✍️ ಹರೀಶ್ ಗಂಗಾಧರ್
ಉತ್ತರಖಂಡದ ಸುರಂಗದಲ್ಲಿ ಇಷ್ಟು ದಿನ ಸಿಲುಕಿ ನರಳಿ ಕೊನೆಗೂ ಕಾರ್ಮಿಕರು ಜೀವಂತವಾಗಿ ಮರಳಿ ಬಂದಿದ್ದಾರೆ. ನಾವೆಲ್ಲಾ ಮನೆಯಲ್ಲಿ ದೀಪಾವಳಿ ಹಬ್ಬ ಆಚರಿಸುತ್ತಾ, ಪಟಾಕಿ ಹೊಡೆಯುತ್ತಾ, ವಿಶ್ವಕಪ್ ಫೈನಲ್ ನೋಡಲು ಉತ್ಸುಕರಾಗಿದ್ದಾಗ ಕಾರ್ಮಿಕರು ಸುರಂಗ ಕೊರೆಯುತ್ತಿದ್ದರು ಎಂಬುದನ್ನ ನಾವು ನೆನಪಿನಲ್ಲಿಟ್ಟುಕೊಳ್ಳಬೇಕು.
ಒಂದೆರಡು ದಿನಗಳಲ್ಲಿ ಮಳೆ ಹಿಮ ಬೀಳುವ ಸಾಧ್ಯತೆ ಇದ್ದಿದ್ದರಿಂದ ಈ ರಕ್ಷಣಾ ಕಾರ್ಯ ಇಂದೇ ಸುಖಾಂತ್ಯ ಕಂಡಿದ್ದು ಸಂತಸದ ಸುದ್ದಿ. ಆದರೆ ನಾವು ಕೇಳಿಕೊಳ್ಳಬೇಕಾದ ಮುಖ್ಯ ಪ್ರಶ್ನೆಗಳು ಕೆಲವಿವೆ.
1.ಭೂವೈಜ್ಞಾನಿಕ ಅಧ್ಯಯನದ ಪ್ರಕಾರ ಹಿಮಾಲಯ ಪರ್ವತ ಶ್ರೇಣಿ ಜಗತ್ತಿನ ಕಿರಿಯ ಮತ್ತು ಹದಿಹರೆಯದ ಪರ್ವತ ಶ್ರೇಣಿ. ಅದು ನಿರಂತರವಾಗಿ ಬೆಳೆಯುತ್ತ ತನ್ನ ರೂಪ ಬದಲಾಯಿಸಿಕೊಳ್ಳುತ್ತಾಲೇ ಇರುವುದರಿಂದ ಭೂಕುಸಿತ, ಭೂಕಂಪನ ಸರ್ವೇ ಸಾಮಾನ್ಯ. ಇಂತಹ ಸೂಕ್ಷ್ಮ ಭೂಪ್ರದೇಶದಲ್ಲಿ ಇಷ್ಟು ಬಿರುಸಿನ ಅಭಿವೃದ್ಧಿ ಬೇಕೆ ಎಂಬುದು?
2. ಹತ್ತಾರು ಹೈಡ್ರೋ ಎಲೆಕ್ಟ್ರಿಕ್ ಯೋಜನೆಗಳು ಮಾಡಿರುವ ಅನಾಹುತದ ಜೊತೆಗೆ ಗಂಗೋತ್ರಿ, ಯಮುನೋತ್ರಿ, ಬದ್ರಿನಾಥ್ ಮತ್ತು ಕೇದಾರನಾಥಕ್ಕೆ ಮಾರ್ಗ ಕಲ್ಪಿಸುವ 900 ಕಿಲೋಮೀಟರ್ ಉದ್ದದ ಚಾರ್ ಧಾಮ್ ಯಾತ್ರೆಗೆ ಅನುಕೂಲ ಮಾಡಿಕೊಡುವ ಈ ಯೋಜನೆ sustainable ಯೋಜನೆಯೆ? ನದಿ, ಪರ್ವತ, ಕಾನನಗಳನ್ನು ತೀವ್ರವಾಗಿ ಪ್ರಭಾವಿಸುವ ಈ ಯೋಜನೆಗಳು ಯಾರಿಗಾಗಿ?
3. ಹಿಮಾಲಯ ಪ್ರಾಂತ್ಯ ಮತ್ತೆಷ್ಟು ಪ್ರಹಾರ ಸಹಿಸಬಲ್ಲದು?
4. ಈ ಯೋಜನೆಗಳಿಗೆ ಸ್ಥಳೀಯರ ಸಮ್ಮತಿಯಿದೆಯೇ?
5. ಇಂತಹ ಯೋಜನೆಗಳಿಗೆ environmental clearance – ಪರಿಸರ ಪರವಾನಗಿ ಸಿಗುವುದಾದರೂ ಹೇಗೆ?
6. ಇಂತಹ ದುರ್ಗಮ ಪ್ರದೇಶಗಳಲ್ಲಿ ಶ್ರಮಿಸುವ ಶ್ರಮಿಕರಿಗೆ ಸಿಗುವ ವೇತನ ಮತ್ತು ಜೀವ ಸುರಕ್ಷತಾ ವಿಮಾ ಯಾವುದು? ಕಾರ್ಮಿಕರ ಸುರಕ್ಷತೆಗೆ ಯಾವ ಅಂತಾರಾಷ್ಟ್ರೀಯ ಶಿಷ್ಟಾಚಾರವನ್ನು ಮತ್ತು ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಲಾಗುತ್ತಿದೆ?
7. ಕಳೆದ ದಶಕಗಳಲ್ಲಿ ಭಾರತೀಯ ಹಿಮಾಲಯ ಪ್ರಾಂತ್ಯ ಎದುರಿಸುತ್ತಿರುವ ಬೃಹತ್ ದುರಂತಗಳನ್ನು ಸರ್ಕಾರಗಳು ಗಂಭೀರವಾಗಿ ಪರಿಗಣಿಸಿದೆಯೇ?
8. ಹಿಮಾಲಯ ಎಷ್ಟು ಹೈಡ್ರೋ ಪ್ರೊಜೆಕ್ಟ್ ಗಳನ್ನು, ಅಗಲವಾದ ಡಾಂಬರು ರಸ್ತೆಗಳನ್ನು, ಪರ್ವತಗಳ ಕತ್ತರಿಸುವಿಕೆ, ಕೊರೆಯುವಿಕೆಯನ್ನು, ನದಿಗೆಸೆದ ಕಾಮಗಾರಿಯ, ಪರ್ವತ ಭಾಗ್ನರಾಶಿಯನ್ನು ತಾಳಿಕೊಳ್ಳಬಹುದು?
9. ಕಾಂಟ್ರಾಕ್ಟ್, ಟೆಂಡರ್ ಲಾಬಿ, ಅಧಿಕಾರಿಗಳ ಹಣ ದಾಹಗಳನು ಮೀರಿ ಸರ್ಕಾರ EIA- Environment impact assessment ( ಪರಿಸರ ಪ್ರಭಾವ ಮೌಲ್ಯಮಾಪನವನ್ನು) ಪರಿಗಣಿಸುವುದೇ?
10. 2013ರಲ್ಲಾದ ಮಹಾಪ್ರವಾಹವನ್ನೇ ಕಾರಣವಾಗಿಟ್ಟುಕೊಂಡು ಈ ಬೃಹತ್ ಯೋಜನೆ ಶುರು ಮಾಡಿದ್ದು ನಮ್ಮ ದೇಶದ ಬಹು ದೊಡ್ಡ ವಿಪರ್ಯಾಸವಲ್ಲವೇ? ( ಎಲ್ಲರಿಗೂ ಬರ ಮತ್ತು ಪ್ರವಾಹವೆಂದರೆ ಇಷ್ಟ!)
11. ಕಳೆದ ಹದಿನೈದು ದಿನಗಳಲ್ಲಿ ರಕ್ಷಣಾ ಕಾರ್ಯದ ಕುರಿತು ಮುಖ್ಯವಾಹಿನಿಗಳು ಎಷ್ಟು ಗಂಟೆ ಚರ್ಚೆ ನಡೆಸಿದವು? ಸರ್ಕಾರದ ಅಭಿವೃದ್ಧಿ ಮಾದರಿಯನ್ನು ಪ್ರಶ್ನಿಸಿದವು? ಹಿಮಾಲಯದ ಪರಿಸರ ರಕ್ಷಣೆ ಪರವಾಗಿ ನಿಂತವು?
ನನಗೆ ಹಿಮಾಲಯದಲ್ಲಿ ನಡೆದಿರುವ ಬಿರುಸಿನ ಕಾಮಗಾರಿ ಮತ್ತು ಪಶ್ಚಿಮ ಘಟ್ಟದಲ್ಲಿ ಸಾಗಿರುವ “ಅಭಿವೃದ್ಧಿ” ಯೋಜನೆಗಳು ಎಂದಿಗೂ ಬೇರೆ ಬೇರೆ ಎಂದೇನಿಸಿಲ್ಲ…
ಕೊನೆಯ ಮಾತು ದೇಶದ ಸಾರಿಗೆ ಸಚಿವರನ್ನು ವೃದ್ಧ, ಕುರುಡು ತಂದೆ ತಾಯಿಯನ್ನು ತೀರ್ಥಯಾತ್ರೆಗೆ ಹೊತ್ತೊಯ್ದ ಶ್ರವಣಕುಮಾರನೆಂದು ಬಣ್ಣಿಸಲಾಗುತ್ತಿದ್ದರೂ, ಸುರಂಗದಲ್ಲಿ ಸಿಕ್ಕಿಬಿದ್ದ ಕಾರ್ಮಿಕರನ್ನು ರಕ್ಷಿಸಲು ವಿದೇಶದಿಂದ ಅರ್ನಾಲ್ಡ್ ದಿಕ್ಸ್ ಬರಬೇಕಾಯಿತು.




