಕಾರದಿಂದ ಪರಿಹಾರ ದೊರಕಿಸಿ ಕೊಡಲು ಸಹಾಯ ಮಾಡುವುದರ ಜೊತೆಗೆ ವೈಯಕ್ತಿಕವಾಗಿ 10 ಸಾವಿರ ರೂ. ಪರಿಹಾರ ನೀಡಿದ ಮಂಡ್ಯ ರಕ್ಷಣಾ ವೇದಿಕೆಯ ಶಂಕರ್ ಬಾಬು ಅವರನ್ನು ಮಂಡ್ಯ ರೈತರ ಶಾಲೆ ಸಂಸ್ಥಾಪಕ ಪ್ರೊ.ಸತ್ಯಾಮೂರ್ತಿ ಅವರು ಸನ್ಮಾನಿಸಿ ಅಭಿನಂದಿಸಿದರು.
ಇತ್ತೀಚೆಗೆ ಸುರಿದ ಮಳೆಯಿಂದಾಗಿ ಶ್ರೀರಂಗಪಟ್ಟಣ ತಾಲ್ಲೂಕು ಕೆ.ಶೆಟ್ಟಹಳ್ಳಿ ಹೋಬಳಿಯ ಮಿಣಜಿಬೋರನಕೊಪ್ಪಲು ಗ್ರಾಮದ ರೈತ ಎನ್.ರವಿಕುಮಾರ್ ಅವರ ಮನೆಯ ಗೋಡೆ ಕುಸಿದು ಬಿದ್ದಿತ್ತು, ಇದರಿಂದಾಗಿ ಆತ ಸಾಕಿ, ಸಲುಹಿದ್ದ ಹಸುವು ಸಾವನ್ನಪ್ಪಿತ್ತು. ಈ ಸಂದರ್ಭದಲ್ಲಿ ಸಂತ್ರಸ್ತ ರೈತನ ನೆರವಿಗೆ ಸರ್ಕಾರ ಯಾವ ಇಲಾಖೆಯ ಅಧಿಕಾರಿಗಳು ಧಾವಿಸಿರಲಿಲ್ಲ. ಆದರೆ ವಿಷಯ ತಿಳಿದ ಶಂಕರ್ ಬಾಬು, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಈ ಪ್ರಕರಣವನ್ನು ಸರ್ಕಾರಿ ಅಧಿಕಾರಿಗಳ ಗಮನಕ್ಕೆ ತಂದುದ್ದಲ್ಲೇ, ವೈಯಕ್ತಿಕವಾಗಿ ಸಂತ್ರಸ್ಥ ರೈತನಿಗೆ 10 ಸಾವಿರ ರೂ. ಪರಿಹಾರ ನೀಡಿದ್ದರು, ಈ ಕಾರ್ಯವನ್ನು ಶ್ಲಾಘಿಸಿದ ಪ್ರೊ.ಸತ್ಯಮೂರ್ತಿ ಅವರನ್ನು ಶಂಕರ್ ಬಾಬು ಅವರನ್ನು ಅಭಿಮಾನದಿಂದ ಸನ್ಮಾಸಿ, ಅಭಿನಂದಿಸಿದ್ದಾರೆ.
ಸರ್ಕಾರಿ ಅಧಿಕಾರಿಗಳು ಮಾಡಬೇಕಾದ ಕೆಲಸವನ್ನು ಸಂಘ ಸಂಸ್ಥೆ ಒಬ್ಬ ವ್ಯಕ್ತಿ ಮಾಡಿರುವುದು ಅಭಿಮಾನ ಮೂಡಿಸುವಂತಿದ್ದು, ಇಂತಹ ಕಾರ್ಯಗಳು ಎಲ್ಲೆಡೆ ನಡೆಯಲಿ ಎಂದು ಪ್ರೊ.ಸತ್ಯಮೂರ್ತಿ ಆಶಿಸಿದ್ದಾರೆ.




