Saturday, November 21, 2026

ಪ್ರಾಯೋಗಿಕ ಆವೃತ್ತಿ

ಕ್ಷಯರೋಗ ಮುಕ್ತ ಭಾರತ ನಿರ್ಮಾಣಕ್ಕೆ ಕೈಜೋಡಿಸಿ

2025ರ ವೇಳೆಗೆ ಕ್ಷಯ ರೋಗವನ್ನು ದೇಶದಲ್ಲಿ ಕೊನೆಗಾಣಿಸಿ, ಕ್ಷಯ ಮುಕ್ತ ಭಾರತ ಎಂದು ಘೋಷಿಸುವ ಗುರಿಯನ್ನು ಹೊಂದಲಾಗಿದೆ. ಎಲ್ಲರೂ ಈ ನಿಟ್ಟಿನಲ್ಲಿ ಕೈಜೋಡಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಧನಂಜಯ ತಿಳಿಸಿದರು.

ಮಂಡ್ಯ ನಗರದ ಜಿಲ್ಲಾ ಕ್ಷಯ ರೋಗ ನಿರ್ಮೂಲನಾ ಅಧಿಕಾರಿಗಳ ಕಚೇರಿಯಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ವತಿಯಿಂದ ಏರ್ಪಡಿಸಿದ್ದ ಕ್ಷಯ ರೋಗಿಗಳಿಗೆ ಪೌಷ್ಟಿಕ ಆಹಾರ ಕಿಟ್ ವಿತರಣೆ ಮಾಡಿ ಮಾತನಾಡಿದ ಅವರು,ಕ್ಷಯ ರೋಗಿಗಳಿಗೆ ಪೌಷ್ಠಿಕ ಆಹಾರ ಸೌಲಭ್ಯವನ್ನು ಒದಗಿಸಲು ಸ್ಥಳೀಯ ಸ್ವಯಂ ಸೇವಾ ಸಂಘ ಸಂಸ್ಥೆಗಳು, ಸ್ಥಳೀಯ ದಾನಿಗಳ ಮೂಲಕ ಪೌಷ್ಠಿಕ ಆಹಾರ ಕಿಟ್ ಗಳನ್ನು ತಯಾರಿಸಿ ನೀಡುವ ಕಾರ್ಯವನ್ನು ಮಾಡುತಿದ್ದೇವೆ ಎಂದರು.

ಸರ್ಕಾರದ ವತಿಯಿಂದ ಕ್ಷಯರೋಗಿಗಳಿಗೆ ನಿತ್ಯ ಪೋಷಣೆ ಯೋಜನೆಯಡಿ ಆರು ತಿಂಗಳವರಗೆ ರೂ.500ರಂತೆ ಸಹಾಯಧನವನ್ನು ನೀಡಲಾಗುತ್ತಿದೆ ಎಂದರು.

ಕ್ಷಯರೋಗ ಒಂದು ಪುರಾತನವಾದ ಕಾಯಿಲೆಯಾಗಿದ್ದು, ಪೌಷ್ಟಿಕಾಂಶದ ಕೊರತೆಯಿಂದ ಅನೇಕ ಜನರು ಈ ಕಾಯಿಲೆಯಿಂದ ನರಳುತ್ತಿರುವುದಕ್ಕೆ ಪ್ರಮುಖ ಕಾರಣ ಎಂದರು.

ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಮಂಡ್ಯ ಜಿಲ್ಲಾ ಸಭಾಧ್ಯಕ್ಷೆ ಮೀರಾ ಶಿವಲಿಂಗಯ್ಯ ಮಾತನಾಡಿ, ಕ್ಷಯ ರೋಗಿಗಳಿಗೆ ಔಷಧಿ ಎಷ್ಟು ಮುಖ್ಯವೋ ಪೌಷ್ಟಿಕ ಆಹಾರ ಕೊಡುವುದು ಅಷ್ಟೇ ಮುಖ್ಯ ಎಂದು ಹೇಳಿದರು.

ರೆಡ್ ಕ್ರಾಸ್ ಸಂಸ್ಥೆಯ ರಾಜ್ಯ ಶಾಖೆಯ ನಿರ್ದೇಶನದ ಮೇರೆಗೆ 10 ಮಂದಿ ಕ್ಷಯ ರೋಗಿಗಳನ್ನು ಗುರುತಿಸಿ ಕ್ಷಯ ರೋಗಿಗಳಿಗೆ ಆರು ತಿಂಗಳ ಕಾಲ ಆಹಾರ ಕಿಟ್ ವಿತರಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ಕ್ಷಯ ರೋಗಿಗಳ ಬಗ್ಗೆ ಸಾರ್ವಜನಿಕರಲ್ಲಿರುವ ಅಜ್ಞಾನ ತೆಗೆಯಬೇಕು.2025ರ ವೇಳೆಗೆ ಕ್ಷಯ ಮುಕ್ತ ಭಾರತಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದರು.

ಜಿಲ್ಲಾ ಕ್ಷಯರೋಗ ನಿರ್ಮೂಲನ ಅಧಿಕಾರಿ ಡಾ.ಎಂ.ಎನ್.ಆಶಾಲತಾ ಮಾತನಾಡಿ, ಮಂಡ್ಯ ಜಿಲ್ಲೆಯಲ್ಲಿ 795 ಮಂದಿ ಕ್ಷಯರೋಗಿಗಳಿದ್ದು, ಸಂಘ ಸಂಸ್ಥೆಗಳು ಹಾಗೂ ಸಮುದಾಯದ ಬೆಂಬಲದೊಂದಿಗೆ ಆಹಾರ ಕಿಟ್ ವಿತರಣೆ ಮಾಡುತ್ತಿದ್ದೇವೆ.ಸರ್ಕಾರದ ವತಿಯಿಂದ ಕ್ಷಯ ರೋಗಿಗಳ ಖಾತೆಗೆ ಪ್ರತಿ ತಿಂಗಳು 500 ರೂ ಗಳನ್ನು ಅವರ ಖಾತೆಗೆ ಡಿಬಿಟಿ ಮೂಲಕ ಜಮಾ ಮಾಡಲಾಗುತ್ತಿದೆ ಎಂದರು.

ಕ್ಷಯ ರೋಗಿಗಳು ಗುಣಮುಖರಾಗಬೇಕಾದರೆ ಪೌಷ್ಟಿಕ ಆಹಾರ ಬಹಳ ಮುಖ್ಯವಾದದ್ದು.ಈ ಮೂಲಕ ರೆಡ್ ಕ್ರಾಸ್ ಸಂಸ್ಥೆಯವರು ಹತ್ತು ಮಂದಿ ರೋಗಿಗಳನ್ನು ಆಯ್ಕೆ ಮಾಡಿಕೊಂಡು ಅವರ ಚಿಕಿತ್ಸೆ ಮುಗಿಯುವವರೆಗೂ ಆರು ತಿಂಗಳ ಕಾಲ ಅವರು ಕೊಡುವ ಆಹಾರ ಕಿಟ್ಟನ್ನು ನಮ್ಮ ಇಲಾಖೆಯಿಂದ ಅವರ ಮನೆ ಬಾಗಿಲಿಗೆ ತಲುಪಿಸುವ ಕಾರ್ಯ ಮಾಡಲಾಗುವುದು ಎಂದರು.

ಈ ಸಂದರ್ಭದಲ್ಲಿ ರೆಡ್ ಸಂಸ್ಥೆಯ ನಿರ್ದೇಶಕ ಕೆ.ಟಿ. ಹನುಮಂತು,ರಂಗಸ್ವಾಮಿ,ಪ್ರಸನ್ನ ಕುಮಾರ್, ಜಗದೀಶ್ ಹಾಜರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ